Asianet Suvarna News Asianet Suvarna News

ಡಾ.ವಿಷ್ಣುವರ್ಧನ್ ಜನ್ಮದಿನೋತ್ಸವ; ಸ್ಯಾಂಡಲ್‌ವುಡ್ 'ಯಜಮಾನ'ನನ್ನು ಸ್ಮರಿಸಿದ ಅಭಿಮಾನಿಗಳು, ಗಣ್ಯರು

ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟಿಗೊಬ್ಬ ಹೀಗೆ ನಾನಾಬಿರುದುಗಳಿಂದ ಜನಪ್ರಿಯತೆ ಪಡೆದಿರುವ ಡಾ.ವಿಷ್ಣುವರ್ಧನ್ ಅವರ ಜನ್ಮದಿನ. ಸೆಪ್ಟಂಬರ್ 18 ವಿಷ್ಣುದಾದಾ ಅಭಿಮಾನಿಗಳಿಗೆ ವಿಶೇಷ ದಿನ. 

late kannada actor dr vishnuvardhan 72nd birth anniversary sgk
Author
First Published Sep 18, 2022, 10:04 AM IST

ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟಿಗೊಬ್ಬ ಹೀಗೆ ನಾನಾಬಿರುದುಗಳಿಂದ ಜನಪ್ರಿಯತೆ ಪಡೆದಿರುವ ಡಾ.ವಿಷ್ಣುವರ್ಧನ್ ಅವರ ಜನ್ಮದಿನ. ಸೆಪ್ಟಂಬರ್ 18 ವಿಷ್ಣುದಾದಾ ಅಭಿಮಾನಿಗಳಿಗೆ ವಿಶೇಷ ದಿನ. ವಿಷ್ಣುವರ್ಧನ್ ದೈಹಿಕವಾಗಿ ಇಲ್ಲದಿದ್ದರೂ ಅಭಿಮಾನಿಗಳ ಮನದಲ್ಲಿ ಇನ್ನು ಜೀವಂತ. ವಿಷ್ಣು ನೆನಪಲ್ಲೇ ಅಭಿಮಾನಿಗಳು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಅನ್ನದಾನ, ರಕ್ತದಾನ ಅನೇಕ ಸಾಮಾಜಿಕ ಸೇವೆಗಳ ಮೂಲಕ ವಿಷ್ಣುದಾದಾ ಅವರನ್ನು ನೆನೆಯುತ್ತಿದ್ದಾರೆ, ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ರಾಜ್ಯದಾದ್ಯಂತ ಅಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಷ್ಣುವರ್ಧನ್ ಫೋಟೋ, ವಿಡಿಯೋ ಶೇರ್ ಮಾಡಿ ವಿಭಿನ್ನ ರೀತಿಯಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. 

ಅಭಿಮಾನಿಗಳ ಪ್ರೀತಿಯ ಯಜಮಾನ ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 72ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ದುರಾದೃಷ್ಟವಶಾತ್ ಡಾ.ವಿಷ್ಣುವರ್ಧನ್ ಇಂದು ನಮ್ಮ ಜೊತೆ ಇಲ್ಲ. ದೈಹಿಕವಾಗಿ ಡಾ.ವಿಷ್ಣುವರ್ಧನ್ ನಮ್ಮೊಂದಿಗೆ ಇಲ್ಲದಿದ್ದರೂ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ವಿಷ್ಣುದಾದಾ ಅಜರಾಮರ. ಆದರೂ ಪ್ರೀತಿಯ ದಾದಾ ಇಲ್ಲ ಎನ್ನುವ ನೋವು ಯಾವಾಗಲೂ ಮಾಸುವಂತಹದ್ದಲ್ಲ. ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್​ ಸ್ಟುಡಿಯೋಗೆ ಅಭಿಮಾನಿಗಳು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಸ್ಟುಡಿಯೋದ ಹೊರಭಾಗದಲ್ಲಿ ವಿಷ್ಣು ಅವರ ಕಟೌಟ್​ಗಳನ್ನು ಹಾಕಲಾಗಿದೆ. ಈ ಮೂಲಕ ಸಾಹಸ ಸಿಂಹನನ್ನು ಫ್ಯಾನ್ಸ್ ನೆನೆಯುತ್ತಿದ್ದಾರೆ. 

ಡಾ.ವಿಷ್ಣುವರ್ಧನ್‌ರನ್ನು ಸ್ಮರಿಸಿದ ಗಣ್ಯರು

ಸಿಎಂ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿ, 'ನೂರಾರು ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ  ಜನರನ್ನು ರಂಜಿಸಿ, ಅಭಿಮಾನಿಗಳಿಂದ ಸಾಹಸ ಸಿಂಹ ಎಂಬ ಬಿರುದು ಪಡೆದ ಯಜಮಾನ ದಿವಂಗತ ವಿಷ್ಣುವರ್ಧನ್ ರವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು' ಎಂದು ಹೇಳಿದ್ದಾರೆ.

ಇನ್ನು ಸಂಸದ ಪ್ರತಾಪ್ ಸಿಂಹ ಕೂಡ ಟ್ವೀಟ್ ಮಾಡಿ ವಿಶ್ ವಿಷ್ಣುವರ್ಧನ್ ಅವರನ್ನು ಸ್ಮರಿಸಿದ್ದಾರೆ. 'ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಗೌರವ ನಮನಗಳು' ಎಂದು ಹೇಳಿದ್ದಾರೆ.

ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಸ್ಯಾಂಡಲ್ ವುಡ್ ಸಿರಿವಂತನನ್ನು ಸ್ಮರಿಸಿದ್ದಾರೆ. 'ಕನ್ನಡ ಚಿತ್ರಲೋಕದ ಪ್ರತಿಭಾನ್ವಿತ ಕಲಾವಿದ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಜಯಂತಿಯಂದು ಗೌರವದ ನಮನಗಳು. ಬಂಧನ, ಮುತ್ತಿನ ಹಾರ, ಯಜಮಾನ ಸೇರಿದಂತೆ ಸಾಮಾಜಿಕ ಸಂದೇಶಗಳನ್ನು ನೀಡುವ ಅವರ ಅನೇಕ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ನೆಲೆಯಾಗಿವೆ' ಎಂದು ಹೇಳಿದ್ದಾರೆ.

ಡಾ. ವಷ್ಣುವರ್ಧನ್, ಸೆಪ್ಟಂಬರ್ 18, 1950ರಲ್ಲಿ ಜನಿಸಿದರು. ಮೈಸೂರಿನಲ್ಲಿ ಜನಿಸಿದ ವಿಷ್ಣುವರ್ಧನ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ‘ವಂಶವೃಕ್ಷ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.  ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಸಿನಿಮಾ ದೊಡ್ಡ ಮಟ್ಟದ ಬ್ರೇಕ್ ತಂದುಕೊಟ್ಟ ಚಿತ್ರ. ‘ಭೂತಯ್ಯನ ಮಗ ಅಯ್ಯು’, ‘ಸಾಹಸ ಸಿಂಹ’, ‘ಬಂಧನ’, ‘ಹಬ್ಬ’, ‘ಜೀವನದಿ’, ‘ಯಜಮಾನ’, ‘ಸಿಂಹಾದ್ರಿಯ ಸಿಂಹ’, ‘ಆಪ್ತಮಿತ್ರ’, ಮುಂತಾದ ಅನೇಕ ಹಿಟ್ ಚಿತ್ರಗಳನ್ನು ಡಾ.ವಿಷ್ಣುವರ್ಧನ್ ನೀಡಿದರು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಡಾ.ವಿಷ್ಣುವರ್ಧನ್‌ ಅವರಿಗೆ ರಾಜ್ಯ ಪ್ರಶಸ್ತಿ, ಡಾ.ರಾಜ್‌ಕುಮಾರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. 

Follow Us:
Download App:
  • android
  • ios