ಕಡುಗಪ್ಪು ಬಣ್ಣದ ಮುದ್ದು ನಾಯಿ, ಕೈಯಲ್ಲೊಂದು ಸಿಗರೇಟು, ಆಕರ್ಷಕ ಟೇಬಲ್ಲು, ಪಕ್ಕ ವಂಶಿನಾದನ್‌. ಇಷ್ಟುನೋಡಿದರೆ ಪಾತ್ರ ಎಷ್ಟುಲೈವ್ಲಿಯಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಅದಕ್ಕೆ ತಕ್ಕಂತೆ ರಕ್ಷಿತ್‌ ಆ ಬಾಬ್ಬಿ ಸಿಂಹ ಪಾತ್ರವನ್ನು ಎಷ್ಟುಇಷ್ಟಪಟ್ಟಿದ್ದಾರೆ ಎಂದರೆ ಆ ಪಾತ್ರದ ಬಗ್ಗೆ ಅಳೆದು ತೂಗಿ ನಾಕು ಮಾತು ಹೇಳಿದರು.

‘ಬಾಬ್ಬಿ ನಂಗೆ ಹಳೆಯ ಪರಿಚಯ. ಉಳಿದವರು ಕಂಡಂತೆ ಸಿನಿಮಾದ ಪ್ರಶಸ್ತಿ ಸ್ವೀಕರಿಸಲು ಚೆನ್ನೈಗೆ ಹೋಗಿದ್ದಾಗ ಬಾಬ್ಬಿ ಜಿಗರ್‌ಥಂಡಾ ಚಿತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸಲು ಬಂದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಒಂದಲ್ಲಒಂದು ಸಿನಿಮಾದಲ್ಲಿ ನಟಿಸಬೇಕು ಎಂಬ ಮಾತು ನಡೆಯುತ್ತಿತ್ತು. ಆದರೆ ಆಗಿ ಬಂದಿರಲಿಲ್ಲ. ಈಗ ಈ ಚೆಂದದ ಪಾತ್ರದ ಮೂಲಕ ಆಸೆ ನೆರವೇರಿದೆ. ನನಗೆ ಕ್ಯಾರೆಕ್ಟರ್‌ ಒಳಗೆ ಹೋದರೆ ಮಾತ್ರ ನಟಿಸುವುದು ಸಾಧ್ಯ. ಆದರೆ ಆತ ಹಾಗಲ್ಲ, ಐದು ಆಪ್ಷನ್‌ ಕೊಡುತ್ತಾನೆ. ಸ್ಪಾಂಟೇನಿಯಸ್‌ ಆ್ಯಕ್ಟರ್‌ ಅವನು. ಒಂದು ದಿನವಂತೂ 24 ಗಂಟೆ ನಿರಂತರವಾಗಿ ಶೂಟಿಂಗ್‌ ಮಾಡಿದ್ದೇವೆ. ಅವನು ಏನೂ ಹೇಳದೆ ಬಹಳ ಚೆನ್ನಾಗಿ ನಟಿಸಿದ’ ಎನ್ನುತ್ತಾರೆ ರಕ್ಷಿತ್‌ ಶೆಟ್ಟಿ.

‘ರಕ್ಷಿತ್‌ ಶೆಟ್ಟಿಯವರ ಧರ್ಮ ಪಾತ್ರದ ಬದುಕಿನಲ್ಲಿ ಮಹತ್ವದ ಬದಲಾವಣೆ ತರುವ ಪಾತ್ರ ಅದು. ನಾನು ಹೇಗೆ ಕಲ್ಪಿಸಿಕೊಂಡಿದ್ದೆನೋ ಅದಕ್ಕಿಂತ ಎರಡು ಪಟ್ಟು ಚೆಂದವಾಗಿ ಅಭಿನಯಿಸಿದ್ದಾರೆ. ಇಬ್ಬರ ನಟನೆ ನೋಡಿ ಭಾರಿ ಖುಷಿಯಾಯಿತು. ಚಾರ್ಲಿ ಮತ್ತು ಬಾಬ್ಬಿ ಸಿಂಹ ಪಾತ್ರದ ಜತೆ ಇರುವ ನಾಯಿಯ ಕಾಂಬಿನೇಷನ್‌ ದೃಶ್ಯಗಳೂ ಮನಸ್ಸು ತಾಕುತ್ತವೆ. ಕೊಡೈಕೆನಾಲ್‌ನ ಎಸ್ಟೇಟ್‌ ಥರ ಇರುವ ಒಂದು ಕ್ಯಾಂಪಸ್‌ನಲ್ಲಿ ಈ ದೃಶ್ಯಗಳನ್ನು ಚಿತ್ರೀಕರಿಸಿದೆವು. ಇನ್ನು ಸುಮಾರು 15 ದಿನಗಳ ಶೂಟಿಂಗ್‌ ಮುಗಿಸಿದರೆ ನಮ್ಮ ಸಿನಿಮಾದ ಚಿತ್ರೀಕರಣ ಮುಗಿದಂತೆ’ ಎಂದಿದ್ದು ನಿರ್ದೇಶಕ ಕಿರಣ್‌ರಾಜ್‌ ಕೆ.

ರಕ್ಷಿತ್‌ ಶೆಟ್ಟಿಮತ್ತು ನಾಯಿ ಸೆಂಟಿಮೆಂಟು

777 ಚಾರ್ಲಿ ಚಿತ್ರೀಕರಣ ಶುರು ಆಗುವವರೆಗೆ ರಕ್ಷಿತ್‌ ಶೆಟ್ಟಿನಾಯಿಗಳಿಂದ ಕೊಂಚ ದೂರವೇ ಇದ್ದವರು. ಅದಕ್ಕೆ ಕಾರಣವಿದೆ. ಚಿಕ್ಕಂದಿನಲ್ಲಿ ರಕ್ಷಿತ್‌ ಬಳಿ ಎರಡು ನಾಯಿಗಳಿದ್ದವು. ಆ ನಾಯಿಗಳನ್ನು ಸಿಕ್ಕಾಪಟ್ಟೆಹಚ್ಚಿಕೊಂಡಿದ್ದರು. ದುರದೃಷ್ಟವಶಾತ್‌ ಆ ನಾಯಿಗಳು ತೀರಿಕೊಂಡವು. ಪುಟಾಣಿ ರಕ್ಷಿತ್‌ ಮನಸ್ಸಲ್ಲಿ ಆ ನೋವು ಉಳಿದುಹೋಯಿತು. ಹಾಗಾಗಿ ಮತ್ತೆ ಅಂಥಾ ನೋವಿನ ಅನುಭವ ಆಗುವುದು ಬೇಡ ಅಂತ ನಾಯಿಗಳಿಂದ ದೂರ ಉಳಿದಿದ್ದರು. ಯಾವಾಗ ಚಾರ್ಲಿ ಶುರುವಾಯಿತೋ ಅವತ್ತಿಂದ ಚಾರ್ಲಿ ಎಂಬ ನಾಯಿ ಜತೆ ಒಡನಾಟ ಶುರುವಾಗಿ ಮತ್ತೆ ನಾಯಿ ಜತೆ ಬದುಕುವುದನ್ನು ರೂಢಿ ಮಾಡಿಕೊಂಡಿದ್ದಾರೆ. ನಿಧಾನಕ್ಕೆ ನನ್ನ ಮತ್ತು ಚಾರ್ಲಿ ಕತೆಗಳನ್ನು ಹೇಳುತ್ತೇನೆ ಎನ್ನುವ ಭರವಸೆ ಕೂಡ ಕೊಡುತ್ತಾರೆ.