ಮಾರ್ಕ್‌ ಸಿನಿಮಾದ ಬಜೆಟ್‌ ದೊಡ್ಡದು. ಮ್ಯಾಕ್ಸ್‌ಗಿಂತ ಮೂರು ಪಟ್ಟು ದೊಡ್ಡದು. ನನ್ನ ಸಂಭಾವನೆಯ ಸ್ವಲ್ಪ ಭಾಗವನ್ನಷ್ಟೇ ತಗೊಂಡು ಉಳಿದದ್ದನ್ನು ಈ ಸಿನಿಮಾಗೆ ಇನ್‌ವೆಸ್ಟ್ ಮಾಡಿದ್ದೇನೆ ಎಂದರು ಕಿಚ್ಚ ಸುದೀಪ್‌.

- ‘ಬಿಲ್ಲರಂಗಭಾಷ’ ಸಿನಿಮಾದ ಬೃಹತ್‌ ಬಾಹುಳ್ಯ ನೋಡಿ ಇದು ಈ ವರ್ಷ ರಿಲೀಸ್‌ ಆಗೋದು ಕಷ್ಟ ಅನಿಸಿತು. ಮ್ಯಾಕ್ಸ್‌ ಸಿನಿಮಾ ಮಾಡುವಾಗ ನಿರ್ದೇಶಕ ವಿಜಯ್‌ ಕಾರ್ತಿಕೇಯ ಒಂದೊಳ್ಳೆ ಸ್ಟೋರಿ ಲೈನ್‌ ಹೇಳಿದ್ದರು. ಅದನ್ನೇ ಸಿನಿಮಾ ಮಾಡಿದರೆ ಈ ವರ್ಷವೇ ರಿಲೀಸ್‌ ಮಾಡಬಹುದು ಅಂದುಕೊಂಡು ತೀವ್ರಗತಿಯಲ್ಲಿ ಕೆಲಸಕ್ಕೆ ಚಾಲನೆ ನೀಡಿದೆ. ಈ ವರ್ಷ ಯಾವ ಮಟ್ಟಿಗೆ ಕೆಲಸ ಮಾಡಿದ್ದೇನೆ ಅಂತ ನೆನೆಸಿಕೊಂಡದೇ ಮೈ ನಡುಗುತ್ತದೆ. ನಿದ್ದೆ ಮಾಡಿ ಯಾವುದೋ ಕಾಲವಾದ ಹಾಗೆ ಅನಿಸುತ್ತದೆ.

- ಒಂದು ವರ್ಷದಲ್ಲಿ ಸಿನಿಮಾ ಮುಗಿಸುವುದರಿಂದ ನನಗೆ ಹಲವು ಪ್ರಯೋಜನಗಳಿವೆ. ಮುಖ್ಯವಾಗಿ ಎಷ್ಟೋ ಹಣ ಉಳಿಯುತ್ತದೆ. ದುಡ್ಡು ಹಾಕಿದ ನಿರ್ಮಾಪಕರಿಗೆ ಬಹಳ ಬೇಗ ಬಂಡವಾಳ ವಾಪಾಸ್‌ ಬರುತ್ತದೆ.

- ಸದ್ಯಕ್ಕೆ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ‘ಮಾರ್ಕ್‌’ ರಿಲೀಸ್‌ ಆಗುತ್ತಿದೆ. ಸಿನಿಮಾಗೆ ಬರುವ ಪ್ರತಿಕ್ರಿಯೆ ಗಮನಿಸಿ ಉಳಿದ ಭಾಷೆಗಳಲ್ಲೂ ಬಿಡುಗಡೆ ಮಾಡುತ್ತೇವೆ.

- 120 ದಿನಗಳ ಸಿನಿಮಾ ಶೂಟ್‌ನಲ್ಲಿ ಅನೇಕ ಪೋಷಕ ಕಲಾವಿದರ ಡೇಟ್‌ ಸಿಗೋದು ಕಷ್ಟವಿತ್ತು. ಅವರಿಗಾಗಿ ನಾನು ಕಾಂಪ್ರಮೈಸ್‌ ಮಾಡಿಕೊಂಡಿದ್ದೇನೆ. ಯೋಗಿ ಬಾಬು ಅವ್ರಿಗೆ ನಾಳೆ ಬೇರೆ ಶೂಟ್‌ ಇದೆಯಂತೆ, ಅವರ ಭಾಗ ಮುಗಿಸಿ ನಿಮ್ಮ ಪಾತ್ರದ ಶೂಟಿಂಗ್‌ ಮಾಡ್ತೀನಿ ಅಂತ ಎಷ್ಟೋ ಸಲ ನಿರ್ದೇಶಕರು ಬಂದು ರಿಕ್ವೆಸ್ಟ್ ಮಾಡಿದ್ದರು. ಪೋಷಕ ಪಾತ್ರಕ್ಕಾಗಿ ಹೀರೋ ಆದ ನಾನು ಕಾಂಪ್ರಮೈಸ್‌ ಮಾಡಿದ್ದು ಬಹಳ ಸಲ ಇತ್ತು.

- ಮಾರ್ಕ್‌ ಸಿನಿಮಾದ ಬಜೆಟ್‌ ದೊಡ್ಡದು. ಮ್ಯಾಕ್ಸ್‌ಗಿಂತ ಮೂರು ಪಟ್ಟು ದೊಡ್ಡದು. ನನ್ನ ಸಂಭಾವನೆಯ ಸ್ವಲ್ಪ ಭಾಗವನ್ನಷ್ಟೇ ತಗೊಂಡು ಉಳಿದದ್ದನ್ನು ಈ ಸಿನಿಮಾಗೆ ಇನ್‌ವೆಸ್ಟ್ ಮಾಡಿದ್ದೇನೆ. ಸಿನಿಮಾ ಲಾಭ ಮಾಡಿದರೆ ನಮಗೆ ಪಾಲು ಸಿಗುತ್ತದೆ. ನಷ್ಟವಾದರೆ ನಮಗೂ ನಷ್ಟವೇ. ಹಿಂದಿನಿಂದಲೂ ಕೆಲವು ಸಿನಿಮಾಗಳಲ್ಲಿ ಈ ರೀತಿ ಮಾಡುತ್ತಿದ್ದೇನೆ.

ಪವರ್‌ಫುಲ್‌ ಆಗಿ ಹಾಡಿದ್ದಾಳೆ

- ಮಗಳು ಸಾನ್ವಿ ಈ ಸಿನಿಮಾದಲ್ಲಿ ಹಾಡಿದ್ದಾಳೆ ಅನ್ನೋದು ಕೊನೆಯ ಹಂತದಲ್ಲಿ ಗೊತ್ತಾದದ್ದು. ಕೇಳಿದಾಗ ಪವರ್‌ಫುಲ್‌ ಆಗಿ ಹಾಡಿದ್ದಾಳೆ ಅನಿಸಿ ಬಹಳ ಖುಷಿ ಆಯ್ತು. ಸಂಗೀತ ನಿರ್ದೇಶಕ ಅಜನೀಶ್‌ ಬಳಿ, ‘ಇದನ್ನು ಸಿನಿಮಾದಲ್ಲಿ ಉಳಿಸಿಕೊಳ್ತೀರ’ ಅಂತ ಕೇಳಿದ್ದೆ. ‘ಖಂಡಿತವಾಗಿ ಸರ್‌. ಅಷ್ಟು ಚೆನ್ನಾಗಿ ಹಾಡಿದ್ದಾರೆ’ ಅಂದರು.

- ನನ್ನ ಪತ್ನಿ ಪ್ರಿಯಾ ಲೆಕ್ಕಾಚಾರದಲ್ಲಿ ಪಕ್ಕಾ. ಈ ಸಿನಿಮಾದ ವಿತರಣೆಯಲ್ಲಿ ಕೈಜೋಡಿಸಿದ್ದಾರೆ. ಇದರಲ್ಲಿ ನನ್ನ ಪಾತ್ರ ಇಲ್ಲ. ಅವರು ಕೂಡಿಟ್ಟ ಹಣವನ್ನು ಹೂಡಿಕೆ ಮಾಡಿದ್ದಾರೆ. ಮುಂದೆ ವಿತರಕಿಯಾಗಿ ಕೆಲಸ ಮಾಡುವ ಉತ್ಸಾಹ ಅವರಲ್ಲಿದೆ.

- ಅಹಂನ ಸುಳಿಯಲ್ಲಿ ಸಿಲುಕಿಲ್ಲ. ಸಿನಿಮಾರಂಗ ಚೆನ್ನಾಗಿರಬೇಕು, ಒಳ್ಳೆ ಸಿನಿಮಾ ಬರಬೇಕು ಅನ್ನೋದಷ್ಟೇ ಮನಸ್ಸಲ್ಲಿದೆ. ನನ್ನ ಸಿನಿಮಾ ಜೊತೆಗೆ ಬರುತ್ತಿರುವ ‘45’ ಸಿನಿಮಾ ಬಗ್ಗೆಯೂ ಒಳ್ಳೆಯ ಮಾತನ್ನೇ ಹೇಳುತ್ತೇನೆ. ಟ್ರೇಲರ್‌ನಲ್ಲಿ ಅವರ ಚಿತ್ರದ ತಾಂತ್ರಿಕತೆ ಅದ್ಭುತ ಅನಿಸಿತು. ಉಳಿದಂತೆ ನಾನು ಜುಲೈಯಲ್ಲೇ ಸಿನಿಮಾ ರಿಲೀಸ್‌ ದಿನಾಂಕ ಘೋಷಣೆ ಮಾಡಿದ್ದೆ. ಅವರು ಇತ್ತೀಚೆಗೆ ತಿಳಿಸಿದರು. ಹೀಗಾಗಿ ನಾನು ಹಿಂದೆ ಸರಿಯಲಿಲ್ಲ.

- ಮುಂದಿನ ವರ್ಷದ ಕೊನೆಗೆ ‘ಬಿಲ್ಲರಂಗಬಾಷ’ ಬಿಡುಗಡೆ ಮಾಡುತ್ತೇವೆ. ಅದಕ್ಕೂ ಮೊದಲು ಸುಕುಮಾರ್‌ ಅವರ ತಂಡದಲ್ಲಿನ ಒಬ್ಬ ತೆಲುಗು ನಿರ್ದೇಶಕರ ರೊಮ್ಯಾಂಟಿಕ್‌ ಸಿನಿಮಾ ಮಾಡುತ್ತೇನೆ. ಕನ್ನಡಿಗ ನಿರ್ಮಾಪಕರು ಇದಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಜೋಗಿ ಪ್ರೇಮ್‌ ನಿರ್ದೇಶನದ ರೊಮ್ಯಾಂಟಿಕ್‌ ಡ್ರಾಮಾವೂ ಲಿಸ್ಟ್‌ನಲ್ಲಿದೆ.