ಕೇರಳ ಸಿನಿಮಾ ಇತಿಹಾಸದಲ್ಲೇ ಅತಿದೊಡ್ಡ ಬ್ಲಾಕ್‌ಬಸ್ಟರ್; '2018' ಮಲಯಾಳಂ ಸಿನಿಮಾಗೆ ಕಿಚ್ಚನ ಮೆಚ್ಚುಗೆ
ಕೇರಳ ಸಿನಿಮಾ ಇತಿಹಾಸದಲ್ಲೇ ಅತಿದೊಡ್ಡ ಬ್ಲಾಕ್‌ಬಸ್ಟರ್ ಎಂದು ಕನ್ನಡದ ಸ್ಟಾರ್ ಕಿಚ್ಚ ಸುದೀಪ್ ಮಲಯಾಳಂನ ಸೂಪರ್ ಹಿಟ್ '2018' ಸಿನಿಮಾವನ್ನು ಹೊಗಳಿದ್ದಾರೆ.

'2018' ಮಲಯಾಳಂನ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನೈಜ ಘಟನೆ ಆಧಾರಿತ ಈ 2018 ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮೇ 5ರಂದು ತೆರೆಗೆ ಬಂದಿರುವ ಈ ಸಿನಿಮಾ ಮಲಯಾಳಂ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿ ಬೀಗಿದೆ. 2018 ಇದು ನಿಜವಾದ ಕೇರಳ ಸ್ಟೋರಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಂದಹಾಗೆ ಇದು 2018ಲ್ಲಿ ಕೇರಳದ ಭೀಕರ ಪ್ರವಾದ ಬಗ್ಗೆ ಇರುವ ಸಿನಿಮಾವಾಗಿದೆ. ಮಲಯಾಳಂನಲ್ಲಿ ಬ್ಲಾಕ್‌ಬಸ್ಟರ್ ಆಗುತ್ತಿದ್ದಂತೆ ಈ ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲೂ ಈ ಸಿನಿಮಾ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾವನ್ನು ಕನ್ನಡದ ಸ್ಟಾರ್ ಕಿಚ್ಚ ಸುದೀಪ್ ಕೂಡ ಮೆಚ್ಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕೇರಳ ಸಿನಿಮಾ ಇತಿಹಾಸದ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಎಂದಿರುವ ಕಿಚ್ಚ ಸುದೀಪ್ ಕನ್ನಡಿಗರ ಹೃದಯ ಗೆಲ್ಲುತ್ತಿದೆ ಅಂತ ಹೇಳಿದ್ದಾರೆ. 'ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಬೆಳ್ಳಿತೆರೆಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಕೇರಳ ಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್ ಬಸ್ಟರ್ ಆಗಿದೆ. ‘2018’ ಸಿನಿಮಾ ಕನ್ನಡಿಗರ ಹೃದಯವನ್ನೂ ಗೆಲ್ಲುತ್ತಿದೆ. ಅಭಿನಂದನೆಗಳು' ಎಂದು ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಕಿಚ್ಚನ ಪೋಸ್ಟ್‌ಗೆ ಅಭಿಮಾನಿಗಳು ‘ಇದು ನಿಜವಾದ ಕೇರಳ ಸ್ಟೋರಿ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೇರಳ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡಿ ‘ನಿಮ್ಮ ಪ್ರೀತಿಗೆ ಧನ್ಯವಾದಗಳು' ಎಂದು ಹೇಳುತ್ತಿದ್ದಾರೆ.
ಚುನಾವಣಾ ಪ್ರಚಾರ ಮುಗೀತಿದ್ದಂತೆಯೇ ಕುತೂಹಲದ ಟ್ವೀಟ್ ಮಾಡಿದ ಸುದೀಪ್
2018 ಸಿನಿಮಾ ಬಗ್ಗೆ
'2018' ಸಿನಿಮಾ 2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹವನ್ನು ಆಧರಿಸಿ ಮಾಡಿದ ಸಿನಿಮಾ ಇದಾಗಿದೆ. ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟದ ಘಟನೆಗಳನ್ನು ಈ ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಜೂಡ್ ಆಂಥನಿ ಜೋಸೆಫ್. ಅತೀ ಕಷ್ಟದ ಸಮಯದಲ್ಲೂ ಕೇರಳದ ಪ್ರತಿಯೊಬ್ಬರು ಹೇಗೆ ನಡೆದುಕೊಂಡರು ಎಂಬ ವಿವರ ಈ ಸಿನಿಮಾದಲ್ಲಿ. ‘ಪ್ರತಿಯೊಬ್ಬರೂ ಹೀರೋ’ ಎಂಬ ಟ್ಯಾಗ್ಲೈನ್ ಗಮನ ಸೆಳೆದಿದೆ. 2018ರ ಪ್ರವಾಹದಲ್ಲಿ ಕೇರಳದ 400ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಅನೇಕರು ನಾಪತ್ತೆಯಾದರು. 1924ರ ಬಳಿಕ ಕೇರಳದಲ್ಲಿ ಉಂಟಾಗಿದ್ದ ಅತಿ ಭೀಕರ ಪ್ರವಾಹ ಅದಾಗಿತ್ತು.
ಇದು ನಿಜವಾದ ಕೇರಳ ಸ್ಟೋರಿ; '2018' ಸಿನಿಮಾಗೆ ಮಲಯಾಳಿ ಪ್ರೇಕ್ಷಕರು ಫಿದಾ
ಜೂಡ್ ಆಂಥನಿ ಜೋಸೆಫ್ ನಿರ್ದೇಶನದಲ್ಲಿ ಬಂದಿರುವ ಈ ಸಿನಿಮಾದಲ್ಲಿ ಅನೇಕ ಜನಪ್ರಿಯ ಕಲಾವಿದರು ನಟಿಸಿದ್ದಾರೆ. ಟೊವಿನೋ ಥಾಮಸ್, ಆಸಿಪ್ ಅಲಿ, ಅಪರ್ಣಾ ಬಾಲಮುರಳಿ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ.