ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ತಮ್ಮ 30 ವರ್ಷಗಳ ಸಿನಿ ಪಯಣವನ್ನು ಪೂರ್ಣಗೊಳಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ತಮ್ಮ ಅಭಿಮಾನಿಗಳಿಗೆ, ನಿರ್ದೇಶಕರಿಗೆ ಮತ್ತು ಚಿತ್ರರಂಗದ ಎಲ್ಲರಿಗೂ ಧನ್ಯವಾದ ಅರ್ಪಿಸಿ ಭಾವುಕ ಪತ್ರ ಬರೆದಿದ್ದಾರೆ. ಸದ್ಯ 'ಬಿಲ್ಲ ರಂಗಾ ಬಾಷಾ' ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ.

ಸ್ಯಾಂಡಲ್​ವುಡ್‌ನ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಸಿನಿ ಬದುಕಿಗೆ ಬರೊಬ್ಬರಿ 30 ವರ್ಷಗಳು ತುಂಬಿವೆ. ಸುದೀಪ್ ಸಿನಿಲೋಕದಲ್ಲಿ ಒಂಥರಾ ಆಲ್​ರೌಂಡರ್ ಆಗಿ ಮಿಂಚಿದವರು. 3 ದಶಕದಲ್ಲಿ ಶತಕ ಬಾರಿಸಿದವರು. ಈ ವಿಶೇಷ ಸಮಯದಲ್ಲಿ ಕಿಚ್ಚ ಅಭಿಮಾನಿಗಳಿಗೆ ಭಾವುಕ ಪತ್ರ ಬರೆದು ಧನ್ಯವಾದ ಹೇಳಿದ್ದಾರೆ.

ಸಿನಿಬದುಕಿಗೆ 3 ದಶಕ, ಕಿಚ್ಚನ ಶತಕ..!

ಯೆಸ್ ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಅಂತ ಕರೆಸಿಕೊಳ್ಳೋ ಕಿಚ್ಚ ಸುದೀಪ್ ಸಿನಿಬದುಕಿಗೆ 30 ವರ್ಷಗಳು ತುಂಬಿವೆ. ಒಬ್ಬ ನಟ ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿ ಉಳಿಯೋದು, ಇಷ್ಟು ದೊಡ್ಡ ಅವಧಿ ಜನಪ್ರಿಯತೆಯ ಉತ್ತುಂಗದಲ್ಲಿರೋದು ಸಾಮಾನ್ಯ ಅಲ್ಲ. ಸುದೀಪ್ ಅಂಥದ್ದೊಂದು ಅಸಾಮಾನ್ಯ ಸಾಧನೆಯನ್ನ ಮಾಡಿದ್ದಾರೆ.

1996ರಲ್ಲಿ ತಾಯವ್ವ ಅನ್ನೋ ಸಿನಿಮಾಗೆ ಬಣ್ಣ ಹಚ್ಚೋ ಮೂಲಕ ಕಿಚ್ಚ ಸ್ಯಾಂಡಲ್​ವುಡ್‌ಗೆ ಎಂಟ್ರಿ ಕೊಟ್ರು. ಸ್ಪರ್ಶ ಸುದೀಪ್ ಪೂರ್ಣ ಪ್ರಮಾಣದ ನಾಯಕನಾಗಿ ಮಿಂಚಿದ ಮೊದಲ ಸಿನಿಮಾ. 2001ರಲ್ಲಿ ಬಂದ ಹುಚ್ಚ , ಸುದೀಪ್‌ಗೆ ಬ್ರೇಕ್​ ಕೊಟ್ಟ ಮೊಟ್ಟ ಮೊದಲ ಸಿನಿಮಾ. ಹುಚ್ಚ ಯಶಸ್ಸಿನ ಬಳಿಕ ಕಿಚ್ಚ ತಿರುಗಿ ನೋಡಲೇ ಇಲ್ಲ. ಅಲ್ಲಿಂದ ಇಲ್ಲಿತನಕ ಒಂದೊಂದೇ ಮೆಟ್ಟಿಲು ಏರುತ್ತಾ ಬಂದ ಸುದೀಪ್ , ಇವತ್ತು ಅಭಿನಯ ಚಕ್ರವರ್ತಿ ಪಟ್ಟ ಪಡೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಭಾವನಾತ್ಮಕ ಪತ್ರ

ಈ ಸುಂದರವಾದ ಸಿನಿಮಾ ಜಗತ್ತಿನಲ್ಲಿ ಮೂರು ದಶಕಗಳ ಪಯಣದ ನಂತರ ಇಂದು ಇಲ್ಲಿ ನಿಂತಾಗ, ನನ್ನ ಹೃದಯ ತುಂಬಿ ಬಂದಿದೆ. ಕಣ್ಣಲ್ಲಿ ಕನಸು, ಮನದಲ್ಲಿ ಗೊಂದಲ ಮತ್ತು ಅತಿಯಾದ ಭರವಸೆ ಹೊತ್ತ ಹುಡುಗನಾಗಿದ್ದ ನಾನು, ಇಂದು ಏನಾಗಿದ್ದೇನೋ. ಇದೆಲ್ಲವೂ ನಾನು ಊಹಿಸಿದ್ದಕ್ಕಿಂತ ದೊಡ್ಡದು. ಇದಕ್ಕೆಲ್ಲಾ ಏಕೈಕ ಕಾರಣ ನೀವು. ನನ್ನ ಅಭಿಮಾನಿ ದೇವರುಗಳೇ - ನೀವೇ ನನ್ನ ಶಕ್ತಿ, ನನ್ನ ಉಸಿರು. ಇಂದಿಗೂ ಇಲ್ಲಿರಲು ನೀವೇ ಮುಖ್ಯ ಕಾರಣ. ಈ ಮೂಲಕ ಈ 30 ವರ್ಷಗಳ ಸಾಧನೆ ಕೇವಲ ನನ್ನೊಬ್ಬನದ್ದಲ್ಲ, ಇದು ನನ್ನನ್ನು ನಂಬಿದ ಪ್ರತಿಯೊಬ್ಬ ಅಭಿಮಾನಿಯದ್ದು. ಸಿನಿಮಾ ಯಾರದ್ದೋ ಒಬ್ಬರಿಂದ ಆಗುವುದಲ್ಲ. ಒಂದು ಚಿತ್ರದ ಹಿಂದೆ ಹಲವರ ಶ್ರಮ ಇರುತ್ತೆ. ಕನಸು ಇರುತ್ತೆ. ನಿರ್ದೇಶಕರೇ ಮತ್ತು ಬರಹಗಾರರೇ, ನಿಮ್ಮ ಕಥೆಗಳ ಮೂಲಕ ನನ್ನನ್ನು ನಂಬಿದ್ದಕ್ಕೆ, ನನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ನನ್ನಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಿ ತಿದ್ದಿ ತೀಡಿದ್ದಕ್ಕೆ ಧನ್ಯವಾದಗಳು . ನಿಮ್ಮ ಧೈರ್ಯ ಮತ್ತು ನಂಬಿಕೆಯೇ ಈ ಕನಸುಗಳು ನನಸಾಗಲು ಕಾರಣವಾಯಿತು. - ಕಿಚ್ಚ ಸುದೀಪ್

ಅಭಿಮಾನಿಗಳಿಗೆ, ಸಹ ಕಲಾವಿದರಿಗೆ, ತಂತ್ರಜ್ಞರಿಗೆ, ಮಾಧ್ಯಮದವರಿಗೆ ಪ್ರತಿಯೊಬ್ಬರಿಗೂ ಕಿಚ್ಚ ಧನ್ಯವಾದ ಅರ್ಪಿಸಿದ್ದಾರೆ. ನೀವಲ್ಲದೇ ಇದ್ರೆ ನನ್ನ ಈ ಜರ್ನಿ ಪೂರ್ಣ ಆಗ್ತಾ ಇರ್ಲಿಲ್ಲ ಅಂದಿದ್ದಾರೆ.

ಸಿನಿಲೋಕದ ಆಲ್​ರೌಂಡರ್ ಕಿಚ್ಚ ಸುದೀಪ್..!

ಹೌದು ಸುದೀಪ್ ಬರೀ ನಟ ಅಲ್ಲ ನಿರ್ಮಾಪಕ, ನಿರ್ದೇಶಕ, ಹಾಡುಗಾರ ಹೀಗೆ ಸಿನಿಮಾ ಲೋಕದಲ್ಲಿ ಆಲ್ ರೌಂಡರ್ ಆಗಿ ಮಿಂಚಿದವರು. ಕಿರುತೆರೆಯಲ್ಲೂ ಅತಿ ದೊಡ್ಡ ಶೋ ಆಗಿರೋ ಬಿಗ್​ ಬಾಸ್‌ನ 12 ವರ್ಷಗಳ ಕಾಲ ನಡೆಸಿ ಅಸಲಿ ಬಿಗ್ ಬಾಸ್ ಅನ್ನಿಸಿಕೊಂಡವರು. ಇನ್ನೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲೂ ಕಿಚ್ಚನ ಹೆಜ್ಜೆ ಗುರುತು ಜೋರಾಗಿವೆ. ಮೊದಲ ಸೀಸನ್​ನಿಂದ ಇಲ್ಲಿ ತನಕ ಕರ್ನಾಟಕ ಬುಲ್ಡೋಜರ್ಸ್ ತಂಡ ಮುನ್ನಡೆಸ್ತಾ ಬಂದಿದ್ದಾರೆ ಬಾದ್ಷಾ ಸುದೀಪ್.

ಸಿನಿಮಾಗಳು ಮಾಡೋದು ತಡವಾಗ್ತಾ ಇದೆ ಅಂತ ಅಭಿಮಾನಿಗಳು ದೂರತೊಡಗಿದಾಗ ಇನ್ಮುಂದೆ ವರ್ಷಕ್ಕೊಂದು ಸಿನಿಮಾ ಫಿಕ್ಸ್ ಅಂತ ಸುದೀಪ್ ಪ್ರಾಮೀಸ್ ಮಾಡಿದ್ರು. ಕಳೆದ ವರ್ಷ ಡಿಸೆಂಬರ್‌ಗೆ ಮ್ಯಾಕ್ಸ್ ರಿಲೀಸ್ ಆದ್ರೆ, ಈ ವರ್ಷ ಮಾರ್ಕ್ ತೆರೆಗೆ ಬಂತು.

ಸದ್ಯ ಬಿಗ್ ಬಾಸ್ ಮುಗಿಸಿ, ಸಿಸಿಎಲ್​ನಲ್ಲಿ ತೊಡಗಿಕೊಂಡಿರೋ ಸುದೀಪ್ ಬಳಿಕ ಬಿಲ್ಲ ರಂಗಾ ಬಾಷಾ ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ. ಈ ವರ್ಷಾಂತ್ಯ ಬಿಲ್ಲ ರಂಗಾ ಬಾಷಾ ಆಗಿ ತೆರೆ ಮೇಲೆ ಬರಲಿದ್ದಾರೆ. ಸದ್ಯ ಕಿಚ್ಚನ ಸಿನಿ ಜರ್ನಿಗೆ 3 ದಶಕ ತುಂಬಿರೋ ಹೊತ್ತಲ್ಲಿ ಎಲ್ಲರೂ ಅಭಿನಂದಿಸ್ತಾ ಇದ್ದಾರೆ.

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.