ಹೋಟೆಲು, ಬಾರು, ಪ್ರವಾಸಿತಾಣ, ಜಾತ್ರೆ, ಜಾಥಾಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಂದಿ, ಥೇಟರಿಗೂ ನುಗ್ಗಬಹುದು ಎಂಬುದು ಚಿತ್ರರಂಗದ ಕನಸು ಮತ್ತು ಭರವಸೆ. ಬಿಡುಗ‚ಡೆಯ ದಿನವೇ 236 ಪ್ರದರ್ಶನಗಳು ಆರಂಭವಾಗಿವೆ. ಕರ್ನಾಟಕದ ಪ್ರಮುಖ ಕೇಂದ್ರಗಳ ಚಿತ್ರಣದ ಜತೆಗೇ ಬೆಂಗಳೂರಿನ ಚಿತ್ರಮಂದಿರಗಳ ಸಂಪೂರ್ಣ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ.

ಬೆಂಗಳೂರು ಬಿಡುಗಡೆಯಲ್ಲಿ ಮುಂದಿದೆ

ಬೆಂಗಳೂರಿನಲ್ಲಿ ಒಟ್ಟು 160 ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಇದ್ದು, 260 ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಿವೆ. ಈ ಪೈಕಿ ಈ ವಾರದಿಂದ 10 ರಿಂದ 15 ಸಿಂಗಲ್‌ ಸ್ಕ್ರೀನ್‌ಗಳು ಹಾಗೂ 150 ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳು ಆರಂಭವಾಗುತ್ತಿವೆ.

‘ಐನಾಕ್ಸ್‌ ಅಡಿಯಲ್ಲಿ 9 ಯೂನಿಟ್‌ ಬರಲಿದ್ದು, ಒಟ್ಟು 45 ಸ್ಕ್ರೀನ್‌ಗಳನ್ನು ಒಳಗೊಂಡಿದೆ. ಈ ಪೈಕಿ ನಾವು ಈಗಾಗಲೇ 7 ಸ್ಕ್ರೀನ್‌ಗಳನ್ನು ತೆರೆದಿದ್ದೇವೆ. ಇದರಲ್ಲಿ 4 ಸ್ಕ್ರೀನ್‌ಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನ ಆಗುತ್ತಿವೆ. ಕನ್ನಡದ ಶಿವಾಜಿ ಸೂರತ್ಕಲ್‌, ಹಿಂದಿ ತಪ್ಪಡ್‌ ಹಾಗೂ ಇಂಗ್ಲಿಷ್‌ನ ಬ್ಲಡ್‌ಶೆಡ್‌ ಚಿತ್ರಗಳು ಪ್ರದರ್ಶನ ಆಗುತ್ತಿವೆ. ಅಗತ್ಯಕ್ಕೆ ತಕ್ಕಂತೆ ನಾವು ಸ್ಕ್ರೀನ್‌ಗಳನ್ನು ಕೊಡಲು ಸಿದ್ದರಾಗಿದ್ದೇವೆ. ಈ ಕಾರಣಕ್ಕೆ ಮೊದಲ ಹಂತದಲ್ಲೇ 7 ಸ್ಕ್ರೀನ್‌ಗಳನ್ನು ಎಲ್ಲ ರೀತಿಯಲ್ಲೂ ಸ್ವಚ್ಚಗೊಳಿಸಿದ್ದೇವೆ. ಸಿನಿಮಾಗಳು ಬಂದರೆ ನಮ್ಮ ಐನಾಕ್ಸ್‌ ಅಡಿಯಲ್ಲಿ ಬರುವ 45 ಸ್ಕ್ರೀನ್‌ಗಳನ್ನೂ ನಾನು ಆರಂಭಿಸಲು ಸಿದ್ದರಿದ್ದೇವೆ’ ಎನ್ನುತ್ತಾರೆ ಐನಾಕ್ಸ್‌ನ ರೀಜನಲ್‌ ಮ್ಯಾನೇಜರ್‌ ಮಾರ್ಕೆಟಿಂಗ್‌ ಮುಖ್ಯಸ್ಥ ರಾಘವೇಂದ್ರ ಎಂ ಎಸ್‌.

ಇನ್ನೂ ಪಿವಿಆರ್‌ 12 ಯೂನಿಟ್‌ಗಳಲ್ಲಿ 70 ಸ್ಕ್ರೀನ್‌ಗಳನ್ನು ಒಳಗೊಂಡಿದೆ. ಅತಿ ಹೆಚ್ಚು ಸ್ಕ್ರೀನ್‌ಗಳನ್ನು ಒಳಗೊಂಡಿರುವ ಪಿವಿಆರ್‌ ಕೂಡ ಇಂದಿನಿಂದಲೇ ಪ್ರದರ್ಶನ ಆರಂಭಿಸಿದೆ.

ತುಮಕೂರಿನ ಏಕಮೇವ ಥೇಟರಲ್ಲಿ ಶಿವಾರ್ಜುನ

ತುಮಕೂರಿನಲ್ಲಿ ಮಲ್ಟಿಪ್ಲೆಕ್ಸ್‌ ಇಲ್ಲ. ಇರುವ ಚಿತ್ರಮಂದಿರಗಳಲ್ಲಿ ಒಂದೇ ಒಂದು ಸಿನಿಮಾ ಮಂದಿರ ತೆರೆದಿದೆ. ಅದರ ಹೆಸರು ಮಾರುತಿ ಚಿತ್ರಮಂದಿರ. ಈ ಚಿತ್ರಮಂದಿರದಲ್ಲಿ ಚಿರಂಜೀವಿ ಸರ್ಜಾ ನಟನೆಯ ‘ಶಿವಾರ್ಜುನ’ ಸಿನಿಮಾ ಪ್ರದರ್ಶನ ಕಾಣಲಿದೆ. ಸದ್ಯಕ್ಕೆ ಜನರ ಪ್ರತಿಕ್ರಿಯೆ ಸ್ವಲ್ಪ ನೀರಸವಾಗಿಯೇ ಇದೆ. ದಿನ ಕಳೆದಂತೆ ಪರಿಸ್ಥಿತಿ ಬದಲಾಗುವ ಆಶಾಭಾವನೆ ಚಿತ್ರಮಂದಿರದ ಮಾಲೀಕರದು.

ಮಂಡ್ಯದಲ್ಲಿ ಸಿನಿಮಾ ಪ್ರದರ್ಶನ ಇಲ್ಲ

ಮಂಡ್ಯದಲ್ಲಿ ಯಾವುದೇ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆರಂಭಗೊಂಡಿಲ್ಲ. ಕೆಲವು ಸಣ್ಣಪುಟ್ಟಚಿತ್ರಮಂದಿರಗಳು ಅನ್ಯಭಾಷೆ ಚಿತ್ರಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿವೆ. ಉಳಿದವರು ಆಯುಧ ಪೂಜೆ ನಂತರ ಚಿತ್ರ ಪ್ರದರ್ಶನ ಆರಂಭಿಸಲು ಬಹುತೇಕ ಚಿತ್ರಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ.

ಜಿಲ್ಲೆಯ ಜನರು ಚಿತ್ರ ಪ್ರದರ್ಶನದ ಬಗ್ಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಹೊಸ ಚಿತ್ರ ಬಿಡುಗಡೆಯಾಗಿದ್ದರೆ ಕೆಲವು ಜನರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆಯಿತ್ತು. ಹಳೆಯ ಚಿತ್ರಗಳು ಬಿಡುಗಡೆಯಾದರೆ ನೋಡಲು ಪ್ರೇಕ್ಷಕರು ಆಸಕ್ತಿ ತೋರುತ್ತಿಲ್ಲ. ‘ಕೊರೋನಾ ಸಮಯದಲ್ಲಿ ಚಿತ್ರಮಂದಿರಗಳನ್ನು ನಡೆಸುವುದೇ ಕಷ್ಟವಾಗಿದೆ. ಈಗ ಚಿತ್ರಮಂದಿರದಲ್ಲಿ ಪ್ರದರ್ಶನ ಆರಂಭಿಸಿದರೆ ಪರಿಶೀಲನೆಗಾಗಿ ಪೊಲೀಸರು ಆರೋಗ್ಯ ಇಲಾಖೆಯವರು ಸಿಬ್ಬಂದಿ ಬರುತ್ತಾರೆ. ಅವರ ತನಿಖೆ ಎದುರಿಸುವ ಬದಲು ಇನ್ನಷ್ಟುದಿನ ಚಿತ್ರಮಂದಿರ ಆರಂಭಿಸುತ್ತೇವೆ’ ಎಂದು ಚಿತ್ರಮಂದಿರದ ಮಾಲೀಕರೊಬ್ಬರು ಹೇಳುತ್ತಾರೆ. ಇನ್ನು ಮಂಡ್ಯದಲ್ಲಿ ಮಲ್ಟಿಪ್ಲೆಕ್ಸ್‌ಗಳು ಇಲ್ಲ. ಹಾಗಾಗಿ ಚಿತ್ರ ಪ್ರೇಮಿಗಳಿಗೆ ನಿರಾಶೆಯೇ ಕಾದಿದೆ.

ಚಿತ್ರದುರ್ಗದಲ್ಲಿ ಮುಚ್ಚಿದ ಬಾಗಿಲು

ದುರ್ಗದ ಚಿತ್ರಮಂದಿರ ಮಾಲೀಕರು ಪ್ರತಿಭಟನೆ ಮೋಡ್‌ನಲ್ಲಿದ್ದಾರೆ. ನಗರಸಭೆ ತೆರಿಗೆ ಕಡಿಮೆ ಮಾಡುವುದು, ಲೈಸೆನ್ಸ್‌ ಫೀ ಕಡಿಮೆ ಮಾಡುವುದೂ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಿರುವ ಚಿತ್ರ ಮಂದಿರ ಮಾಲೀಕರು ಬೇಡಿಕೆ ಈಡೇರದಿದ್ದರೆ ಚಿತ್ರಮಂದಿರ ತೆರೆಯುವುದಿಲ್ಲ ಎನ್ನುತ್ತಿದ್ದಾರೆ. ಹಾಗಾಗಿ ಚಿತ್ರದುರ್ಗ 12 ಚಿತ್ರಮಂದಿರಗಳ ಬಾಗಿಲು ತೆರೆಯಲು ಇನ್ನೂ ಹಲವು ದಿನ ಬೇಕಾಗಿದೆ ಎನ್ನುತ್ತಾರೆ ಬಸವೇಶ್ವರ ಚಿತ್ರಮಂದಿರದ ಮಾಲೀಕ ಮಧುಕುಮಾರ್‌.

ಮಂಗಳೂರು ಮಲ್ಟಿಪ್ಲೆಕ್ಸ್‌ನಲ್ಲಿ ಹಳೆ ಸಿನಿಮಾಗಳು

ಮಂಗಳೂರಿನಲ್ಲಿ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಯಾವುದೂ ತೆರೆದಿಲ್ಲ. ಇರುವ ಮೂರು ಮಲ್ಟಿಪ್ಲೆಕ್ಸ್‌ಗಳಲ್ಲಿ 2 ಮಾತ್ರ ಗುರುವಾರವೇ ತೆರೆದಿವೆ. ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಇರುವುದಿಲ್ಲ. ಆದರೆ ಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡ, ಹಿಂದಿ, ತುಳು ಭಾಷೆಯ ಹಳೆಯ ಸಿನೆಮಾಗಳನ್ನು ಪ್ರದರ್ಶಿಸುತ್ತಿದ್ದಾರೆ. ಗುರುವಾರ ಮಾತ್ರ ಜನರ ಪ್ರತಿಕ್ರಿಯೆ ನೀರಸವಾಗಿತ್ತು. ಮಲ್ಟಿಪ್ಲೆಕ್ಸ್‌ಗಳ ಶೇ.90 ಕುರ್ಚಿಗಳು ಖಾಲಿಯಾಗಿದ್ದುವು. ‘ಲಾಕ್‌ಡೌನ್‌ ಕಾರಣಕ್ಕೆ ಹೊಸ ಸಿನೆಮಾ ರಿಲೀಸ್‌ ಆಗಿಲ್ಲ. ಹಳೆ ಸಿನೆಮಾ ಹಾಕಿದರೆ ಜನ ಬಾರದಿದ್ದರೆ ನಷ್ಟವಾಗುತ್ತದೆ. ಹಾಗಾಗಿ ಇನ್ನೂ ಕೆಲವು ದಿನ ಕಾಯುತ್ತೇವೆ’ ಎಂದು ಚಿತ್ರಮಂದಿರ ಮಾಲೀಕರು ಹೇಳಿದ್ದಾರೆ.

ಮೈಸೂರಲ್ಲಿ ಮಲ್ಟಿಪ್ಲೆಕ್ಸ್‌ಗಳು ತೆರೆದಿವೆ

ಮೈಸೂರಿನಲ್ಲಿ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ತೆರೆಯುತ್ತಿಲ್ಲ. ಅದಕ್ಕೆ ‘ಹೊಸ ಚಿತ್ರಗಳು ಬಿಡುಗಡೆಯಾಗದೇ ಹಳೆಯ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವುದು ಸಾಧ್ಯವಿಲ್ಲ’ ಎಂಬ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬ ಕಾರಣ ಸಿಗುತ್ತದೆ. ಮಲ್ಟಿಪ್ಲೆಕ್ಸ್‌ಗಳು ತೆರೆದಿವೆ. ಗುರುವಾರದಂದೇ ಶಿವಾಜಿ ಸುರತ್ಕಲ್‌, ಲವ್‌ ಮಾಕ್‌ಟೇಲ್‌ ಚಿತ್ರಗಳು ಪ್ರದರ್ಶನವಾಗಿವೆ. ಇಂದಿನಿಂದ ಮೈ ಸ್ಟೈಲ್‌ ಚಿತ್ರ ಪ್ರದರ್ಶನ ಇರುತ್ತದೆ.

ದಾವಣಗೆರೆಯಲ್ಲಿ ಅವನೇ ಶ್ರೀಮನ್ನಾರಾಯಣ

ದಾವಣಗೆರೆಯಲ್ಲಿ ಪುಷ್ಪಾಂಜಲಿ ಚಿತ್ರಮಂದಿರ ತೆರೆದಿದೆ. ಇಲ್ಲಿ ‘ಶಿವಾರ್ಜುನ’ ಚಿತ್ರ ನಾಲ್ಕು ಪ್ರದರ್ಶನ ಕಾಣಲಿದೆ. ಎಸ್‌ಎಸ್‌ ಮಾಲ್‌ನ ಒಂದು ಸ್ಕ್ರೀನಲ್ಲಿ ಅವನೇ ಶ್ರೀಮನ್ನಾರಾಯಣ ಮತ್ತು ಲವ್‌ ಮಾಕ್‌ಟೇಲ್‌ ಸಿನಿಮಾಗಳು ಎರಡೆರಡು ಪ್ರದರ್ಶನ ಕಾಣಲಿವೆ. ಇನ್ನೊಂದು ಪರದೆಯಲ್ಲಿ ಶಿವಾರ್ಜುನ ದರ್ಶನ ಲಭ್ಯವಿದೆ. ‘ಲೈಸೆನ್ಸ್‌ ಶುಲ್ಕ 5ರಿಂದ 50 ಸಾವಿರಕ್ಕೆ ಸರ್ಕಾರ ಹೆಚ್ಚಿಸಿದ್ದು ಹೊರೆಯಾಗಿದೆ. ಕೊರೋನಾದಿಂದ ಚಿತ್ರ ಮಂದಿರಕ್ಕೆ ಮುಂಚಿನಂತೆ ಬರುವ ಸಾಧ್ಯತೆ ಇಲ್ಲ’ ಎಂದು ಚಿತ್ರಮಂದಿರಗಳ ಮಾಲೀಕರು ತಮ್ಮ ಕಷ್ಟತೋಡಿಕೊಳ್ಳುತ್ತಿದ್ದಾರೆ.

ಹಾಸನ, ಉಡುಪಿಯಲ್ಲಿ ಸಿನಿಮಾಗಳಿಲ್ಲ

ಹಾಸನದಲ್ಲಿ ಚಿತ್ರಮಂದಿರ ತೆರೆಯುವ ನಿರ್ಧಾರಕ್ಕೆ ಮಾಲೀಕರಿನ್ನೂ ಬಂದಿಲ್ಲ. ‘ಸೀಟು ಬಿಟ್ಟು ಸೀಟಿನಲ್ಲಿ ಕೂರಿಸುವುದು ನಮಗೆ ಹೊರೆಯಾಗುತ್ತದೆ’ ಎನ್ನುತ್ತಾರೆ ಮಾಲೀಕರು. ಇಲ್ಲಿ ಮಲ್ಟಿಪ್ಲೆಕ್ಸ್‌ ಇಲ್ಲದಿರುವುದರಿಂದ ಸಿನಿಮಾ ಪ್ರದರ್ಶನ ಸದ್ಯಕ್ಕಂತೂ ಇಲ್ಲ. ಇನ್ನು ಉಡುಪಿಯಲ್ಲಿ ಮಲ್ಟಿಪ್ಲೆಕ್ಸ್‌, ಚಿತ್ರಮಂದಿರ ಯಾವುದೂ ಬಾಗಿಲು ತೆರೆಯುವ ಯೋಚನೆ ಮಾಡಿಲ್ಲ.

ಹುಬ್ಬಳ್ಳಿ ಮಾಲ್‌ಗಳಲ್ಲಿ ಸಿನಿಮಾ

ಹುಬ್ಬಳ್ಳಿಯ ಅರ್ಬನ್‌ ಓಯಸಿಸ್‌ ಮಾಲ್‌ ಹಾಗೂ ಲಕ್ಷ್ಮಿ ಮಾಲ್‌ಗಳಲ್ಲಿರುವ ಮಲ್ಟಿಪ್ಲೆಕ್ಸ್‌ನ ಒಂದೊಂದು ಸ್ಕ್ರೀನ್‌ಗಳಲ್ಲಿ ಪ್ರಾಯೋಗಿಕವಾಗಿ ಚಿತ್ರ ಪ್ರದರ್ಶನ ಆರಂಭವಾಗಲಿದೆ.

ಯಾವ ಸಿನಿಮಾ ಎಷ್ಟುಶೋ

1. ಶಿವಾರ್ಜುನ: ರಾಜ್ಯದ್ಯಾಂತ 36 ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ , 25 ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಲ್ಲಿ ಒಟ್ಟು 106 ಶೋಗಳು ಪ್ರದರ್ಶನ ಆಗುತ್ತಿವೆ. ಮುಖ್ಯ ಚಿತ್ರಮಂದಿರಗಳಾಗಿ ಬೆಂಗಳೂರಿನಲ್ಲಿ ಸಂತೋಷ್‌ ಹಾಗೂ ಪ್ರಸನ್ನ ಥಿಯೇಟರ್‌ಗಳನ್ನು ಆಯ್ಕೆ ಮಾಡಿಕೊಂಡಿದೆ.

2. ಲವ್‌ ಮಾಕ್ಟೇಲ್‌: ರಾಜ್ಯದ ಒಟ್ಟು 25 ಕೇಂದ್ರಗಳಲ್ಲಿ ಈ ಸಿನಿಮಾ ಪ್ರದರ್ಶನ ಆಗುತ್ತಿದೆ. ಈ ಪೈಕಿ ಬೆಂಗಳೂರಿನಲ್ಲೇ 16 ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ. ಉಳಿದಂತೆ ರಾಯಚೂರು, ಹುಬ್ಬಳ್ಳಿ, ಮಣಿಪಾಲ್‌, ಮಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ ಬಿಡುಗಡೆ ಆಗುತ್ತಿದ್ದು, ಒಟ್ಟು 70 ಶೋಗಳು ಬುಕ್‌ ಆಗಿವೆ.

3. ಶಿವಾಜಿ ಸುರತ್ಕಲ್‌: ಅಕ್ಟೋಬರ್‌ 15 ರಿಂದಲೇ ಪ್ರದರ್ಶನ ಆರಂಭವಾಗಿದೆ. ಐನಾಕ್ಸ್‌ನಲ್ಲಿ 2 ಶೋ ರನ್ನಿಂಗ್‌ ಆಗುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲೇ ಹೆಚ್ಚಾಗಿ ಈ ಸಿನಿಮಾ ತೆರೆಗೆ ಬರುತ್ತಿದ್ದು, ಬೆಂಗಳೂರಿನಲ್ಲಿ ಮಾತ್ರ 9 ರಿಂದ 10 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗಿದೆ. ಉಳಿದಂತೆ ಶಿವಮೊಗ್ಗ, ಮೈಸೂರು, ಹುಬ್ಬಳಿ ಹಾಗೂ ಮಣಿಪಾಲದಲ್ಲಿ ಒಂದೊಂದು ಶೋ ಪ್ರದರ್ಶನಗೊಳ್ಳುತ್ತಿದೆ. 10 ಕಡೆ ಬುಕ್ಕಿಂಗ್‌ ಆರಂಭವಾಗಿದ್ದು, 20 ಶೋಗಳ ಪ್ರದರ್ಶನಕ್ಕೆ ಪ್ಲಾನ್‌ ಮಾಡಿಕೊಂಡಿದ್ದಾರೆ.

4. ಕಾಣದಂತೆ ಮಾಯವಾದನು: 10 ಸಿಂಗಲ್‌ ಸ್ಕ್ರೀನ್‌, 5 ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿದೆ. ಒಟ್ಟು 20 ರಿಂದ 25 ಶೋಗಳಿಗೆ ಬುಕ್‌ ಆಗಿದ್ದು, ಮುಂದಿನ ವಾರ ಮತ್ತಷ್ಟುಹೆಚ್ಚಾಗುವ ಸಾಧ್ಯತೆಗಳಿವೆ.

6. 5 ಅಡಿ 7 ಅಂಗುಲ: ಬೆಂಗಳೂರಿನ ತ್ರಿವೇಣಿ ಈ ಚಿತ್ರದ ಮುಖ್ಯ ಥಿಯೇಟರ್‌ ಆಗಿದ್ದು, ರಾಜ್ಯದ ಎಲ್ಲ ಸೇರಿದರೆ 10 ಶೋ ಆಗಲಿವೆ. ಸಿಂಗಲ್‌ ಸ್ಕ್ರೀನ್‌, 6 ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಆಗಲಿದೆ. ಮುಂದಿನ ವಾರದ ಹೊತ್ತಿಗೆ 35 ರಿಂದ 45 ಕಡೆ ಬಿಡುಗಡೆ ಆಗಲಿದ್ದು, 23 ಪ್ರದರ್ಶನ ಆಗಲಿವೆ ಎನ್ನುವ ಅಂದಾಜು ಇದೆ.

7. 3ನೇ ಕ್ಲಾಸ್‌: ಬೆಂಗಳೂರಿನಲ್ಲಿ ಭೂಮಿಕಾ ಚಿತ್ರಮಂದಿರದಲ್ಲಿ ಒಂದು ಶೋ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಆಚೆಗೆ 12 ರಿಂದ 13 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದ್ದು, ಭಾನುವಾರದ ನಂತರ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಬರುವ ಸಾಧ್ಯತೆಗಳಿವೆ.