Asianet Suvarna News

ಅತಂತ್ರ ಸ್ಥಿತಿಯಲ್ಲಿ ಥಿಯೇಟರ್‌ ಮಾಲೀಕರು, ತಿಂಗಳಾಂತ್ಯಕ್ಕೆ ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರ ಪ್ರದರ್ಶನ ಶುರು!

ರಾಜ್ಯಾದ್ಯಂತ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಆದರೆ, ಪ್ರದರ್ಶನಕ್ಕೆ ಸಿನಿಮಾಗಳಿಲ್ಲ. ಚಿತ್ರಮಂದಿರಗಳ ಮಾಲೀಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಮಧ್ಯೆ ಜಿಲ್ಲಾ ಕೇಂದ್ರಗಳಲ್ಲಿ ಕೆಲವು ಕಡೆ ಕೆಲವು ಚಿತ್ರಗಳನ್ನು ಮರು ಬಿಡುಗಡೆ ಮಾಡಲಾಗಿದೆ. ಆದರೆ ಪ್ರತಿಕ್ರಿಯೆ ಅಷ್ಟೇನೂ ಉತ್ತಮವಾಗಿಲ್ಲ. ಸ್ಟಾರ್‌ ಸಿನಿಮಾ ಬಂದರೆ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು ಎಂಬ ಅಭಿಪ್ರಾಯ ಅನೇಕರಲ್ಲಿದೆ. ಆದರೆ ಶೇ.100 ಸೀಟು ಭರ್ತಿ ಆದೇಶ ಬರದಿದ್ದರೆ ತಮ್ಮ ಸಿನಿಮಾ ರಿಲೀಸ್‌ ಮಾಡುವುದಿಲ್ಲ ಎಂದು ಎಲ್ಲಾ ನಿರ್ಮಾಪಕರು ಈಗಾಗಲೇ ತೀರ್ಮಾನಿಸಿದ್ದಾರೆ.

Karnataka film theater to begin film telecast from July end with 50% occupancy vcs
Author
Bangalore, First Published Jul 21, 2021, 10:06 AM IST
  • Facebook
  • Twitter
  • Whatsapp

‘ಸರ್ಕಾರದ ಆದೇಶದಂತೆ ನಾವು ಚಿತ್ರಮಂದಿರಗಳ ಬಾಗಿಲು ತೆರೆದಿದ್ದೇವೆ. ಇನ್ನೇನಿದ್ದರೂ ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದು ಒಂದೇ ಬಾಕಿ. ಆದರೆ, ಯಾರೂ ಕೂಡ ತಮ್ಮ ಚಿತ್ರಗಳ ಬಿಡುಗಡೆಯ ದಿನಾಂಕ ಘೋಷಣೆ ಮಾಡುತ್ತಿಲ್ಲ. ಹೀಗಾಗಿ ನಾವು ನಿರ್ಮಾಪಕರ ನಡೆಗೆ ಕಾಯುತ್ತಿದ್ದೇವೆ’ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್‌ ಹೇಳುತ್ತಾರೆ.

ಆಗಸ್ಟ್‌ 1ರಿಂದ ಚಿತ್ರಮಂದಿರಗಳಲ್ಲಿ ಶೇ.100 ಸೀಟು ಭರ್ತಿ ಆದೇಶ ಹೊರಬೀಳುತ್ತದೆ ಎಂಬ ಸುದ್ದಿ ಹರಿದಾಡುತ್ತಿರುವುದು ಅನೇಕ ನಿರ್ಮಾಪಕರಿಗೆ ನೆಮ್ಮದಿ ನೀಡಿದೆ. ‘ಆಗಸ್ಟ್‌ ತಿಂಗಳಲ್ಲಿ ಹೌಸ್‌ಫುಲ್‌ಗೆ ಅವಕಾಶ ನೀಡುತ್ತಾರೆಂಬ ಮಾಹಿತಿ ಇದೆ. ಶೇ.100ರಷ್ಟುಪ್ರೇಕ್ಷಕರಿಗೆ ಅವಕಾಶ ಇದ್ದರೆನೇ ಸಿನಿಮಾ ಬಿಡುಗಡೆ ಸಾಧ್ಯ’ ಎನ್ನುತ್ತಾರೆ ಸಲಗ ಸಿನಿಮಾ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌.

ಸಿನಿಮಾ, ಕಾಲೇಜು ಶುರು: ನೈಟ್‌ ಕರ್ಫ್ಯೂ ಅವಧಿ ಕಡಿತ!

ಮಲ್ಟಿಪ್ಲೆಕ್ಸ್‌ಗಳಲ್ಲಿ ಜು.30 ಸಿನಿಮಾ ಪ್ರದರ್ಶನ ಶುರುವಾಗುವ ಸಾಧ್ಯತೆ ಇದೆ. ಜು.30ರಂದು ತೆಲುಗಿನ ನಾಗಚೈತನ್ಯ ನಟನೆಯ ‘ಲವ್‌ ಸ್ಟೋರಿ’ ಹಾಗೂ ನಾನಿ ಅಭಿನಯದ ‘ಟಕ್‌ ಜಗದೀಶ್‌’ ಚಿತ್ರಗಳು ಬಿಡುಗಡೆ ಆಗುತ್ತಿವೆ. ಈ ಚಿತ್ರಗಳ ಪ್ರದರ್ಶನದ ಮೂಲಕ ಮಲ್ಟಿಪ್ಲೆಕ್ಸ್‌ಗಳು ಪ್ರದರ್ಶನ ಆರಂಭಿಸಲಿವೆ. ಈ ಕುರಿತು ಪಿವಿಆರ್‌ನ ರೀಜನಲ್‌ ಮ್ಯಾನೇಜರ್‌ ರಾಜೇಂದ್ರ ಸಿಂಗ್‌, ‘ನಾವು ನಮ್ಮ ಮೇಲಧಿಕಾರಿಗಳ ಸೂಚನೆಗಾಗಿ ಕಾಯುತ್ತಿದ್ದೇವೆ. ಇಲ್ಲಿಯವರೆಗೂ ಯಾವುದೇ ಬುಕ್ಕಿಂಗ್‌ ಆಗಿಲ್ಲ’ ಎನ್ನುತ್ತಾರೆ. ಎಲ್ಲಾ ಮಲ್ಟಿಪ್ಲೆಕ್ಸ್‌ಗಳ ಮ್ಯಾನೇಜರ್‌ಗಳು ಜು.25ರಂದು ಸಭೆ ಸೇರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶಿವರಾಜ್‌ಕುಮಾರ್‌, ಸುದೀಪ್‌, ದುನಿಯಾ ವಿಜಯ್‌, ಗಣೇಶ್‌, ಜಗ್ಗೇಶ್‌, ನೀನಾಸಂ ಸತೀಶ್‌, ರಮೇಶ್‌ ಅರವಿಂದ್‌ ಸೇರಿದಂತೆ ಹತ್ತಾರು ಚಿತ್ರಗಳು ಬಿಡುಗಡೆಗಾಗಿ ಸಿದ್ಧವಿದೆ.

ಸೆ.10ಕ್ಕೆ ಶಿವಣ್ಣ ನಟನೆಯ ಭಜರಂಗಿ 2 ತೆರೆಗೆ

ನಟ ಶಿವರಾಜ್‌ಕುಮಾರ್‌ ಅಭಿನಯದ ‘ಭಜರಂಗಿ 2’ ಸಿನಿಮಾ ಸೆಪ್ಟೆಂಬರ್‌ 10ಕ್ಕೆ ಬಿಡುಗಡೆ ಆಗುತ್ತಿದೆ. ಗೌರಿ ಗಣೇಶನ ಹಬ್ಬದ ಪ್ರಯುಕ್ತ ತಮ್ಮ ಚಿತ್ರವನ್ನು ತೆರೆಗೆ ತರಲು ಹೊರಟಿದ್ದಾರೆ ನಿರ್ಮಾಪಕ ಜಯಣ್ಣ. ಎ ಹರ್ಷ ನಿರ್ದೇಶನದ ಚಿತ್ರವಿದು.

ಅನೇಕ ಸಿನಿಮಾಗಳಿಗೆ ಮರು ಬಿಡುಗಡೆ

ಈಗಾಗಲೇ ಮೈಸೂರಿನ ಡಿಆರ್‌ಸಿ ಮಾಲ್‌ನಲ್ಲಿ ‘ರಾಬರ್ಟ್‌’, ‘ಯುವರತ್ನ’ ಹಾಗೂ ‘ಇನ್ಸ್‌ಪೆಕ್ಟರ್‌ ವಿಕ್ರವå’… ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಸಿನಿಮಾ ನೋಡಲು ಪ್ರೇಕ್ಷಕರು ಮಾತ್ರ ಬರುತ್ತಿಲ್ಲ. ನಾಲ್ಕು, ಐದು ಮಂದಿ ಮಾತ್ರ ಬರುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಹೊಸ ಸಿನಿಮಾಗಳು ಬರುವ ತನಕ ಪ್ರದರ್ಶನ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇನ್ನು ನಟ ತೇಜ್‌ ಅಭಿನಯದ ‘ರಿವೈಂಡ್‌’ ಚಿತ್ರವನ್ನು ಇದೇ ಶುಕ್ರವಾರ (ಜು.23) ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದೆ. ಸದ್ಯಕ್ಕೆ ಬುಕ್‌ ಮೈ ಶೋ ಎಟಿಟಿಯಲ್ಲಿ ಈ ಸಿನಿಮಾ ಪ್ರದರ್ಶನ ಆಗುತ್ತಿದೆ.

Follow Us:
Download App:
  • android
  • ios