Asianet Suvarna News Asianet Suvarna News

ಸಿನಿಮಾ, ಕಾಲೇಜು ಶುರು: ನೈಟ್‌ ಕರ್ಫ್ಯೂ ಅವಧಿ ಕಡಿತ!

* ಇಂದಿನಿಂದ ಅನ್‌ಲಾಕ್‌ 4.0: ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿ ಅವಕಾಶ

* 24ರಿಂದ ಡಿಗ್ರಿ ಕಾಲೇಜು ಆರಂಭ

* ದೇವಸ್ಥಾನಗಳಲ್ಲಿ ಪ್ರಸಾದ, ಸೇವೆಗೆ ಅನುಮತಿ

* ನೈಟ್‌ ಕರ್ಫ್ಯೂ ಅವಧಿ 1 ತಾಸು ಕಡಿತ: ಇನ್ನು ರಾತ್ರಿ 10ರಿಂದ ಕರ್ಫ್ಯೂ

Karnataka to reopen theatres cinema halls colleges from Monday pod
Author
Bangalore, First Published Jul 19, 2021, 7:33 AM IST

ಬೆಂಗಳೂರು(ಜು.19): ರಾಜ್ಯ ಸರ್ಕಾರವು ಭಾನುವಾರ ಅನ್‌ಲಾಕ್‌ 4.0 ಮಾರ್ಗಸೂಚಿ ಪ್ರಕಟಿಸಿದ್ದು, ಸೋಮವಾರದಿಂದ ಆಗಸ್ಟ್‌ 2ರವರೆಗೆ ಅನ್ವಯವಾಗುವಂತೆ ಶೇ.50ರಷ್ಟುಸಾಮರ್ಥ್ಯದೊಂದಿಗೆ ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್‌ ತೆರೆಯಲು ಅನುಮತಿ ನೀಡಿದೆ.

ಜತೆಗೆ ಜು.26ರಿಂದ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣದ ಕಾಲೇಜುಗಳ ವ್ಯಾಪ್ತಿಗೆ ಬರುವ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್‌ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಪ್ರಾರಂಭಿಸಲು ಅವಕಾಶ ನೀಡಿದೆ. ಆದರೆ, ಕನಿಷ್ಠ ಒಂದು ಡೋಸ್‌ ಕೊರೋನಾ ಲಸಿಕೆ ಪಡೆದ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿಗೆ ಮಾತ್ರ ಕಾಲೇಜಿಗೆ ಪ್ರವೇಶ ಕಲ್ಪಿಸಲು ಷರತ್ತು ವಿಧಿಸಿದೆ. ದೇಗುಲಗಳಲ್ಲಿ ಅರ್ಚನೆ, ಸೇವೆ, ಪ್ರಸಾದ ವಿನಿಯೋಗಕ್ಕೂ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೋನಾ ನಿಯಂತ್ರಣದ ಕುರಿತು ಸಭೆ ನಡೆಸಲಾಯಿತು. ಈ ವೇಳೆ ತಜ್ಞರೊಂದಿಗೆ ಚರ್ಚಿಸಿದ ಬಳಿಕ ಮುಖ್ಯಮಂತ್ರಿಗಳ ನಿರ್ದೇಶನದ ಅನ್ವಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಅವರು ಅನ್‌ಲಾಕ್‌ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ರಾತ್ರಿ 10 ಗಂಟೆಯಿಂದ ನೈಟ್‌ ಕರ್ಫ್ಯೂ

ಕೊರೋನಾ ಸೋಂಕು, ಪಾಸಿಟಿವಿಟಿ ದರ ಮತ್ತಷ್ಟುಇಳಿಕೆಯಾಗಿದೆ. ತಜ್ಞರು ನಿರ್ಬಂಧಗಳನ್ನು ಮತ್ತಷ್ಟುಸಡಿಲಸಬಹುದು ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಸೋಮವಾರದಿಂದ ಆಗಸ್ಟ್‌ 2 ರವರೆಗೆ ಅನ್ವಯವಾಗುವಂತೆ ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್‌, ಥಿಯೇಟರ್‌, ರಂಗಮಂದಿರ, ಸಭಾಂಗಣ ಹಾಗೂ ಸಂಬಂಧಪಟ್ಟವುಗಳಿಗೆ ಶೇ.50 ರಷ್ಟುಸಾಮರ್ಥ್ಯದೊಂದಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ರಾತ್ರಿ ಕರ್ಫ್ಯೂ ಮುಂದುವರೆಸಿದ್ದು ರಾತ್ರಿ 9 ಗಂಟೆ ಬದಲಿಗೆ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.

ಗಡಿಯಲ್ಲಿ ಕಠಿಣ ಕ್ರಮ ಮುಂದುವರಿಕೆ:

ಜುಲೈ 3ರಂದು ಮಹಾರಾಷ್ಟ್ರ ಹಾಗೂ ಕೇರಳದಿಂದ ಆಗಮಿಸುವವರಿಗೆ ಕೊರೋನಾ ನೆಗೆಟಿವ್‌ ವರದಿ ಕಡ್ಡಾಯಗೊಳಿಸಿದ್ದ ನಿಯಮವನ್ನು ಮುಂದುವರೆಸಲಾಗಿದೆ. ತುರ್ತು ಪರಿಸ್ಥಿತಿಯಲ್ಲದ ಹೊರತು ಪ್ರತಿಯೊಬ್ಬರೂ 72 ಗಂಟೆಗಳಿಗಿಂತ ಹಳೆಯದಲ್ಲದ ನೆಗೆಟಿವ್‌ ವರದಿ ತರಬೇಕು. ತುರ್ತು ಅಗತ್ಯಗಳಿಗೆ ಆಗಮಿಸುವವರಿಗೆ ರಾಜ್ಯದಲ್ಲೇ ಪರೀಕ್ಷೆ ನಡೆಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ವಿವಿಧ ದೇಗುಲ ಸೇವೆಗಳಿಗೆ ಅವಕಾಶ:

ಸಭೆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್‌. ಅಶೋಕ್‌, ಸೋಮವಾರದಿಂದ ರಾತ್ರಿ ಕರ್ಫ್ಯೂ 10 ಗಂಟೆಯಿಂದ ಜಾರಿಗೆ ಬರಲಿದೆ. ಇದರಿಂದ ವ್ಯಾಪಾರ, ವ್ಯವಹಾರ, ಉದ್ಯಮಗಳಿಗೆ ಹೆಚ್ಚಿನ ಅವಕಾಶವಾಗಲಿದೆ. ಇನ್ನು ಅನ್‌ಲಾಕ್‌ 3.0 ಮಾರ್ಗಸೂಚಿಯಲ್ಲಿ ದೇವಾಲಯ ಪ್ರವೇಶ, ದೇವರ ದರ್ಶನ ಹಾಗೂ ಆರತಿ ಸೇವೆಗೆ ಸೀಮಿತಗೊಳಿಸಿ ದೇವಾಲಯ ತೆರೆಯಲು ಅವಕಾಶ ನೀಡಲಾಗಿತ್ತು. ಸೋಮವಾರದಿಂದ ಇನ್ನು ಮುಂದೆ ದೇವಾಲಯಗಳಲ್ಲಿ ಎಲ್ಲ ರೀತಿಯ ಸೇವೆ ಪುನರ್‌ ಆರಂಭಕ್ಕೆ ಅವಕಾಶ ನೀಡಲಾಗಿದೆ. ಪೂಜೆ, ಹರಕೆ ತೀರಿಸುವುದು, ಅರ್ಚನೆ, ಪ್ರಸಾದ ವಿನಿಯೋಗಕ್ಕೆ ಅನುಮತಿ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಎಲ್ಲಾ ಧರ್ಮದ ಪ್ರಾರ್ಥನಾ ಮಂದಿರಗಳಿಗೂ ಇದೇ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದರು.

ಪಬ್‌ ಓಪನ್‌ ಇಲ್ಲ:

ಪಬ್‌ಗಳನ್ನು ತೆರೆಯಲು ಅನುಮತಿ ನೀಡುವ ಬಗ್ಗೆ ಚರ್ಚೆಯಾಗಿದೆ. ಆದರೆ, ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಜುಕೊಳ ತೆರೆಯುವ ಬಗ್ಗೆ ನಿರ್ಧಾರವಾಗಿಲ್ಲ ಎಂದು ಸಚಿವ ಆರ್‌. ಅಶೋಕ್‌ ತಿಳಿಸಿದರು.

ಏನಿದೆ?

- ಶೇ.50 ಸಾಮರ್ಥ್ಯದೊಂದಿಗೆ ಥಿಯೇಟರ್‌, ಮಲ್ಟಿಪ್ಲೆಕ್ಸ್‌, ರಂಗಮಂದಿರ

- ಜು.26ರಿಂದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್‌, ಐಟಿಐ ತರಗತಿ

- ದೇಗುಲಗಳಲ್ಲಿ ಸೇವೆ, ಅರ್ಚನೆ, ಪ್ರಸಾದ ವಿನಿಯೋಗ

ಏನಿಲ್ಲ?

- ಪಬ್‌ಗಳು

- ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಭೆಗಳು

- ಪ್ರತಿಭಟನೆ, ಇತರೆ ಸಮಾರಂಭ

- ಈಜುಕೊಳ

Follow Us:
Download App:
  • android
  • ios