Asianet Suvarna News Asianet Suvarna News

ಕಾಂತಾರಗೆ ಗೆಲುವು; ತಡೆಯಾಜ್ಞೆ ತೆರವು, 'ವರಾಹ ರೂಪಂ..' ಹಾಡು ಬಳಕೆಗೆ ಕೋರ್ಟ್ ಅನುಮತಿ?

ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ನೀಡಿದ್ದ ತಡೆಯಾಜ್ಞೆಯನ್ನು ಕೇರಳ ಸ್ಥಳಿಯ ಕೋರ್ಟ್ ತೆರುವು ಮಾಡಿದ್ದು ಹಾಡು ಬಳಕೆಗೆ ಅನುಮತಿ ನೀಡಿದೆ. 

Kantara team win in the Kerala court against plea on Varaha Roopam song sgk
Author
First Published Nov 25, 2022, 3:27 PM IST

ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ನೀಡಿದ್ದ ತಡೆಯಾಜ್ಞೆಯನ್ನು ಕೇರಳ ಸ್ಥಳಿಯ ಕೋರ್ಟ್ ತೆರುವು ಮಾಡಿದ್ದು ಹಾಡು ಬಳಕೆಗೆ ಅನುಮತಿ ನೀಡಿದೆ. ಹಾಡಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಭಾರಿ ಹಿನ್ನಡೆಯಾಗಿದ್ರೆ ಕಾಂತಾರತಂಡ ಗೆದ್ದು ಬೀಗಿದೆ. ವರಾಹ ರೂಪಂ ಹಾಡನ್ನು ಬಳಸದಂತೆ ತಾತ್ಕಾಲಿಕ  ತಡೆಯಾಜ್ಞೆ ನೀಡಿದ್ದ ಕೋಯಿಕ್ಕೋಡ್ ನ್ಯಾಯಾಲಯ ವಿವಾದದ ಬಗ್ಗೆ ಅಂತಿಮ ಆದೇಶ ಹೊರಡಿಸಿದ್ದು ತೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನೇ ವಜಾ ಮಾಡಿದೆ. ಈ ಬಗ್ಗೆ ವರಾಹ ರೂಪಮ್ ಹಾಡು ಬರೆದಿರುವ ಶಶಿರಾಜ್ ರಾವ್ ಕಾವೂರ್ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 
 
'ಗೌರವಾನ್ವಿತ ಕೇರಳದ ಹೈಕೋರ್ಟ್ ಕಾಂತಾರ ತಂಡಕ್ಕೆ ಸ್ಥಳಿಯ ನ್ಯಾಯಾಲಯದಿಂದ ಪರಿಹಾರ ಪಡೆಯಲು ನಿರ್ಧರಿಸಿತ್ತು. ವಿಚಾರಣೆ ನಂತರ ಸ್ಥಳಿಯ ಕೋರ್ಟ್  ತೈಕ್ಕುಡಂ ಬ್ರಿಡ್ಜ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ವರಾಹ ರೂಪಂ ಹಾಡಿಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವು ಮಾಡಲಾಗಿದೆ' ಎಂದು ಬಹಿರಂಗ ಪಡಿಸಿದರು. ಕೋರ್ಟ್ ತೀರ್ಪು ಕಾಂತಾರ ತಂಡಕ್ಕೆ ಸಂತಸ ತಂದಿದ್ದು ಗೆದ್ದ ಖುಷಿಯಲ್ಲಿದೆ.

ಕೇರಳ ಮೂಲದ ತೈಕ್ಕುಡಂ ಬ್ರಿಡ್ಜ್ ಎಂಬ ಬ್ಯಾಂಡ್ ಕಾಂತಾರ ನಿರ್ಮಾಪಕರ ವಿರುದ್ಧ 'ನವರಸಂ' ಹಾಡನ್ನು ಕದ್ದಿದ್ದಾರೆ ಎಂದು ಕೃತಿಚೌರ್ಯದ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದರು. ಕೇರಳದ ಸ್ಥಳಿಯ ಕೋರ್ಟ್ ಈ ಹಾಡನ್ನು ಪ್ರಸಾರ ಮಾಡದಂತೆ ಆದೇಶ ಹೊರಡಿಸಿತ್ತು. ಬಳಿಕ ವರಾಹ ರೂಪಮ್ ಹಾಡನ್ನು ಎಲ್ಲಾ ಮ್ಯೂಸಿಕ್ ಆಪ್ ಮತ್ತು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ. ಬಳಿಕ ಹೊಂಬಾಳೆ ಫಿಲ್ಮ್ಸ್ ಕೇರಳ ಹೈಕೋರ್ಟ್ ಮೊರೆ ಹೋಗಿತ್ತು. ಸ್ಥಳಿಯ ನ್ಯಾಯಾಲದ ತೀರ್ಪಿನ ವಿರುದ್ಧ ಹೊಂಬಾಳೆ ಸಲ್ಲಿಸಿದ್ದ ಅರ್ಜಿಗಳನ್ನು ಸಿಎಸ್ ಡಯಾಸ್ ನೇತೃತ್ವದ ಏಕ ಪೀಠವು ವಜಾಗೊಳಿಸಿತ್ತು. 'ಅಧೀನ ನ್ಯಾಯಾಲಯಗಳು ಹೊರಡಿಸಿದ ಎಲ್ಲಾ ಆದೇಶಗಳಲ್ಲಿ ನಾವು ಮಧ್ಯ ಪ್ರವೇಶಿಸಬಾರದು. ಹಾಗೆ ಮಾಡಿದರೆ ಅಧೀನ ನ್ಯಾಯಾಲಯಗಳು ಬಲಗುಂದಿದಂತೆ ಆಗುತ್ತವೆ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. 

ವರಾಹ ರೂಪಂ.. ಹಾಡಿಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡು ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಪ್ರಸಾರವಾಗುತ್ತದೆ. ಆದರೆ ಇತ್ತೀಚಿಗಷ್ಟೆ ಒಟಿಟಿಯಲ್ಲಿ ರಿಲೀಸ್ ಆದ ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಹಾಡನ್ನು ಹೊಸ ವರ್ಷನ್‌ನಲ್ಲಿ ರಿಲೀಸ್ ಮಾಡಲಾಗಿತ್ತು. ಇದೀಗ ಕೋರ್ಟ್ ಅನುಮತಿ ನೀಡಿರುವುದು ತಂಡಕ್ಕೆ ಸಂತಸ ತಂದಿದೆ. 

ಆದರೆ ಈ ಸುದ್ದಿಯನ್ನು ತೈಕ್ಕುಡಂ ಬ್ರಿಡ್ಜ್ ತಳ್ಳಿ ಹಾಕಿದೆ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ತೈಕ್ಕುಡಂ ಬ್ರಿಡ್ಜ್ ತಂಡ 'ಕೋರ್ಟ್ ಇನ್ನೂ ಅನುಮತಿ ನೀಡಿಲ್ಲ. ಅಧಿಕೃತ ಆದೇಶದ ಪ್ರತಿ ಎಲ್ಲಿದೆ' ಎಂದು ಪ್ರಶ್ನೆ ಮಾಡಿದರು. 

Follow Us:
Download App:
  • android
  • ios