ತಾಂತ್ರಿಕ ದೋಷದಿಂದ ಅರ್ಧಕ್ಕೆ ನಿಂತ ಕಾಂತಾರ ಸಿನಿಮಾ, ಟಿಕೆಟ್ ಹಣ ವಾಪಸ್ ಕೊಟ್ಟ ಚಿತ್ರಮಂದಿರ ಮಾಲೀಕ

ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು

ತುಮಕೂರು(ಅ.22):  ಭಾರತೀಯ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿರುವ ಕಾಂತಾರ ಸಿನಿಮಾದ ಪ್ರದರ್ಶನ ತಾಂತ್ರಿಕ ದೋಷದಿಂದ ಅರ್ಧಕ್ಕೆ‌ ನಿಂತ ಘಟನೆ ಇಂದು(ಶನಿವಾರ)ನಗರದ ಗಾಯಿತ್ರಿ ಚಿತ್ರಮಂದಿರದಲ್ಲಿ ನಡೆದಿದೆ.

ಇಂದು ಮಧ್ಯಾಹ್ನದ ಶೋನಲ್ಲಿ ಚಿತ್ರ ಪದರ್ಶನ ನಡೆಯುತ್ತಿತ್ತು. ಕೊನೆಯ 20 ನಿಮಿಷ ಬಾಕಿ ಇರುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸೌಂಡ್ ಪ್ರೊಸೆಸರ್‌ನಲ್ಲಿ ದೋಷ ಉಂಟಾದ ಪರಿಣಾಮ ಚಿತ್ರ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದ ಥಿಯೇಟರ್‌ನಲ್ಲಿದ್ದ ಸಿನಿ ಪ್ರೇಕ್ಷಕರು ಗಲಾಟೆ ಶುರು ಮಾಡಿದ್ದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. 

ಹಿಟ್‌ ಮೂವಿಗೆ ಹಾತೊರೆಯುತ್ತಿದೆ ಬಾಲಿವುಡ್‌; ಇತಿಹಾಸ ಸೃಷ್ಟಿಸಿವೆ ಕನ್ನಡ ಚಿತ್ರಗಳು!

ಮಧ್ಯಾಹ್ನದ ಈ ಶೋಗೆ 650 ಟಿಕೆಟ್ ನೀಡಲಾಗಿತ್ತು. ಥಿಯೇಟರ್ ಕಂಪ್ಲೀಟ್ ಆಗಿ ಹೌಸ್ ಪುಲ್ ಆಗಿತ್ತು. ಪ್ರೇಕ್ಷಕರ ಗಲಾಟೆಗೆ ಬೆದರಿದ ಥಿಯೇಟರ್ ಮಾಲೀಕರು ಟಿಕೆಟ್ ಹಣವನ್ನು ವಾಪಸ್ ನೀಡಿದ್ದಾರೆ. ತುಮಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಲಾಟೆ ಶುರುವಾಗುತ್ತಿದ್ದಂತೆ ಪೊಲೀಸರು ಥಿಯೇಟರ್ ಬಳಿಗೆ ಜಮಾಯಿಸಿ ಹೆಚ್ಚಿನ ಘರ್ಷಣೆಗೆ ಅವಕಾಶ ಕೊಡದಂತೆ ತಡೆದಿದ್ದಾರೆ.