ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ 'ಕಾಂತಾರ' ನಟಿ ಸಪ್ತಮಿ; ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್
ಕಾಂತಾರ ಸಕ್ಸಸ್ ಬೆನ್ನಲ್ಲೇ ನಟಿ ಸಪ್ತಮಿ ಗೌಡ ಕಟೀಲು ದುರ್ಗಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ಕಾಂತಾರ ಸಿನಿಮಾದ ಹವಾ ಇನ್ನೂ ಕಡಿಮೆ ಆಗಿಲ್ಲ. ದೇಶ-ವಿದೇಶಗಳಲ್ಲಿ ಕಾಂತಾರ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಕೋಟಿ ಕೋಟಿ ಬಾಚಿಕೊಳ್ಳುವ ಮೂಲಕ ದೇಶದಾದ್ಯಂತ ಸದ್ದು ಮಾಡುತ್ತಿದೆ. ಸಿನಿಮಾ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ನಟಿ ಸಪ್ತಮಿ ಗೌಡ ಮಂಗಳೂರಿನ ದೈವೀ ಕ್ಷೇತ್ರಗಳಿಗೆ ಭೇಟಿ ನೀಡಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನ ಕಲ್ಲಾಪು ಬಳಿಯ ಬುರ್ದುಗೋಳಿಯ ಗುಳಿಗ ದೈವಸ್ಥಾನ, ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳ ಹಾಗೂ ಈ ಭಾಗದ ಕೆಲವು ದೈವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದ ಸಪ್ತಮಿ ಗೌಡ ಇದೀಗ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೂಡಬಿದರೆ ತಾಲೂಕಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬದ ಜೊತೆ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದ ನಟಿ ಸಪ್ತಮಿ ಗೌಡ ವಿಶೇಷ ಪೂಜೆ ಸಲ್ಲಿಸಿದರು.
ಸಪ್ತಮಿ ಗೌಡ ಜೊತೆ ತಾಯಿ ಶಾಂತಾ ಹಾಗೂ ಸುನಿಲ್ ಗುರು ಕೂಡ ಭೇಟಿ ನೀಡಿದ್ದರು. ಅರ್ಚಕರು ದೇವರ ಶೇಷವಸ್ತ್ರ, ಪ್ರಸಾದ ನೀಡಿ ಸಪ್ತಮಿಯನ್ನು ಗೌರವಿಸಿದರು. ಕಾಂತಾರ ಲೀಲಾ ಪೂಜೆ ಮುಗಿಸಿ ಹೊರಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಅಭಿಮಾನಿಗಳ ಪ್ರೀತಿಗೆ ಸಂತಸಗೊಂಡ ಸಪ್ತಮಿ ಸೆಲ್ಫಿಗೆ ಪೋಸ್ ನೀಡಿ ಸಂತಸ ಪಟ್ಟರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಮೂಗುತಿ ಸುಂದರಿ ಕಾಂತಾರ ಯಶಸ್ವಿನ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.
ಕೊರಗಜ್ಜ, ಗುಳಿಗ ಕ್ಷೇತ್ರಗಳಿಗೆ ಭೇಟಿ ನೀಡಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ ಕಾಂತಾರ ನಟಿ ಸಪ್ತಮಿ!
'ಕಾಂತಾರ ಯಶಸ್ವಿನ ಬಗ್ಗೆ ಹೆಮ್ಮೆ ಇದೆ. ತುಳುನಾಡಿನ ದೈವಾರಾಧನೆ ಬಗ್ಗೆ ನನಗೆ ಮೊದಲು ತಿಳಿದಿರಲಿಲ್ಲ.ಕಾಂತಾರ ಚಿತ್ರದ ನಂತರ ತಿಳಿದಿದೆ. ಈ ಸಿನಿಮಾ ಸಕ್ಸಸ್ ಬಳಿಕ ಬೇರೆ ಬೇರೆ ಸಿನಿಮಾದ ಬಗ್ಗೆ ಮಾತುಕತೆ ನಡೆಯುತಿದೆ. ತುಳು ಭಾಷೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ರೆ ಖಂಡಿತ ನಟಿಸುತ್ತೇನೆ' ಎಂದು ಹೇಳಿದರು.
ಕಟೀಲು ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಸಪ್ತಮಿ ಮಂಗಳೂರಿನ ಕಲ್ಲಾಪು ಬಳಿಯ ಬುರ್ದುಗೋಳಿಯ ಗುಳಿಗ ದೈವಸ್ಥಾನ, ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳಕ್ಕೆ ಹೋಗಿದ್ದರು. ಕುತ್ತಾರಿನ ಕೊರಗಜ್ಜನ ಆದಿಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಮಾತನಾಡಿ, 'ಕೊರಗಜ್ಜನ ಬಗ್ಗೆ ಕೇಳಿ ತಿಳಿದಿದ್ದೆ, ಸಾನ್ನಿಧ್ಯವನ್ನು ನೋಡುವ ತವಕದಿಂದ ಬಂದಿದ್ದೇನೆ. ಅಜ್ಜನ ದಯೆಯಿಂದ ಇನ್ನಷ್ಟು ಚಿತ್ರಗಳು ಸಿಗಲಿ ಎಂದು ಪ್ರಾರ್ಥಿಸಿದ್ದೇನೆ' ಎಂದಿದ್ದರು.
ಸಿನಿಮಾ ಕತೆ ಬರೆದ ಪೊಲೀಸ್ ಅಧಿಕಾರಿ ಉಮೇಶ್; ಸಪ್ತಮಿ ಗೌಡ ನಾಯಕಿ!
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ 50 ದಿನಗಳನ್ನು ಪೂರೈಸಿದೆ. ಈಗಲೂ ಸಿನಿಮಾ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್‌ನಲ್ಲೂ ಕಾಂತಾರ ಸಿನಿಮಾಗೆ ಅದ್ಭತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ 75 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಕಾಂತಾರ 100 ಕೋಟಿಯತ್ತ ಮುನ್ನುಗ್ಗುತ್ತಿದೆ. ಒಟ್ಟು ಕಾಂತಾರ ಸಿನಿಮಾದ ಕಲೆಕ್ಷನ್ 400 ಕೋಟಿಯಾಗಿದೆ ಎನ್ನಲಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಸಿನಿಮಾ ಮೂಡಿ ಬಂದಿದೆ.