ಬೆಳೆಯುವವರನ್ನು ತುಳಿಯಬಾರದು

- ಜೆಕೆ

ಕ್ರಿಕೆಟ್‌ ಕ್ಷೇತ್ರದಲ್ಲಿ ಇರುವಾಗಲೂ ನಾನು ಸ್ವಜನಪಕ್ಷಪಾತ ಎದುರಿಸಿದೆ. ಚಿತ್ರರಂಗಕ್ಕೆ ಬಂದ ಮೇಲೂ ಎದುರಿಸುತ್ತಿದ್ದೇನೆ. ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ನಟಿಸಿದ್ದೇ ಸಿನಿಮಾದಲ್ಲಿ ಲೀಡ್‌ ಮಾಡಬೇಕು ಅಂತ. ಅದಾದ ಮೇಲೆ ಜಸ್ಟ್‌ ಲವ್‌ ಸಿನಿಮಾ ಮಾಡಿದೆ. ಅದಕ್ಕಿಂತ ಮೊದಲು ಸಣ್ಣ ಪುಟ್ಟಪಾತ್ರ ಮಾಡುತ್ತಿದ್ದಾಗ ಯಾವುದೇ ತೊಂದರೆ ಇರಲಿಲ್ಲ. ಆದರೆ ಜಸ್ಟ್‌ ಲವ್‌ ಬಂದಾಗ ತೊಂದರೆ ಶುರುವಾಯಿತು. ಅದಕ್ಕೆ ಥಿಯೇಟರ್‌ ಸಿಗದಂತೆ ಮಾಡಿದರು. ಟಿವಿಯವರು ಆ ಸಿನಿಮಾ ಖರೀದಿ ಮಾಡದಂತೆ ನೋಡಿಕೊಂಡರು. ಇಲ್ಲಿಯವರೆಗೂ ಅದನ್ನು ನಾನು ಎದುರಿಸಿಕೊಂಡು ಬಂದಿದ್ದೇನೆ. ಹಿಂದಿಯಲ್ಲಿ ಸಿಯಾ ಕೆ ರಾಮ್‌ ಧಾರಾವಾಹಿಯಲ್ಲಿ ರಾವಣ ಪಾತ್ರಮಾಡಿದೆ. ಅದನ್ನು ಮುಗಿಸಿ ಬಂದ ಮೇಲೆ ಒಂದೂವರೆ ವರ್ಷ ಅವಕಾಶ ಸಿಗಲಿಲ್ಲ. ಕನ್ನಡ ಬಿಟ್ಟು ಹೋಗಿದ್ದಾರೆ, ಬಾಂಬೆಗೆ ಶಿಫ್ಟ್‌ ಆಗಿದ್ದಾರೆ ಎಂದೆಲ್ಲಾ ರೂಮರ್‌ ಹಬ್ಬಿಸಿದರು. ರಾವಣ ಪಾತ್ರ ಮಾಡಿ ಬಂದ ಮೇಲೆ ಲೀಡ್‌ ವಿಲನ್‌ ರೋಲ್‌ ಆದರೂ ಸಿಗಬಹುದು ಎಂದುಕೊಂಡೆ. ಆಗಲಿಲ್ಲ. ಬಿಗ್‌ ಬಾಸ್‌ ಹೋದೆ. ಅಲ್ಲಿ ದಯಾಳ್‌ ಸಿಕ್ಕರು. ಅವರ ಜತೆ ಆ ಕರಾಳ ರಾತ್ರಿ ಸಿನಿಮಾ ಮಾಡಿದೆ. 42 ದಿನಕ್ಕೆ ಥಿಯೇಟರ್‌ನಿಂದ ತೆಗೆದರು. ಪುಟ 109 ನಾಲ್ಕೇ ದಿನ. ಅದೇ ಚಿತ್ರದ ನಟನೆಗೆ ಆ್ಯಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆದ ಚಿತ್ರೋತ್ಸವದಲ್ಲಿ ಬೆಸ್ಟ್‌ ಏಷ್ಯನ್‌ ಆ್ಯಕ್ಟರ್‌ ಕೆಟಗರಿಯಲ್ಲಿ ಎರಡನೇ ಸ್ಥಾನ ಸಿಕ್ಕಿತು. ಆದರೆ ಅವಕಾಶ ಸಿಗಲಿಲ್ಲ, ಹತ್ತು ವರ್ಷದಿಂದ ಈ ನೋವು ಎದುರಿಸುತ್ತಿದ್ದೇನೆ. ಇನ್ನೂ ಐದು ವರ್ಷ ಸುಮ್ಮನಿದ್ದರೆ ನಾನು ಬಿಟ್ಟು ಬಿಡುತ್ತೇನೆ ಎಂದುಕೊಂಡಿರಬಹುದು. ಆದರೆ ನಾನು ಬಿಡಲ್ಲ. ಫೈಟ್‌ ಮುಂದುವರಿಸುತ್ತೇನೆ. ಇಲ್ಲಿ ಅವಕಾಶ ಇಲ್ಲದಿದ್ದರೆ ಬೇರೆ ಕಡೆ ಅವಕಾಶ ಇದೆ. ಕನ್ನಡ ಬಿಟ್ಟು ಹೋಗಿದ್ದಾನೆ ಎನ್ನುತ್ತಾರೆ. ಯಾಕೆ ಹೋದೆ ಅಂತ ತಿಳಿದುಕೊಳ್ಳುವುದಿಲ್ಲ, ಹೊಸ ನಿರ್ದೇಶಕರು ನನಗಾಗಿ ಪಾತ್ರ ಬರೆಯುತ್ತಿದ್ದಾರೆ. ನಟಿಸುತ್ತೇನೆ. ನನ್ನದೊಂದೇ ಕೋರಿಕೆ. ಬೆಳೆಯುವವರನ್ನು ಯಾರೂ ತುಳಿಯಬಾರದು.

ಕಾಲೆಳೆಯುವವರನ್ನು ಬಿಟ್‌ ಹಾಕಿ ನಡೆಯಬೇಕು

- ನೆನಪಿರಲಿ ಪ್ರೇಮ್‌

ಸ್ವಜನಪಕ್ಷಪಾತ, ರಾಜಕೀಯ ಕಿತ್ತುಕೊಳ್ಳುವ ಪ್ರವೃತ್ತಿ ಎಲ್ಲಾ ಕಡೆ ಇದ್ದೇ ಇರುತ್ತದೆ. ಅದನ್ನೆಲ್ಲಾ ದಾಟಿಕೊಂಡು ಮೀರಿ ಬೆಳೆಯುವುದೇ ಒಂದು ಸವಾಲು. ಎಲ್ಲಾ ಕ್ಷೇತ್ರದಲ್ಲೂ, ಎಲ್ಲಾ ವಿಭಾಗದಲ್ಲೂ ಅವಕಾಶ ಕಿತ್ತುಕೊಳ್ಳುವವರು, ಕಾಲೆಳೆಯುವವರು ಇದ್ದೇ ಇರುತ್ತಾರೆ. ಹಾಗಂತ ಅವರ ಬಗ್ಗೆಯೇ ಯೋಚನೆ ಮಾಡಿಕೊಂಡು ಕೂರುವುದರಲ್ಲಿ ಅರ್ಥವಿಲ್ಲ. ನನ್ನ ಅವಕಾಶವನ್ನೂ ಕಿತ್ತುಕೊಳ್ಳಲಾಗಿದೆ. ಇದೆಲ್ಲಾ ಎದುರಾದಾಗಲೂ ಎಲ್ಲವನ್ನೂ ಮೀರಿ ನಮ್ಮದೇ ಆದ ಒಂದು ಸ್ಥಾನ ಗಿಟ್ಟಿಸಿಕೊಂಡು ನಿಂತುಕೊಳ್ಳುತ್ತೇವಲ್ಲ ಅದೇ ನಿಜವಾದ ಹೀರೋಯಿಸಂ ಅಲ್ವಾ. ನನ್ನ ಅವಕಾಶ ಬೇರೆ ಯಾರೋ ಕಿತ್ತುಕೊಂಡರು ಅಂತ ನಾವು ಬೇರೆ ಥರ ಹೆಜ್ಜೆ ಇಡಬಾರದು. ಸವಾಲಾಗಿ ಸ್ವೀಕರಿಸಬೇಕು. ಬದುಕುವ ಹಠ ಇದ್ದರೆ ಬದುಕುವ ದಾರಿ ಸಾವಿರಾರು ಇರುತ್ತದೆ. ಒಂದಲ್ಲದಿದ್ದರೆ ಇನ್ನೊಂದು ಅವಕಾಶ ಇರುತ್ತದೆ. ಕಾಲೆಳೆಯುವವರ ಕಡೆಗೆ ಗಮನ ಕೊಟ್ಟರೆ ಡಿಪ್ರೆಶನ್‌ಗೆ ಹೋಗುತ್ತೇವೆ. ಆ ಥರ ಆಗಬಾರದು. ಪಾಸಿಟಿವ್‌ ಆಗಿರಬೇಕು. ಎಲ್ಲರೂ ನೋವುಗಳನ್ನು ಗೆಳೆಯರು, ಕುಟುಂಬದ ಜತೆ ಹಂಚಿಕೊಳ್ಳಬೇಕು. ನಮ್ಮ ನೋವು ನಾವೇ ಇಟ್ಟುಕೊಳ್ಳುತ್ತೇವೆ ಅಂತ ಇದ್ದರೆ ತಲೆ ಕೆಟ್ಟು ಹೋಗುತ್ತದೆ. ಗಾಡಿ ಸವೀರ್‍ಸ್‌ಗೆ ಕೊಟ್ಟಂತೆ ನಮ್ಮ ತಲೆಯನ್ನೂ ಸವೀರ್‍ಸ್‌ ಮಾಡಬೇಕು. ಫ್ರೆಂಡ್ಸು, ಫ್ಯಾಮಿಲಿ ನಮ್ಮ ದೇಹವನ್ನು ಸವೀರ್‍ಸ್‌ ಮಾಡುವ ಮೆಕ್ಯಾನಿಕ್‌ ಗಳಿದ್ದಂತೆ.

ಬೇರೆಯವರನ್ನು ದೂರುವುದರಲ್ಲಿ ಅರ್ಥವಿಲ್ಲ

- ಧನಂಜಯ್‌

ಯಾರಾದರೂ ಹೊಸದಾಗಿ ಶುರು ಮಾಡಿದಾಗ ಕಷ್ಟಆಗಿಯೇ ಆಗುತ್ತದೆ. ಆದರೆ ಯಾರು ಯಾರನ್ನೂ ತಡೆಯಲಿಕ್ಕಾಗುವುದಿಲ್ಲ. ಪ್ರತೀ ಕ್ಷೇತ್ರದಲ್ಲೂ ಹೀಗೆಯೇ ಇರುತ್ತದೆ. ಒಬ್ಬರನ್ನೊಬ್ಬರು ಗೌರವಿಸುವುದು ಕಲಿಯಬೇಕು. ಪೊಟೆನ್ಷಿಯಲ್‌ ಇದ್ದರೆ ನಾವು ಬೆಳೆದೇ ಬೆಳೆಯುತ್ತೇವೆ. ಅವರವರ ಶಕ್ತಿಗೆ ಅನುಗುಣವಾಗಿ ಅವರವರು ಸಿನಿಮಾ ಮಾಡುತ್ತಾರೆ. ನಮಗೆ ಏನು ಬೇಕೋ ಅದನ್ನು ನಾವೇ ದುಡಿದು ಗಳಿಸಿಕೊಂಡು ಪಡೆಯಬೇಕೇ ಬೇರೆಯವರನ್ನು ದೂರುವುದರಲ್ಲಿ ಅರ್ಥವಿಲ್ಲ.