‘ಈ ಸಲದ ಹುಟ್ಟುಹಬ್ಬದ ಸಂಭ್ರಮವೇ ಬೇರೆ. ಅದನ್ನು ನೆನೆಸಿಕೊಂಡೇ ಪುಳಕಗೊಳ್ಳುತ್ತಿದ್ದೇನೆ’ ಅಂದರು ಅನಂತನಾಗ್‌. ಇಂದು ಅವರಿಗೆ ಎಪ್ಪತ್ತಮೂರು ತುಂಬುತ್ತದೆ. 74ಕ್ಕೇ ಕಾಲಿಡುತ್ತಿದ್ದಾರೆ. ಸ್ವಾತಂತ್ರ್ಯ ಬಂದ ಮಾರನೆಯ ವರ್ಷ ಹುಟ್ಟಿದ ಅನಂತನಾಗ್‌, ಕಲಾವಿದನಾಗಿ, ಚಿಂತಕನಾಗಿ ವ್ಯಕ್ತಿಸ್ವಾತಂತ್ರ್ಯದ ಪರ ನಿಂತವರು.

ಈ ಸಲದ ಹುಟ್ಟುಹಬ್ಬ ವಿಶೇಷ ಸಂಭ್ರಮಕ್ಕೆ ಸಕಾರಣಗಳಿವೆ. ಅವರೀಗ ಶಿಶಿರ್‌ ರಾಜಮೋಹನ್‌ ನಿರ್ದೇಶನದ ‘ಆಬ್ರಕಡಾಬ್ರ’ ಚಿತ್ರದ ಶೂಟಿಂಗಿಗಾಗಿ ಉಡುಪಿಯಲ್ಲಿದ್ದಾರೆ. ‘ನಾನು ಒಂದನೇ ಮತ್ತು ಎರಡನೇ ತರಗತಿ ಓದಿದ್ದು ಉಡುಪಿಯಲ್ಲಿ. ಆಗ ನನಗೆ ಆರು ವರ್ಷ. ನಮ್ಮ ತಂದೆ ಆಶ್ರಮದಿಂದ ಮಠಕ್ಕೆ ಸ್ಥಳ ಬದಲಾಯಿಸುತ್ತಿದ್ದ ದಿನಗಳವು. ನಾನು ಉಡುಪಿಯ ಶಂಕರರಾಯರ ಮನೆಯಲ್ಲಿದ್ದೆ. ನನ್ನೊಂದಿಗೆ ನನ್ನ ಅಕ್ಕನೂ ಇದ್ದಳು. ಶಂಕರರಾಯರ ಇಬ್ಬರು ಹೆಣ್ಮಕ್ಕಳ ಜತೆ ನಾವೂ ಅಜ್ಜರಕಾಡಿನ ಕಾನ್ವೆಂಟಿಗೆ ಹೋಗುತ್ತಿದ್ದೆವು. ಅದು ಹೆಣ್ಮಕ್ಕಳ ಶಾಲೆಯಾದರೂ ನಾಲ್ಕನೇ ತರಗತಿಯ ತನಕ ಹುಡುಗರಿಗೂ ಅವಕಾಶ ಇತ್ತು’.

ಅನಂತ್‌ನಾಗ್‌ ಹೊಸ ಸಿನಿಮಾ ಆಬ್ರಕಡಾಬ್ರ

    ಹೀಗೆ ಕೊಂಚ ಭಾವುಕರಾಗಿ ಉಡುಪಿಯ ನಂಟತನವನ್ನು ಅನಂತ್‌ ನೆನೆಯುತ್ತಾರೆ. ಅವರಿಗೆ ಉಡುಪಿಯೆಂದರೆ ಥಟ್ಟನೆ ನೆನಪಾಗುವುದು ಹುಲಿವೇಷ. ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಊರು ತುಂಬ ಹುಲಿವೇಷ. ಬಾಲಕ ಅನಂತ್‌ ಕೂಡ ಮನೆಗೆ ಬಂದು ಹುಲಿಕುಣಿತ ಕುಣಿಯುತ್ತಿದ್ದರಂತೆ. ಅದರ ಜೊತೆಗೇ ಕ್ರಿಸ್ಮಸ್‌ ಸಂದರ್ಭದಲ್ಲಿ ಕ್ರಿಶ್ಚಿಯನ್ನರು ಕುಣಿಯುತ್ತಿದ್ದ ಕೊಂಕಣಿ ಕ್ಯಾರೋಲ್ಸ್‌ ಜತೆ ರಾಗವಾಗಿ ಹಾಡುತ್ತಾ ಅನಂತ್‌ ಕೂಡ ಭಾಗವಹಿಸುತ್ತಿದ್ದರಂತೆ. ಹೀಗಾಗಿ ಬಾಲ್ಯದ ಒಂದಷ್ಟುಚಿತ್ರಗಳು 74ನೇ ಹುಟ್ಟುಹಬ್ಬದ ಹೊತ್ತಲ್ಲಿ ಮರುಕಳಿಸುತ್ತಿವೆ.

    ಉಡುಪಿಯ ಜತೆ ಮತ್ತೊಂದು ನೆನಪೂ ಅವರಲ್ಲಿದೆ. ‘ಶಂಕರ್‌ನಾಗ್‌ ಹುಟ್ಟಿದ್ದೂ ಅನಂತನಾಗ್‌ ಉಡುಪಿಯಲ್ಲಿದ್ದ ದಿನಗಳಲ್ಲೇ. ಅವರಿದ್ದ ಪ್ರದೇಶದ ಹೆಸರು ಕಿನ್ನಿಮೂಲ್ಕಿ. ಇಂಥ ಉಡುಪಿಯಲ್ಲಿ ಆಚರಿಸಿಕೊಳ್ಳುತ್ತಿರುವ ಹುಟ್ಟುಹಬ್ಬದಲ್ಲಿ ನನ್ನ ಮಗಳು ಅಳಿಯ ಕೂಡ ನನ್ನ ಜತೆಗೇ ಇರುತ್ತಾರೆ. ಇವೆಲ್ಲ ಸೇರಿಕೊಂಡು ಈ ಸಲ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆಯುವ ಹುಟ್ಟುಹಬ್ಬ ವಿಶೇಷ ಅನ್ನಿಸುತ್ತಿದೆ. ಇದನ್ನು ಬಿಟ್ಟರೆ ನನಗೆ ನೆನಪಿರುವುದು ಅಮೆರಿಕಾದಲ್ಲಿ ಆಚರಿಸಿದ ಒಂದು ಹುಟ್ಟುಹಬ್ಬ. ಅದನ್ನು ಸ್ಪಾನ್ಸರ್‌ ಮಾಡಿದ್ದವರು ಗಾಯತ್ರಿ. ಅವರೇ ಸ್ವಂತ ದುಡ್ಡಲ್ಲಿ ನನ್ನನ್ನು ಅಮೆರಿಕಾಕ್ಕೆ ಕರೆದುಕೊಂಡು ಹೋಗಿದ್ದರು.

    ಪಾಲ್ ಚಂದಾನಿ ಲುಕ್‌ನಲ್ಲಿ ಅನಂತ್‌ನಾಗ್; ಮೇಡ್ ಇನ್ ಬೆಂಗಳೂರು ಪೋಸ್ಟರ್ ಬಿಡುಗಡೆ!

    ‘ಇನ್ನೊಂದು ವರುಷ ಬಿಜಿಯಾಗಿರುತ್ತೇನೆ. ಇದೀಗ ‘ಮೇಡ್‌ ಇನ್‌ ಬೆಂಗಳೂರು’ ಸಿನಿಮಾ ಮುಗಿಸಿದೆ. ಇನ್ನೊಂದೆರಡು ದಿನದ ಚಿತ್ರೀಕರಣ ಮುಗಿಸಿದರೆ ‘ಗಾಳಿಪಟ 2’ ಪೂರ್ತಿಯಾಗುತ್ತದೆ. ಈಗ ಒಪ್ಪಿಕೊಂಡ ‘ಆಬ್ರಕಡಾಬ್ರ’ ಚಿತ್ರದಲ್ಲಿ ನಾನೊಬ್ಬ ಕ್ರಿಶ್ಚಿಯನ್‌ ಗೃಹಸ್ಥನ ಪಾತ್ರ ಮಾಡುತ್ತಿದ್ದೇನೆ. ಇದು ಮುಗಿಯುತ್ತಿದ್ದಂತೆ ‘ವಿಜಯಾನಂದ’ ಚಿತ್ರದಲ್ಲಿ ಒಂದು ಮುಖ್ಯವಾದ ಪಾತ್ರ ಮಾಡಲಿಕ್ಕೆ ಹೊರಡುತ್ತಿದ್ದೇನೆ. ಈ ನಾಲ್ಕು ಸಿನಿಮಾಗಳ ಜತೆಗೆ ಇನ್ನೊಂದೆರಡು ಹೊಸ ಸಿನಿಮಾಗಳು ಬಂದಿವೆ. ಅವುಗಳ ಸ್ಕಿ್ರಪ್ಟ್‌ ಅಧ್ಯಯನ ಮಾಡುತ್ತಿದ್ದೇನೆ. ಈ ಮಧ್ಯೆ ಒಂದೆರಡು ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತು. ಅವು ನನಗೆ ಹೊಂದುವುದಿಲ್ಲ ಅಂತ ಬಿಟ್ಟುಬಿಟ್ಟೆ’.

    ಹೀಗೆ ಅನಂತನಾಗ್‌ ಚಿತ್ರಜಗತ್ತಿನ ಚಿತ್ರ ತೆರೆದಿಟ್ಟರು.