ತರ್ಕ ಚಿತ್ರತಂಡದವರು ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಸುದೀಪ್, ದರ್ಶನ್, ಯಶ್, ಉಪೇಂದ್ರ, ಶಿವರಾಜ್‌ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಮನೆಗಳಿಗೆ ಭೇಟಿ ನೀಡಿದ್ದಾರೆ. ಆದರೆ, ಆ ನಟರು ಸಿಗಲಿಲ್ಲ. ಇದರಿಂದ ಪ್ರಚಾರ ಮಾಡಲು ಸಾಧ್ಯವಾಗದೆ ತಂಡವು ನಿರಾಶೆಗೊಂಡಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.
ಬೆಂಗಳೂರು (ಮಾ.13): ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸಬರೇ ಸೇರಿ ಮಾಡಿದಂತಹ ಸಿನಿಮಾ ತರ್ಕ ಚಿತ್ರತಂಡವು ಪ್ರಮೋಷನ್‌ಗಾಗಿ ಬೆಂಬಲಿಸಿ ಮಾತನಾಡುವಂತೆ ನಟರಾದ ಸುದೀಪ್, ದರ್ಶನ್, ಯಶ್, ಉಪೇಂದ್ರ, ಶಿವಣ್ಣ ಮನೆಗೆ ಹೋಗಿದ್ದಾರೆ. ಆದರೆ, ಅವರಿಗೆ ಸಿಕ್ಕ ಉತ್ತರವೇನು ಎಂಬುದನ್ನು ನೀವೇ ಒಮ್ಮೆ ವೈರಲ್ ವಿಡಿಯೋದಲ್ಲಿ ನೋಡಿ...
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸಬರು ಹೊಸ, ಹೊಸ ಕಥೆಗಳನ್ನು ಹಿಡಿದು ಸಿನಿಮಾ ಮಾಡುತ್ತಿದ್ದಾರೆ. ಕೆಲವರು ಬಡವರ ಮಕ್ಕಳು ಬೆಳಿಬೇಕು ಎಂದು ಹೇಳಿದರೆ, ಇನ್ನು ಕೆಲವರು ಯಾವುದನ್ನು ಮಾತನಾಡದೇ ಹೊಸಬರನ್ನು ಬೆಳೆಸುವುದಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಇನ್ನು ಕೆಲವರು ಯಾರ ಗೋಜಿಗೂ ಹೋಗದೇ ತಾವಾಯ್ತು, ತಮ್ಮ ಸಿನಿಮಾ ಆಯ್ತು ಎಂದು ಸುಮ್ಮನಿದ್ದಾರೆ. ಈ ಪೈಕಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳಾಗಿ ಮೆರೆಯುತ್ತಿರುವ ಹಾಗೂ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟರಿದ್ದಾರೆ. ಕೆಲವೊಮ್ಮೆ ಫ್ಯಾನ್ಸ್ ವಾರ್ ನಡೆಯುವಷ್ಟು ಅಭಿಮಾನಿಗಳನ್ನು ಹೊಂದಿದ್ದು, ಸಿನಿಮಾ ರಿಲೀಸ್ ಆದಾಗ ಜನ್ಮ ದಿನಾಚರಣೆ ವೇಳೆ ಇವರು ಶಕ್ತಿ ಪ್ರದರ್ಶನವನ್ನೂ ಮಾಡಲಿದ್ದಾರೆ. ಜೊತೆಗೆ, ಅವರ ಶಕ್ತಾನುಸಾರ ಹೊಸಬರನ್ನು ಬೆಳೆಸುತ್ತಿದ್ದಾರೆ.
ಆದರೆ, ಇತ್ತೀಚೆಗೆ ಹೊಸಬರೇ ಸೇರಿಕೊಂಡು ಮಾಡಿದ ತರ್ಕ ಸಿನಿಮಾದ ತಂಡವು ಕನ್ನಡ ಚಿತ್ರರಂಗದ ಹಾಲಿ ಸ್ಟಾರ್ ನಟರಾದ ಸುದೀಪ್, ದರ್ಶನ್, ಯಶ್, ಉಪೇಂದ್ರ, ಶಿವಣ್ಣ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಮನೆಗೆ ಅಲೆದಾಡಿದೆ. ಎಲ್ಲ ನಟರ ಮನೆಗೆ ಹೋಗಿ ನಟರ ಬಗ್ಗೆ ವಿಚಾರಿಸಿದಾಗ ಯಾರೊಬ್ಬರೂ ಕೈಗೆ ಸಿಕ್ಕಿಲ್ಲ. ಹೀಗಾಗಿ, ತರ್ಕ ಸಿನಿಮಾ ತಂಡವು ಯಾವ ಸ್ಟಾರ್ ನಟರಿಂದಲೂ ತಮ್ಮ ಸಿನಿಮಾದ ಪ್ರಮೋಷನ್ ಮಾಡಿಸಿಕೊಳ್ಳಲಾಗದೇ ಪರದಾಡಿದ್ದಾರೆ. ಈ ಸಂಬಂಧಪಟ್ಟ ವಿಡಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: ಕನ್ನಡ ಸಿನಿಮಾಗೆ ಜನ ಬರ್ತಿಲ್ಲ ಎಂದವರಿಗೆ ಕ್ಯಾಕರಿಸಿ ಉಗಿದ ನಿರ್ದೇಶಕ ಯೋಗರಾಜ್ ಭಟ್.. ಒಂದೊಂದು ಮಾತು ಅಲ್ಲಣ್ಣಾ..!
- ತರ್ಕ ಸಿನಿಮಾ ತಂಡವು ಆರಂಭದಲ್ಲಿ ದರ್ಶನ್ ಮನೆಗೆ ಹೋಗಿ ಡಿಬಾಸ್ ಇದ್ದಾರಾ? ಎಂದು ಕೇಳಿದ್ದಾರೆ. ಆಗ ದರ್ಶನ್ ಸರ್ ಇಲ್ಲ, ಫಾರ್ಮ್ ಹೌಸ್‌ಗೆ ಹೋಗಿದ್ದಾರೆ ಎನ್ನುತ್ತಾರೆ.ಇದಾದ ನಂತರ ಸುದೀಪ್ ಅವರ ಮನೆಗೆ ಹೋಗಿ ಸುದೀಪಣ್ಣ ಇದ್ದಾರಾ ಎಂದು ಕೇಳಿದ್ದಾರೆ. ಆಗ ಸುದೀಪ್ ಸರ್ ಇಲ್ಲ ಸಿಸಿಎಲ್‌ಗೆ ಹೋಗಿದ್ದಾರೆ ಎಂದು ಉತ್ತರ ಬರುತ್ತದೆ.
- ಅಲ್ಲಿಂದ ಯಶ್ ಅವರ ಮನೆಗೆ ಹೋಗು ಅಣ್ಣಾ ಯಶ್ ಅವರು ಇಲ್ವಾ? ಎಂದು ಕೇಳಿದಾಗ ಅವರು ಎಲ್ಲಿ ಹೋಗಿದ್ದಾರೆ ನಮಗೇ ಗೊತ್ತಿಲ್ಲ ಎಂಬ ಉತ್ತರ ಸಿಗುತ್ತದೆ.
- ನಂತರ ಶಿವರಾಜ್ ಕುಮಾರ್ ಅವರ ಮನೆಗೆ ಹೋಗಿ ಶಿವಣ್ಣ ಇದ್ದಾರಾ? ಎಂದು ಕೇಳಿದಾಗ ಇಲ್ಲಪ್ಪ ಅವರು ಹೊರಗೆ ಹೋಗಿದ್ದಾರೆ ಎಂದು ಭದ್ರತಾ ಸಿಬ್ಬಂದಿ ತಿಳಿಸುತ್ತಾರೆ.
- ಇದಾದ ನಂತರ ಪಕ್ಕದಲ್ಲಿಯೇ ಇದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಮನೆಗೆ ಹೋಗಿ ಅಶ್ವಿನಿ ಮೇಡಂ ಇದ್ದಾರಾ? ಎಂದು ಕೇಳಿದಾಗ ಅವರಿಲ್ಲ ಹೊರಗೆ ಹೋಗಿದ್ದಾರೆ ಎನ್ನುತ್ತಾರೆ.
- ಕೊನೆಗೆ ಉಪೇಂದ್ರ ಅವರ ಮನೆಗೆ ಹೋಗಿ ಉಪೇಂದ್ರ ಸರ್ ಇದ್ದಾರಾ? ಎಂದು ಕೇಳಿದಾಗ ಇಲ್ಲಪ್ಪ ಅವರು ಸಿನಿಮಾ ಶೂಟಿಂಗ್‌ಗೆ ಹೋಗಿದ್ದಾರೆ ಎಂದು ಉತ್ತರ ಬಂದಿದೆ.
ಇದನ್ನೂ ಓದಿ: ಕನ್ನಡದ ಸಿನಿಮಾ ರಿಲೀಸ್ ಮಾಡೋಕೆ ಚಿತ್ರಮಂದಿರ ಸಿಕ್ತಿಲ್ಲ; ಪರಭಾಷೆಯ ಛಾವಾ, ಡ್ರ್ಯಾಗನ್ ಹೌಸ್‌ಫುಲ್!
ತರ್ಕ ಸಿನಿಮಾ ತಂಡಕ್ಕೆ ಯಾವ ನಾಯಕರು ಕೂಡ ಸಿಗದಿದ್ದಾಗ ಎಲ್ಲಿಗೆ ಹೋಗಬೇಕು ಎಂದು ತಿಳಿಯದೇ ತಲೆ ಮೇಲೆ ಕೈ ಹೊತ್ತುಕೊಂಡು ನಡೆದುಕೊಂಡು ಶಿವನ ದೇವಸ್ಥಾನಕ್ಕೆ ಹೋಗಿದ್ದಾರೆ. ದೇವರಲ್ಲಿ ಕೈ ಮುಗಿದು ನೀನೇ ಕಾಪಾಡಬೇಕು ಎಂದು ಅಲ್ಲಿಂದ ಹೊರಟು ಹೋಗಿದ್ದಾರೆ. ಆದರೆ, ಈ ವಿಡಿಯೋ ವೈರಲ್ ಬೆನ್ನಲ್ಲಿಯೇ ಲಕ್ಷಾಂತರ ಜನರು ಇವರ ಕಷ್ಟಕ್ಕೆ ಮರುಗಿದ್ದಾರೆ. ನೀವು ಧ್ರುವ ಸರ್ಜಾ ಮನೆಗೆ ಹೋಗಿ, ಗಣೇಶ್ ಮನೆಗೆ ಹೋಗಿ, ದುನಿಯಾ ವಿಜಯ್ ಮನೆಗೆ ಹೋಗಿ ಎಂದೆಲ್ಲಾ ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗರು 'ದೇವರಿದ್ದಾನೆ...ಅಷ್ಟ್ ಸಾಕು ಅಲ್ವಾ...ಮೊದಲು ತಾಯಿ ದೇವರಿಂದ ಆಶೀರ್ವಾದ ತಗೊಳ್ಳಿ, ನಂತರ ನಿಮ್ಮ ನೆಚ್ಚಿನ ದೇವರ ಆಶೀರ್ವಾದ ಖಂಡಿತ ಇದ್ದೆ ಇದೆ' ಎಂದು ಕಾಮೆಂಟ್ ಮಾಡಿ ಧೈರ್ಯ ತುಂಬಿದ್ದಾರೆ.
ಇನ್ನು ತರ್ಕ ಸಿನಿಮಾವನ್ನು ಪುನೀತ್ ಮಾನವ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಂಜನ್ ಮೂರ್ತಿ ನಾಯಕನಾಗಿ ಹಾಗೂ ಪ್ರತಿಮಾ ಠಾಕೂರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಶ್ವೇತಾ ಶ್ರೀನಿವಾಸ್, ನಿವಾಸ್ ಶ್ರೀ ಮುಂತಾದವರು ತಾರಾಗಣದಲ್ಲಿದ್ದಾರೆ. ಸೂರಜ್ ಜೋಯಿಸ್ ಸಂಗೀತ, ಕೆ ಅರುಣ್ ಕುಮಾರ್ ಛಾಯಾಗ್ರಹಣ ಹಾಗೂ ಉಜ್ವಲ್ ಚಂದ್ರ ಸಂಕಲನ ಸಿನಿಮಾಗಿದೆ.
