ಆಗಸ್ಟ್‌ ಮತ್ತು ಅಕ್ಟೋಬರ್‌ನಲ್ಲಿ ಬಹಳ ದೊಡ್ಡ ಸಿನಿಮಾಗಳು ಬರುತ್ತಿರುವುದರಿಂದ ಸಣ್ಣ ಚಿತ್ರತಂಡಗಳು ಹುಷಾರಾಗಿ ಹೆಜ್ಜೆ ಇಡುವ ಅಗತ್ಯವಿದೆ.

ಸು ಫ್ರಂ ಸೋ ಗೆಲುವಿನಿಂದ ಹಲವು ಚಿತ್ರತಂಡಗಳು ರಿಲೀಸ್ ದಿನಾಂಕ ಮುಂದಕ್ಕೆ ಹಾಕಿವೆ. ಆದರೆ ಆಗಸ್ಟ್‌ ಮತ್ತು ಅಕ್ಟೋಬರ್‌ನಲ್ಲಿ ಬಹಳ ದೊಡ್ಡ ಸಿನಿಮಾಗಳು ಬರುತ್ತಿರುವುದರಿಂದ ಸಣ್ಣ ಚಿತ್ರತಂಡಗಳು ಹುಷಾರಾಗಿ ಹೆಜ್ಜೆ ಇಡುವ ಅಗತ್ಯವಿದೆ.

ಆಗಸ್ಟ್‌ 14ರಂದು ಕೂಲಿ, ವಾರ್‌ 2: ಆ.14ರಂದು ರಜನಿಕಾಂತ್‌ ನಟನೆಯ, ಲೋಕೇಶ್‌ ಕನಗರಾಜ್‌ ನಿರ್ದೇಶನದ ‘ಕೂಲಿ’ ಮತ್ತು ಜೂ. ಎನ್‌ಟಿಆರ್‌, ಹೃತಿಕ್‌ ರೋಷನ್‌ ನಟನೆಯ ‘ ವಾರ್‌2’ ಬಿಡುಗಡೆಯಾಗುತ್ತಿದೆ. ಕೂಲಿ ಚಿತ್ರಕ್ಕೆ ಬಹಳ ಹೈಪ್‌ ಇರುವುದರಿಂದ ಕನಿಷ್ಠ ಪಕ್ಷ ಎರಡು ವಾರಕ್ಕಂತೂ ಮೋಸ ಇಲ್ಲ. ಹಾಗಾಗಿ ಬಹಳಷ್ಟು ಥಿಯೇಟರ್‌ಗಳು ಆ ಚಿತ್ರಕ್ಕೆ ಒಲವು ತೋರಿಸುವ ಸಾಧ್ಯತೆ ಇದೆ. ತೆಲುಗು ಬೆಲ್ಟ್‌ಗಳಲ್ಲಿ ‘ವಾರ್‌2’ ಮಹತ್ವ ಪಡೆದುಕೊಳ್ಳಲಿದೆ. ಆ.14 ಅಂದರೂ ಅದಕ್ಕೆ ಮೊದಲಿನ ವಾರ ಬಿಡುಗಡೆಯಾದ ಸಿನಿಮಾಗಳು ಬಹುದೊಡ್ಡ ಗೆಲುವು ಕಾಣದೇ ಇದ್ದರೆ ಮರುವಾರ ಥಿಯೇಟರ್‌ ಕಷ್ಟ.

ಅಕ್ಟೋಬರ್‌ನಲ್ಲಿ ಕಾಂತಾರ 1, ಡೆವಿಲ್‌: ಕಾಂತಾರ 1 ಚಿತ್ರ ಬಹುತೇಕ ಸಿದ್ಧಗೊಂಡಿದ್ದು, ಈಗಾಗಲೇ ಸಿನಿಮಾ ನೋಡಿರುವವರು ಕಾಂತಾರ 1 ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಕನಿಷ್ಠ ಮೂರು ವಾರಕ್ಕೆ ಮೋಸ ಇಲ್ಲ ಎನ್ನುತ್ತಿದ್ದಾರೆ. ಹಾಗಾಗಿ ಅಕ್ಟೋಬರ್‌ನಲ್ಲಿ ಕಾಂತಾರ ಹಬ್ಬ ನಡೆಯುವುದು ನಿಶ್ಚಿತವಾಗಿದೆ. ಅಕ್ಟೋಬರ್‌ 31ರಂದು ದರ್ಶನ್‌ ನಟನೆಯ ಡೆವಿಲ್‌ ಸಿನಿಮಾ ಬಿಡುಗಡೆಗೆ ಚಿತ್ರತಂಡ ಪ್ಲಾನ್‌ ರೂಪಿಸುತ್ತಿದೆ.

ಈ ಮಧ್ಯೆ ಸೆಪ್ಟೆಂಬರ್ ತಿಂಗಳು ಖಾಲಿ ಇದೆ. ಶಿವರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶಟ್ಟಿ ನಟನೆಯ 45 ಸಿನಿಮಾ ಬಿಡುಗಡೆ ಆದರೂ ಆದೀತು. ಇಲ್ಲದಿದ್ದರೆ ಅದೊಂದು ತಿಂಗಳು ಸ್ವಲ್ಪ ಖಾಲಿ ಇದೆ. ಪ್ರೇಮ್‌ ನಿರ್ದೇಶನದ ‘ಕೆಡಿ’ ಸಿನಿಮಾದ ಕೆಲಸ ಇನ್ನೂ ಬಾಕಿ ಇರುವುದರಿಂದ ಅವರು ಡಿಸೆಂಬರ್‌ನಲ್ಲಿ ಬರುವ ಸಾಧ್ಯತೆ ಇದೆ.