ಕನ್ನಡ ಚಿತ್ರರಂಗದ 'ಚಾಮಯ್ಯ ಮೇಷ್ಟ್ರು' ಅಂದ್ರೆ ಸಾಕು ಕಣ್ಣ ಮುಂದೆ ಬರುತ್ತಾರೆ ಕೆ.ಎಸ್‌. ಅಶ್ವತ್ಥ್‌ ಅವರು. ಈ ಹಿರಿಯ ನಟನ ಅಭಿನಯ ಮತ್ತು ಮಾತಿನ ಶೈಲಿ ಇನ್ನೂ ಎಲ್ಲರ ಮನಸ್ಸಿನಲ್ಲಿಯೂ ಅಚ್ಚಳಿಯದೇ ಉಳಿದಿದೆ. ಅವರ ಅದ್ಭುತವಾದ ನಟನೆಯ ಮೂಲಕ ಕನ್ನಡಿಗರ ಸಿನಿ ರಸಿಕರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಇದೀಗ ಅಶ್ವತ್ಥ್ ಮತ್ತು ಡಾ. ವಿಷ್ಣುವರ್ಧನ್ ಅಭಿನಯದ 'ಕರ್ಣ' ಸಿನಿಮಾ ವೀಕ್ಷಿಸಿ, ಪುತ್ರ ಶಂಕರ್ ಅಶ್ವತ್ಥ್‌ ತುಂಬಾ ಭಾವುಕರಾಗಿದ್ದಾರೆ. ತಮ್ಮ ಜೀವನದಲ್ಲಿ ಎದುರಾದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.

'ಟಿವಿಯಲ್ಲಿ 'ಕರ್ಣ' ಸಿನಿಮಾ ನೋಡಿದಾಗ ನನ್ನ ಜೀವನದ ಘಟನೆ ನೆನಪಿಸಿಕೊಂಡೆ. ನನ್ನ ಮನದ ಭಾವನೆಗಳನ್ನು ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳಬೇಕೆಂಬ ಕಾರಣದಿಂದ ಹೇಳುತ್ತಿದ್ದೇನೆ. ಈ ವಿಷಯ ನಾನು ಹೇಳಿ ಕೊಳ್ಳಲು ಕಾರಣ ಯಾರಿಂದಲೂ ಲೈಕ್ಸ್ ಗಿಟ್ಟಿಸಕ್ಕಾಗಲಿ, ಪ್ರಚಾರಕ್ಕಾಗಲಿ ಅಲ್ಲ. ಮನುಷ್ಯನಲ್ಲಿ ಏನೇ ಯೋಗ್ಯತೆ ಇದ್ದರೂ, ಅವನೆಷ್ಟೇ ಬುದ್ಧೀವಂತನಾದರೂ ವಿಧಿ ಲಿಖಿತ ಏನಾಗಿರುತ್ತೋ ಅದೇ ನಿಶ್ಚಿತ. ಇದನ್ನು ಕೆಲವರು ಒಪ್ಪದೇ, ಅತೀ ಬುದ್ಧಿವಂತಿಕೆಯಿಂದ ಯಾವುದರಲ್ಲಿ ಬೇಕಾದರೂ ತಪ್ಪನ್ನು ಹುಡುಕುತ್ತಾರೆ. ಅದೇ ಬುದ್ದಿವಂತರನ್ನು ಇಂದು ಕೊರೋನಾ ಬಗ್ಗೆ ಪ್ರಶ್ನಿಸಿದರೆ? ನೇರವಾದ ಉತ್ತರ ಸಿಗೋಲ್ಲ. ಎಲ್ಲವೂ ಭಗವಂತನ ಇಚ್ಛೆ,' ಎಂದು ಪ್ರಾರಂಭಿಸುತ್ತಾ ತಮ್ಮ ಜೀವದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ತಂದೆಯನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗಲಿಲ್ಲ,' ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

'ನಾನೂ ಜೀವನದಲ್ಲಿ ಏನೇನೋ ಮಾಡಿದೆ. ಆದರೆ, ಯಾವುದರಲ್ಲಿಯೂ ಉದ್ಧಾರ ಆಗಲಿಲ್ಲ, ಡಿ. ಫಾರ್ಮವನ್ನು ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಮಾಡಿದರೂ ಏನು ಪ್ರಯೋಜನ ಆಗಲಿಲ್ಲ, ಮೆಡಿಕಲ್ ಶಾಪ್ ಇಟ್ಟು ಕೊಂಡರೂ ಅಲ್ಲೂ ಸೋಲು. ಕೌನ್ ಬನೇಗಾ ಕರೋಡ್ ಪತಿಗೆ ಸೆಲೆಕ್ಟ್ ಆಗಿ, ಇಪ್ಪತ್ತು ವರ್ಷದ ಹಿಂದೆಯೇ ನನ್ನ ತಂದೆ ಜೊತೆ ಹೋಗಿದ್ದೆ. ಅಲ್ಲೂ ಟುಸ್, ಸೀರಿಯಲ್ ಬಹಳ ಇಷ್ಟಪಟ್ಟು, ತಂದೆಯನ್ನು ಒಪ್ಪಿಸಿ ಕಷ್ಟಪಟ್ಟು ಮಾಡಿದೆ. ಅಲ್ಲೂ ಸೋತೆ. ಯಾವುದಕ್ಕೂ ಜಗ್ಗದೇ ಹಾಗೇ ಜೀವನದಲ್ಲಿ ಮುಂದುವರೆದೆ. ಕೊನೆಗೂ ನಾನು ಅಂದುಕೊಂಡಂತೆ ನನ್ನ ತಂದೆಯನ್ನು ಸುಖವಾಗಿ ನೋಡಿಕೊಳ್ಳಲು ಆಗಲಿಲ್ಲ. ಆದರೆ ಬರೀ ವಿಧಿಯನ್ನೇ ನಿಂಧಿಸುತ್ತಾ ಸುಮ್ಮನೆ ಕೂರಲಿಲ್ಲ. ಕೈಯ್ಯಲ್ಲಾದದ್ದನ್ನು ಮಾಡುತ್ತಲೇ, ಇಲ್ಲಿಯವರೆಗೂ ಬಂದೆ. ಮತ್ತೆ ಈಗಿನ ಸಂಧರ್ಭ ಅರವತ್ತು ವಯಸ್ಸಾದವರ ಸಂಕಷ್ಟ, ಎಲ್ಲವನ್ನೂ ಮೆಲಕು ಹಾಕುತ್ತಿದ್ದೆ. ಅದಿರಲಿ ಇದನ್ನು ಪ್ರಸ್ತಾಪ ಮಾಡುವುದಕ್ಕೆ ಕಾರಣ ಕರ್ಣ ಚಿತ್ರದಲ್ಲಿ ನಾಯಕ, ತನ್ನ ತಂದೆಗೆ ಸಹಾಯ ಮಾಡಲು ವ್ಯಥೆ ಪಡುವುದು, ಹಾಗೂ ತಂದೆಗೆ ಅರವತ್ತು ವಯಸ್ಸಾದ್ದರಿಂದ ಕಿಡ್ನಿ ಸ್ವೀಕರಿಸಲು ನಿರಾಕರಿಸುವುದು, ನೋಡಿ ಬರೆಯಬೇಕನ್ನಿಸಿತು, ಬರೆದೆ,' ಎಂದು ಸಾಮಾಜಿ ಜಾಲತಾಣದಲ್ಲಿ ಸಕ್ರಿಯವಾಗಿರುವ ಶಂಕರ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

 

ಚಿತ್ರರಂಗದಲ್ಲಿ ಜೀವನದಲ್ಲಿ ತುಂಬಾನೇ ಏಳು ಬೀಳುಗಳನ್ನು ಎದುರಿಸಿರುವ ಶಂಕರ್ ಅಶ್ವತ್ಥ್‌ ಛಲ ಬಿಡದೇ ಕೆಲಸ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಪೋಷಕ ನಟರಾಗಿಯೂ ಅಭಿನಯಿಸುತ್ತಾ ಕ್ಯಾಬ್‌ ಡ್ರೈವ್‌ ಕೂಡ ಮಾಡುತ್ತಾರೆ.

ಅಣ್ಣವ್ರ ಹಾಡಿ, ಬಾಡಿಗೆ ಬಂದ್ರು:
ಲಾಕ್‌ಡೌನ್‌ ಸಡಿಲಿಕೆ ಬಳಿಕ ಕ್ಯಾಬ್‌ ಚಾಲನೆ ಶುರು ಮಾಡಿದ ಶಂಕರ್‌, ಯಾವುದೆ ಗಿರಾಕಿ ಸಿಗದೆ ಸುತ್ತಾಡುತ್ತಿದ್ದರಂತೆ. ಡಾ. ರಾಜ್‌ಕುಮಾರ್ ಅಭಿನಯದ 'ಬೇಡರ ಕಣ್ಣಪ್ಪ' ಸಿನಿಮಾ ಹಾಡು ಹಾಡುತ್ತಾ ಓಂಟಿಕೊಪ್ಪದ ಈಶ್ವರನ ದೇವಸ್ಥಾನದ ಮುಂದೆ ನಿಂತು ಕೊನೆ ಸಾಲುಗಳನ್ನು ಹೇಳುತ್ತಿದ್ದರಂತೆ. ಅದನ್ನೂ ಪೂರ್ಣಗೊಳ್ಳಿಸುವಷ್ಟರಲ್ಲಿ ಒಬ್ಬ ಗಿರಾಕಿಯನ್ನು ಪಡೆದರಂತೆ. ಇದನ್ನು ಕಾಕತಾಳೀಯವೋ ಅಥವಾ ದೈವತ್ವನೋ ನಂಬಿದವರಿಗೆ ಇದರ ಅರ್ಥವಾಗಬಹುದು ಎಂದು ಹೇಳುತ್ತಾ, ಅಂದಿನ ಕೆಲದ ಶುರು ಮಾಡಿದ್ದಾರಂತೆ.

 

ಒಬ್ಬ ನಿರೋದ್ಯೋಗಿ ಯುವಕನ ಕಥೆಯುಳ್ಳ ಕರ್ಣ ಚಿತ್ರ 1986ರಲ್ಲಿ ಬಿಡುಗಡೆಯಾಗಿತ್ತು. ನಿರೊದ್ಯೋಗಿ ಎಂಬ ಕಾರಣಕ್ಕೆ ಕರ್ಣನನ್ನು ಎಲ್ಲರೂ ನಿರ್ಲಕ್ಷಿಸುತ್ತಿರುತ್ತಾರೆ. ವಯಸ್ಸಾದ ಕಾಲದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ತಂದೆಗೆ ತನ್ನ ಕಿಡ್ನಿ ದಾನ ಮಾಡಲು ಈ ಯುವಕನೇ  ಮುಂದಾಗಿ ಎಲ್ಲರ ಮನ ಗೆಲ್ಲುವ ಈ ಕಥೆ ಎಂಥವರ ಕಣ್ಣಲ್ಲಿಯೂ ನೀರು ಬರಿಸುತ್ತದೆ. ವಿಷ್ಣುವರ್ಧನ್, ಸುಮಲತಾ ಮತ್ತು ಕೆ.ಎಸ್. ಅಶ್ವಥ್ ಅಭಿನಯಿಸಿದ ಈ ಚಿತ್ರಕ್ಕೆ ಎ.ಆರ್.ಭಾರ್ಗವ ಆ್ಯಕ್ಷನ್, ಕಟ್ ಹೇಳಿದ್ದರು. 'ಆ ಕರ್ಣನಂತೆ ನೀನು ದಾನಿಯಾದೆ, ಇನ್ನೊಂದು ಜೀವಕ್ಕೆ ಆಧಾರವಾದೆ...' ಎಂಬ ಏಸುದಾಸ್ ಹಾಡಿರುವ ಗೀತೆಗೆ ಎಂ.ರಂಗಾ ರಾವ್ ಸಂಗೀತ ನಿರ್ದೇಶಿಸಿದ್ದರು. ಈ ಹಾಡು ಇವತ್ತಿಗೂ ಕೇಳಿದವರ ಕಣ್ಣಲ್ಲಿ ನೀರು ತರಿಸುವುದು ಸುಳ್ಳಲ್ಲ. ಇದೇ ಚಿತ್ರ ಸಾಹೇಬ್ ಎಂಬ ಹೆಸರಿನಲ್ಲಿ ಹಿಂದಿ ಹಾಗೂ ಬಂಗಾಲಿಯೂ ರೀಮೇಕ್ ಆಗಿದೆ.