ಒಂದು ತಿಂಗಳ ನಂತರ ಕೈಗೆ ಸಿಕ್ತು ಡೆತ್‌ ನೋಟ್. ಬ್ಯುಸಿನೆಸ್‌ ಪಾರ್ಟನರ್‌ಗಳ ಮೇಲೆ ದೂರು ನೀಡಿದ ಸೌಂದರ್ಯ ಜಗದೀಶ್ ಪತ್ನಿ.... 

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಕಳೆದ ತಿಂಗಳ ತಮ್ಮ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂದು ತಿಂಗಳ ಕಾರ್ಯ ಮಾಡುವ ಸಮಯದಲ್ಲಿ ಪತ್ನಿ ಕಬೋರ್ಡ್‌ ತೆರೆದು ನೋಡಿದಾಗ ಡೆತ್‌ ನೋಟ್ ಸಿಕ್ಕಿದೆ. ಈ ವಿಚಾರದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 

'ನಮ್ಮ ಮನೆಯಲ್ಲಿ ತಾಯಿ ಮೊದಲು ಹೋಗಿ ಬಿಟ್ಟರು ಅದಾದ 15 ದಿನಕ್ಕೆ ಜಗದೀಶ್ ಹೋಗಿಬಿಟ್ಟರು. ಆ ಶಾಕ್‌ನಲ್ಲಿ ಇದ್ದಾಗ ನಮ್ಮ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವೇ ಆಗುತ್ತಿರಲಿಲ್ಲ. ನಮ್ಮ ನಾಲ್ಕು ಜನರ ನಡುವೆ ತುಂಬಾ ಅಟಾಚ್‌ಮೆಂಟ್‌ ಇತ್ತು ಹೀಗಾಗಿ ಆಗಾಗ ಅಕ್ಕ ಮತ್ತು ಭಾವ ಬಂದು ಹೋಗುತ್ತಿದ್ದರು. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಇರುವ ಮನೆಯನ್ನು ಜಗದೀಶ್ ಮತ್ತು ನಾನು ಸೇರಿ ಕಟ್ಟಿದ್ದು, ಈಗ ಅವರೇ ಇಲ್ಲ ಅಂದ್ರೆ ವಾಸಿಸಲು ಕಷ್ಟವಾಗುತ್ತಿದೆ. ಹೀಗಾಗಿ ಅಕ್ಕ ಭಾವನ ಮನೆಯಲ್ಲಿ ಇರುವುದು ಬರುವುದು ಮಾಡುತ್ತಿದ್ವಿ...ನಾವು ಇನ್ನೂ ಈ ಶಾಕ್‌ನಿಂದ ಹೊರ ಬಂದಿಲ್ಲ. 29 ಮೇ ಶ್ರೀರಂಗಪಟ್ಟಣದಲ್ಲಿ ಪೂಜೆ ಮಾಡಿಸಬೇಕು ಅಲ್ಲಿ ಜಗದೀಶ್‌ ಹಳೆ ಬಟ್ಟೆಗಳನ್ನು ಬಿಡಬೇಕು ಅಲ್ಲದೆ ಜೂನ್ 3ರಂದು ಬರ್ತಡೇ ಇರುವ ಕಾರಣ ವಿಶೇಷವಾಗಿ ಅಡುಗೆ ಮಾಡಿಸಿ ಇಡಬೇಕು ಏಕೆಂದರೆ ಅವರಿಗೆ ನಾನ್‌ವೆಜ್‌ ಇಷ್ಟ. ಈ ಕಾರಣಕ್ಕೆ ಅವರ ಕಬೋರ್ಡ್‌ ತೆರೆದು ನೋಡಿದರೆ ಬಟ್ಟೆಗಳ ನಡುವೆ ಡೆತ್‌ನೋಟ್‌ ಇತ್ತು' ಎಂದು ಜಗದೀಶ್ ಪತ್ನಿ ರೇಖಾ ಮಾತನಾಡಿದ್ದಾರೆ.

ಕನ್ನಡದ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ!

'ತುಂಬಾ ಶಾಕ್‌ನಲ್ಲಿ ಇದ್ದೀವಿ. ಜಗದೀಶ್ ಅವರನ್ನು ಕೊನೆ ಕೊನೆಯಲ್ಲಿ ತುಂಬಾನೇ ಸೈಲೆಂಟ್ ಮಾಡಿ ಬಿಟ್ಟರು ಇವರಿಂದ ನನಗೆ ಮತ್ತು ಮಗನಿಗೆ ತೊಂದರೆ ಮಾಡುತ್ತಾರೆ. ಬ್ಯುಸಿನೆಸ್‌ ಪಾರ್ಟನರ್‌ಗಳಿಂದ ಕಿರುಕುಳ ಆಗಿದೆ, ಅನೇಕ ಪೇಪರ್‌ಗಳಿಗೆ ಪೋರ್ಜರಿ ಮಾಡಿದ್ದಾರೆ, ಕಾಲಿ ಪೇಪರ್‌ಗೆ ಸೈನ್ ಹಾಕಿಸಿಕೊಂಡಿದ್ದಾರೆ, ಹಲವು ಚೆಕ್‌ಗಳಿಗೆ ಸೈನ್‌ ಹಾಕಿದ್ದಾರೆ. ನಾವು ಒಂದೇ ಗೂಡಿನ ಹಕ್ಕಿಗಳಂತೆ ಇದ್ವಿ ಎಂದೂ ನಮ್ಮನ್ನು ಬಿಟ್ಟು ದೂರ ಹೋದವರಲ್ಲ. ಜಗದೀಶ್‌ ಲಾಸ್ಟ್‌ ಕಾಲ್ ಮತ್ತು ಲಾಸ್ಸ್‌ ಮೆಸೇಜ್ ಬಂದಿರುವುದು ಹೊಂಬಣ್ಣ ಅವರಿಂದ. ಜೀವನ ಪೂರ್ತಿ ನಮಗೆ ಈ ನೋವು ಇದ್ದೇ ಇರುತ್ತದೆ. ನಮಗೆ ನ್ಯಾಯ ಸಿಕ್ಕರೆ ಅವರ ಸಾವಿಗೆ ನ್ಯಾಯ ಸಿಗುತ್ತದೆ' ಎಂದು ರೇಖಾ ಹೇಳಿದ್ದಾರೆ.

'ಮೊದಲು ಮೊದಲು ಪಾರ್ಟನರ್‌ಗಳ ಬಗ್ಗೆ ಆಗಾಗ ಹೇಳುತ್ತಿದ್ದರು ಆದರೆ ಇಷ್ಟು ಕಾಟ ಕೊಟ್ಟಿದ್ದಾರೆ ಅಂತ ಅಂದುಕೊಂಡಿರಲಿಲ್ಲ. ನನ್ನ ಗಂಡನಿಗೆ ನಾನು ಶಕ್ತಿಯಾಗಿ ನಿಂತಿದ್ದೀನಿ ನನ್ನ ಮಕ್ಕಳು ನನ್ನ ಪ್ರಾಣ ಎಂದು ಬರೆದಿದ್ದಾರೆ. ಸೌಂದರ್ಯ ಕಂಪನಿ ಲಾಸ್‌ನಲ್ಲಿ ಇರಲಿಲ್ಲ ಜಗದೀಶ್‌ ಇದುವರೆಗೂ ಯಾರಿಗೂ ಮೋಸ ಮಾಡಿಲ್ಲ ಅವರ ಪಾರ್ಟನರ್‌ ಈ ರೀತಿ ಮಾಡಿರುವುದು. ರಾಜರಾಜೇಶ್ವರಿ ನಗರ ಮತ್ತು ಸದಾಶಿವನಗರದಲ್ಲಿ ಇರುವ ಮನೆಯನ್ನು ಬ್ಯಾಂಕ್‌ ಅವರು ಸೀಜ್‌ ಮಾಡಲು ಅವರ ಪಾರ್ಟನರ್‌ ಕಾರಣ' ಎಂದಿದ್ದಾರೆ ರೇಖಾ.