ಸುಭಾಶ್ಚಂದ್ರ ವಾಗ್ಳೆ

ಪ್ರತಿಭಾವಂತ ಶಾಸ್ತ್ರೀಯ ನೃತ್ಯಕಲಾವಿದೆಯಾಗಿರುವ ಅವರು ಬಾಲ್ಯದಲ್ಲಿ ಸಂಗೀತಾಭ್ಯಾಸ ಮಾಡಿದ್ದರು. ಈ ಲಾಕ್‌ಡೌನ್‌ ರಜೆಯಲ್ಲಿ ಅವರು ನಾಲ್ಕೆ ೖದು ಭಾವಗೀತೆಗಳನ್ನು ಸ್ವತಃ ಹಾಡಿ, ಅದಕ್ಕೆ ತಕ್ಕಂತೆ ಅಭಿನಯ ಮಾಡಿ, ಅವುಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು. ಅವೀಗ ಎಷ್ಟೊಂದು ವೈರಲ್‌ ಆಗಿವೆ ಎಂದರೆ, ಒಂದೊಂದು ವಿಡಿಯೋವನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ, ನಾಡಿನ ಹಿರಿಯ ಕವಿಗಳು, ರಂಗಕರ್ಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹತ್ತಾರು ಕವಿಗಳು ತಾವು ಬರೆದ ಭಾವಗೀತೆಗಳನ್ನು ಇದೇ ರೀತಿ ಹಾಡುವಂತೆ ಮಾನಸಿಯವರಿಗೆ ದಂಬಾಲು ಬಿದ್ದಿದ್ದಾರೆ. ಮಾನಸಿಯವರ ಭಾವಾಭಿವ್ಯಂಜಕ ಅಭಿನಯನ್ನು ನೋಡಿ ಸಿನಿಮಾ, ಧಾರಾವಾಹಿಗಳಲ್ಲೂ ನಟಿಸುವಂತೆ ಆಹ್ವಾನಗಳೂ ಬಂದಿವೆ.

 

ಪತಿ, ವಿದ್ವಾನ್‌ ಸುಧೀರ್‌ ರಾವ್‌ ಕೊಡವೂರು ಅವರೊಂದಿಗೆ ನೃತ್ಯಶಾಲೆಯನ್ನು ನಡೆಸುತ್ತಿರುವ ಮಾನಸಿ, ಲಾಕ್‌ಡೌನ್‌ ಸಮಯವನ್ನು ವ್ಯರ್ಥ ಮಾಡದೆ ಮನೆಯಲ್ಲಿಯೇ ಪತಿ ಪತ್ನಿ ಹಾಡುಗಳನ್ನು ಹಾಡಿ, ಆಡಿಯೋವನ್ನು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದರು. ಇದು ಅವರ ಆಪ್ತರ ವಲಯದಲ್ಲಿ ಬಹಳ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರಿಂದ ಪ್ರೇರಿತರಾಗಿ ಮಾನಸಿ ಅವರಿಗೆ ವಿಡಿಯೋವನ್ನು ಮಾಡಿ ಅಪ್‌ಲೋಡ್‌ ಮಾಡುವ ಯೋಚನೆ ಹೊಳೆಯಿತು.

ಖ್ಯಾತ ರಂಗಕರ್ಮಿ ಗುರುರಾಜ್‌ ಮಾರ್ಪಳ್ಳಿ ಅವರು ಸಂಗೀತ ನಿರ್ದೇಶಿಸಿದ, ಬಿ.ಆರ್‌. ಲಕ್ಷ್ಮಣರಾವ್‌ ಅವರು ಬರೆದ ‘ಹೇಗಿದ್ದಿಯೇ ಟ್ವಿಂಕಲ…..’ ಎಂಬ ಹಾಡನ್ನು ಹಾಡಿ ಅಭಿನಯಿಸಿ ಫೇಸ್‌ಬುಕ್‌ಗೆ ಹಾಕಿದರು. ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಎಂತಹ ಸದ್ದು ಮಾಡಿತೆಂದರೇ ಸ್ವತಃ ಬಿ.ಆರ್‌.ಲಕ್ಷಣರಾವ್‌ ಅವರೇ ತಮ್ಮ ಕವನದ ಅಭಿವೃಕ್ತಿಯ ರೀತಿಯನ್ನು ಕಂಡು ಅಚ್ಚರಿಪಟ್ಟರು.

ಅಭಿವ್ಯಕ್ತಿಗೆ ಹೀಗೊಂದು ಸಾಧ್ಯತೆ ಇದೆ, ಇಷ್ಟುಜನರು ಪ್ರತಿಕ್ರಿಯಿಸುತ್ತಾರೆ, ಇಷ್ಟೊಂದು ಜನ ನೋಡಿ ಆನಂದಿಸುತ್ತಾರೆ ಎನ್ನುವ ಕಲ್ಪನೆಯೇ ಇರಲಿಲ್ಲ, ಆರಂಭದಲ್ಲಿ ಬಹಳ ಹೆದರಿಕೆ ಆಗಿತ್ತು, ಈಗ ಬಹಳ ಖುಷಿ ಆಗುತ್ತಿದೆ. ಜೊತೆಗೆ ಈ ಟ್ರೆಂಡ್‌ನ್ನು ಮುಂದುವರಿಸುವ ಸವಾಲು ಕೂಡ ಎದುರಾಗಿದೆ. ಇನ್ನೊಂದಷ್ಟುಹಾಡುಗಳನ್ನು ಇದೇ ರೀತಿ ಪ್ರಸ್ತುತ ಪಡಿಸುವ ಆಸೆ ಇದೆ- ಮಾನಸಿ ಸುಧೀರ್‌

ನಂತರ ಮಾನಸಿ ಕೆ.ವಿ. ತಿರುಮಲೇಶ್‌ ಅವರ ‘ಎಲ್ಲಿಗೆ ಹೋಗೋಣ ಏನು ಮಾಡೋಣ..’ ಗೆಳತಿ ಕವನವನ್ನೂ ಹಾಡಿ ಅಭಿನಯಿಸಿದರು. ಮತ್ತೆ ಬಿ.ಆರ್‌. ಲಕ್ಷ್ಮಣ್‌ ರಾವ್‌ ಅವರ ‘ಏನೀ ಅದ್ಭುತವೇ..’ ಕವನಕ್ಕೆ ಧ್ವನಿ ಅಭಿವ್ಯಕ್ತಿಯಾದರು. ನಡುವೆ ದುಂಡಿರಾಜ್‌ ಅವರ ‘ಗಣರಾಜ್ಯದ ಗುಣಗಾನ..’ ಮಾಡಿದರು.

ಈಗ ಒಂದೊಂಡು ವಿಡಿಯೋಗಳು ಫೇಸ್‌ಬುಕ್‌ನಲ್ಲಿ, ಅಲ್ಲಿಂದ ವಾಟ್ಸ್‌ಆ್ಯಪ್‌ಗೆ ಹರಿದು, ಸಾವಿರಾರು ಬಾರಿ ಶೇರ್‌ ಆಗುತ್ತಿವೆ, ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದಾರೆ. ಮಾನಸಿ ಯಾರು ಎಂದು ಗೊತ್ತಿಲ್ಲದವರೂ ಮೆಚ್ಚಿ ಕಮೆಂಟ್‌ ಮಾಡುತ್ತಿದ್ದಾರೆ.

 

ಜೊತೆಗೆ ಶತಾವಧಾನಿ ಆರ್‌. ಗಣೇಶ್‌, ವೈದೇಹಿ, ರಾಜೇಂದ್ರಸಿಂಗ್‌ ಬಾಬು, ಬಿ.ಆರ್‌. ಛಾಯಾ, ಮ್ಯಾಂಡೋಲಿನ್‌ ಪ್ರಸಾದ್‌, ಸುಬ್ರಾಯ ಚೊಕ್ಕಾಡಿ, ಕೆ.ವಿ. ತಿರುಮಲೇಶ್‌, ಡಿ. ಪ್ರವೀಣ್‌ ರಾವ್‌, ನಿರುಪಮಾ ರಾಜೇಂದ್ರ ಮುಂತಾದ ವಿವಿಧ ರಂಗಗಳ ಖ್ಯಾತನಾಮರೆಲ್ಲರೂ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೀಗ ಮಾನಸಿ- ಸುಧೀರ್‌ ಇನ್ನೊಂದಿಷ್ಟುಹಾಡುಗಳನ್ನು ಇದೇ ರೀತಿ ಚಿತ್ರೀಕರಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಆಸಕ್ತರಿಗೆ ತಲುಪಿಸುವ ಯೋಚನೆ - ಯೋಜನೆಯಲ್ಲಿದ್ದಾರೆ.