ಅವನಿಂದ ನಾನು ತುಂಬಾ ಕಲ್ತಿದ್ದೀನಿ ಎಂದು ಅಗಲಿದ ಗುಂಡನ ಬಗ್ಗೆ ಫೇಸ್‌ಬುಕ್‌ನಲ್ಲಿ ಭಾವುಕ ಸಂದೇಶ ಬರೆದುಕೊಂಡ  ಕೆಆರ್‌ ಪೇಟೆ.

ಹಾಸ್ಯ ನಟ ಶಿವರಾಜ್‌ ಕೆಆರ್‌ ಪೇಟೆ (Shivaraj KR Pete) ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ನಾನು ಮತ್ತು ಗಂಡು (Nanu mattu Gunda) ಅದ್ಭುತವಾಗಿ ಮೂಡಿ ಬಂದಿತ್ತು. ನಾಯಿ ಮತ್ತು ಮನುಷ್ಯನ ಸಂಬಂಧ ಹೇಗಿರಲಿದೆ ಎಂದು ಇಂಚು ಇಂಚಾಗಿ ತೋರಿಸಲಾಗಿದೆ. ಈ ಚಿತ್ರದಲ್ಲಿ ನಟಿಸಿರುವ ನಾಯಿ ಹೆಸರು ಗುಂಡ. ಗುಂಡ ಅಗಲಿರುವ ವಿಚಾರ ತಿಳಿದು ನಟ ಶಿವರಾಜ್‌ ಕೆಆರ್‌ ಪೇಟೆ ಭಾವುಕರಾಗಿದ್ದಾರೆ. 

ಶಿವು ಪೋಸ್ಟ್‌:

'ಪ್ರತಿಯೊಂದ್ ಜೀವಿಗೂ ಹುಟ್ಟು ಸಾವು ಎರಡು ಇರುತ್ತದೆ. ಆದರೆ ನಾವು ಹೇಗ್ ಬದುಕುತ್ತೀವಿ ಅನ್ನೋದೇ ಜೀವನ. ನಾನು ಮತ್ತು ಗುಂಡದಲ್ಲಿ ನನ್ನ ಜೊತೆ ಸಿಂಬು (Simbu) ಆಕ್ಟ್‌ ಮಾಡಿಲ್ಲ ಅವನ ಜೊತೆ ನಾನು ಆಕ್ಟ್‌ ಮಾಡಿದ್ದೀನಿ. ಅವನಿಂದ ನಾನು ತುಂಬಾ ಕಲ್ತಿದ್ದೀನಿ ಆದರೆ ಅವನು ಇಲ್ಲ. ಸುದ್ದಿ ಈಗಷ್ಟೇ ಕಿವಿಗೆ ಬಿತ್ತು. ನಂಬೋಕೆ ಆಗುತ್ತಿಲ್ಲ. ಮನುಷ್ಯನಿಗೆ ನೀವೇಷ್ಟೆ ಮಾಡಿ ಮರ್ತೋಗಿ ಬಿಡುತ್ತಾರೆ ಆದರೆ ಮೂಖ ಪ್ರಾಣಿಗಳು ಹಾಗಲ್ಲ. ಒಂದ್ ತುಂಡ್ ರೊಟ್ಟಿ ಹಾಕಿ ಅದು ಇನ್ನೊಂದು ದಿನಾ ನಮ್ಮ ಹಿಂದೆ ಹಿಂದೆನೇ ಬರುತ್ತೆ. ಅದು ಪ್ರಾಣಿಗಳಿಗೆ ಇರೋ ಪ್ರಾಮಾಣಿಕತೆ. ಆದರೆ ಸಿಂಬು ನಮ್ಮಲ್ಲಿ ಒಬ್ಬ ಅನ್ನೋ ಹಾಗೆ ಇದ್ದ. ಇವತ್ತು ಅವನಿಲ್ಲ' ಎಂದು ಶಿವರಾಜ್‌ ಬರೆದುಕೊಂಡಿದ್ದಾರೆ. 

ನಾನು ಹೀರೋ ಅಲ್ಲ, ಈ ಚಿತ್ರದ ಕೂಸು: ಶಿವರಾಜ್‌ ಕೆಆರ್‌ ಪೇಟೆ

'ನಾನು ಒಪ್ಪಲ್ಲ ಇದನ್ನ ಅವನು ಇದ್ದಾನೆ. ನಮ್ಮ ಜೊತೆ ನಮ್ಮಲ್ಲಿ ಸದಾ ಜೀವಂತ. ಸಿಂಬು ಲವ್ ಯು ಕಣೋ. ಹೇಗೆ ಹೇಳಲಿ ನಿನ್ನ ಅನುಪಸ್ಥಿತಿಯನ್ನು ಎದೆಬಡಿತವೂ ಈಗ ನಿಶ್ಯಬ್ಧ. ಹೋಗಿ ಬಾ ಗುಂಡ ಮಗನೇ' ಎಂದು ಶಿವರಾಜ್‌ ಕೆಆರ್‌ ಪೇಟೆ ಹೇಳಿದ್ದಾರೆ. 

ಮಲಯಾಳಂ ಬ್ಯಾಂಗಲೂರ್ ಡೇಸ್ (Bangalore days), ಐರಾವತ (Airavata) ಚಿತ್ರದಲ್ಲಿ ಗುಂಡ್ ಉರ್ಫ್‌ ಸಿಂಬಾ ಕಾಣಿಸಿಕೊಂಡಿದ್ದಾನೆ. ಸಿನಿಮಾಗಳಲ್ಲಿ ನಾಯಿ ಬೇಕು ಅಂದ್ರೆ ನಿರ್ದೇಶಕರು ಮೊದಲು ಸಂಪರ್ಕ ಮಾಡುವುದು ಸಿಂಬಾನನ್ನು.

ಕೆಲವರು ಇದು (Samyukta Hornad) ಸಂಯುಕ್ತ ಹೊರನಾಡ್ ಅವರ ಸ್ವಂತ ನಾಯಿ ಅಂದುಕೊಂಡಿದ್ದರು ಆದರೆ ಅಲ್ಲ, ಗುಂಡ ಹೆಸರಿನ ನಾಯಿಯನ್ನು ಸಂಯುಕ್ತಾ ಸಾಕಿದ್ದರು ಆದರೆ ಆ ನಾಯಿ ತೀರಿಕೊಂಡಿತ್ತು. ಸಿಂಬಾ ತೆರೆಮೇಲೆ ಗುಂಡ ಪಾತ್ರ ಮಾಡುತ್ತಿರುವ ಕಾರಣ ಸಂಯುಕ್ತಾ ಪಾತ್ರಕ್ಕೆ ಎಷ್ಟು ಕನೆಕ್ಟ್ ಆಗಿದ್ದಾರೆ ಎಂದು ಸಿನಿಮಾ ಚಿತ್ರೀಕರಣದ ವೇಳೆ ಹೇಳಿಕೊಂಡಿದ್ದರು. 

ಅಯ್ಯಯ್ಯೋ... ಏನಾಗೋಯ್ತು? ಸಂಯುಕ್ತಾ ಹೊರನಾಡು ಕಣ್ಣೀರಿಟ್ಟಿದ್ಯಾಕೆ?

ಸಿನಿಮಾ ಹೇಗಿದೆ?

ಒಂದೇ ಮಾತಿನಲ್ಲಿ ಹೇಳುವುದಾದರೆ ಕಥಾ ನಾಯಕ ಶಂಕ್ರ ಮತ್ತು ಆತನ ಸಾಕು ನಾಯಿ ಗುಂಡನ ನಡುವಿನ ಭಾವನಾತ್ಮಕ ಕತೆ ಇದು. ಪ್ರಾಣಿ ಪ್ರಿಯರಿಗೆ ಹಾಗೂ ನಾಯಿಯ ನಿಯತ್ತು ಗೊತ್ತಿರುವವರಿಗೆ ಇದು ತುಂಬಾ ಹಿಡಿಸುವ, ಕಾಡಿಸುವ ಸಿನಿಮಾ. ಸಾಕುನಾಯಿಗಳೆಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಹಚ್ಚಿಕೊಂಡವರಿಗೆ ಹೃದಯಸ್ಪರ್ಶಿ ಚಿತ್ರವೂ ಹೌದು. ಹಾಸ್ಯದೊಂದಿಗೆ ಶುರುವಾಗುವ ಕತೆ ಹಲವು ತಿರುವುಗಳ ಮೂಲಕ ನೋಡುಗರನ್ನು ಭಾವುಕತೆಯ ಮಡುವಿನಲ್ಲಿ ಮುಳುಗಿಸುತ್ತದೆ. ಅದು ಈ ಸಿನಿಮಾದ ಬಹು ದೊಡ್ಡ ಶಕ್ತಿ.