ಅದು ಹಳೆಯದಾದ ಬಜಾಜ್ ಚೇತಕ್ ಬೈಕ್. ಅದರ ಮೇಲೆ ಹಿರಿಯ ನಟ ದತ್ತಣ್ಣ ಕುಳಿತಿದ್ದಾರೆ. ಅವರೇ ಅದರ ಚಾಲಕರು. ಅವರು ಓರ್ವ ಮುಸ್ಲಿಂ ವ್ಯಕ್ತಿಯ ವೇಷದಲ್ಲಿದ್ದಾರೆ. ಅವರ ಹಿಂದೆ ಕುಳಿತವರು ಹಾಸ್ಯ ನಟ ಪ್ರಶಾಂತ್ ಸಿದ್ದಿ.

ಮುಖಕ್ಕೆ ಬಣ್ಣ, ತಲೆಗೆ ಕಿರೀಟ, ಅವರದು ರಾಮನ ವೇಷ. ಅವರ ಹಿಂದೆ ಕುಳಿತವರು ರಂಗಭೂಮಿ ನಟಿ ಅಕ್ಷತಾ ಪಾಂಡವಪುರ. ಅವರು ಸೀತೆಯಂತೆ. ಅವರ ಹಿನ್ನೆಲೆಯಲ್ಲಿ ಬಾಬರಿ ಮಸೀದಿ ಕಾಣುತ್ತಿದೆ. ಅಲ್ಲಿ ಕರಸೇವಕರಿದ್ದಾರೆ!
ಇದೊಂದು ಚಿತ್ರದ ಪೋಸ್ಟರ್. ಸದ್ಯದ ಮಟ್ಟಿಗೆ ಇದು ಬಹುಚರ್ಚಿತ ಕಥಾ ವಸ್ತುವೊಂದರ ಸುಳಿವು. ಆ ಮೂಲಕ ಈಗ ಸ್ಯಾಂಡಲ್‌ವುಡ್‌ನಲ್ಲಿ ತೀವ್ರ ಕುತೂಹಲ ಹುಟ್ಟಿಸುತ್ತಿರುವ ಚಿತ್ರ ‘ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ...’. ಮಹಾರುದ್ರಪ್ಪ ಇದರ ನಿರ್ದೇಶಕರು. ಡಿಸೆಂಬರ್ 6 ಕ್ಕೆ ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ನವೆಂಬರ್ 1 ರಂದು ಚಿತ್ರದ ಮೊದಲ ಪೋಸ್ಟರ್ ಲಾಂಚ್ ಮಾಡಿದೆ.

ರಶ್ಮಿ ಔಟ್, ಮಲಗಲೆಂದೇ ಕಾಲಿಟ್ಟ ವಿಚಿತ್ರ ಗೆಟಪ್, ಓಪನ್ ಮೈಂಡೆಡ್ ವೈಲ್ಡ್ ಕಾರ್ಡ್ ವ್ಯಕ್ತಿ!

‘ಇದೊಂದು ಬುಡಗ ಜನಾಂಗದವರ ಕತೆ. ವೇಷಧಾರಿಗಳಾದ ಅವರ ಬದುಕು ಈಗ ಹೇಗಿದೆ ಎನ್ನುವುದನ್ನು ತೆರೆ ಮೇಲೆ ತೋರಿಸುವ ಪ್ರಯತ್ನ ಇಲ್ಲಿ ನಡೆದಿದೆ. ಸಾಮಾನ್ಯವಾಗಿ ಬುಡಗ ಜನಾಂಗದವರು ಅಂದ್ರೆ ಅವರೆಲ್ಲ ವೇಷಧಾರಿಗಳು. ರಾಮ, ಸೀತೆ ವೇಷ ಹಾಕಿ ರಾಮಾಯಣದ ಕತೆ ಹೇಳುವವರು. ಆ ಜನಾಂಗದ ಒಂದು ಜೋಡಿ ಬದುಕು ಅರಸಿ, ಬೆಂಗಳೂರಿನಂತಹ ಪಟ್ಟಣಕ್ಕೆ ಬಂದಾಗ ಏನೆಲ್ಲ ಆಗುತ್ತೆ ಎನ್ನುವುದನ್ನು ಹೇಳುವುದಕ್ಕೆ ಹೊರಟಿದ್ದೇನೆ. ಹಾಗೆಯೇ ಒಂದಷ್ಟು ಹಿಂದೂ- ಮುಸ್ಲಿಂ ಸೌಹಾರ್ದದ ಅಂಶಗಳನ್ನು ತೆರೆಗೆ ತಂದಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಮಹಾರುದ್ರಪ್ಪ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ದತ್ತಣ್ಣ, ಸಂಪತ್ ಕುಮಾರ್, ಪ್ರಶಾಂತ್ ಸಿದ್ದಿ, ಅಕ್ಷತಾ ಪಾಂಡವಪುರ ಸೇರಿ ಉತ್ತರ ಕರ್ನಾಟಕ ಹಲವು ಕಲಾವಿದರು ಇದ್ದಾರೆ.  ಪಾರ್ಥ ಸಾರಥಿ ಹಾಗೂ ಕೆ. ರಘುನಾಥ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸುರೇಶ್ ಅರಸ್ ಸಂಕಲನವಿದೆ.