ಸಾಮರ್ಥ್ಯ ಚಿತ್ರದ ಟೀಸರ್ ಬಿಡುಗಡೆ ಇದೊಂದು ಮಾಸ್ ಆ್ಯಕ್ಷನ್ ಸಿನಿಮಾ: ನಿರ್ದೇಶಕ ಎಚ್ ವಾಸು
ನಿರ್ದೇಶಕ ಎಚ್ ವಾಸು ತುಂಬಾ ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದಿದ್ದರು. ಈ ಬಾರಿ ಅವರು ‘ಸಾಮಾರ್ಥ್ಯ’ ಹೆಸರಿನ ಚಿತ್ರ ನಿರ್ದೇಶಿಸಿದ್ದು, ಅದರ ಟೀಸರ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ದೊಡ್ಡ ಗಣ್ಯರ ದಂಡೇ ಅಲ್ಲಿ ನೆರೆದಿತ್ತು. ಇವರ ಜತೆಗೆ ಮುಖ್ಯ ಅತಿಥಿಯಾಗಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಜರಿದ್ದರು. ಬಾಲಾಜಿ ಶರ್ಮಾ, ಗಗನ ಜೋಡಿಯಾಗಿ ಅಭಿನಯಿಸಿರುವ ಈ ಚಿತ್ರವನ್ನು ರಾಜಾಲಭಂಡಿ ಕಾರ್ತಿಕ್ ನಿರ್ಮಿಸಿದ್ದಾರೆ.
‘ಕನ್ನಡ ಸಿನಿಮಾಗಳು ಈಗ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಅದಕ್ಕೆ ಕೆಜಿಎಫ್ ಚಿತ್ರ ಕೂಡ ಸಾಕ್ಷಿ. ಒಳ್ಳೆಯ ಚಿತ್ರಗಳನ್ನು ಮಾಡಿದರೆ ಜನ ನೋಡುತ್ತಾರೆ ಎಂಬುಕ್ಕೆ ಈಗಿನ ಚಿತ್ರಗಳ ಯಶಸ್ಸೇ ಸಾಕ್ಷಿ. ಸಾಮರ್ಥ್ಯ ಚಿತ್ರ ಕೂಡ ಹೆಸರಿಗೆ ತಕ್ಕಂತೆ ದೊಡ್ಡ ಗೆಲುವು ಸಾಧಿಸಲಿ’ ಎಂದು ನಾಗತಿಹಳ್ಳಿ ಚಂದ್ರಶೇಖರ್ ಶುಭ ಕೋರಿದರು.
777 ಚಾರ್ಲಿಗೆ ರಾಣಾ ದಗ್ಗುಬಾಟಿ ಸಾಥ್
ಸಾ ರಾ ಗೋವಿಂದು ಅವರು ಮಾತನಾಡಿ, ‘ಎಚ್ ವಾಸು ಅವರು ನಿರ್ಮಾಪಕರ ನಿರ್ದೇಶಕ. ನನ್ನ ನಿರ್ಮಾಣದ ಏಳು ಚಿತ್ರಗಳ ಪೈಕಿ ಆರು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಈ ಸಿನಿಮಾ ಕೂಡ ಗೆಲ್ಲಲಿ’ ಎಂದರು. ‘ಜಗ್ಗೇಶ್ ಅಭಿನಯ, ಎಚ್ ವಾಸು ನಿರ್ದೇಶನದ ರಂಗಣ್ಣ ಚಿತ್ರದ 50ನೇ ದಿನದ ಪ್ರದರ್ಶನದ ದಿನ ಗಾಯತ್ರಿ ಚಿತ್ರಮಂದಿರದಲ್ಲಿ ಲಾಠಿ ಚಾಚ್‌ರ್ ಆಗಿತ್ತು. ಆ ಮಟ್ಟಿಗೆ ಯಶಸ್ಸಿನ ಚಿತ್ರಗಳನ್ನು ಕೊಟ್ಟವರು ವಾಸು’ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ನೆನಪಿಸಿಕೊಂಡರು.
ಚಿತ್ರದ ನಾಯಕ ಬಾಲಾಜಿ ಶರ್ಮಾ ಅವರು ಸಿನಿಮಾ ವಿದ್ಯಾರ್ಥಿಯಂತೆ ಈ ಚಿತ್ರದಲ್ಲಿ ನಟಿಸಿದ್ದಾರಂತೆ. ಸಂಗೀತ ನಿರ್ದೇಶಕ ಅರುಣ್ ಆಂಡ್ರೂ ಅವರ ಸಂಗೀತದಲ್ಲಿ ಮೂರು ಹಾಡುಗಳು ಉತ್ತಮವಾಗಿ ಮೂಡಿಬಂದಿವೆಯಂತೆ. ‘ಚಿತ್ರದ ಹೆಸರಿಗೆ ತಕ್ಕಂತೆ ಇದು ಮಾಸ್ ಆ್ಯಕ್ಷನ್ ಕತೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಎಲ್ಲರಿಗೂ ಈ ಸಿನಿಮಾ ಇಷ್ಟವಾಗುತ್ತದೆಂಬ ನಂಬಿಕೆ ಇದೆ. ಈಗ ಟೀಸರ್ ಬಿಡುಗಡೆ ಆಗಿದೆ. ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ’ ಎಂದು ಎಚ್ ವಾಸು ಹೇಳಿಕೊಂಡರು. ಪ್ರಮುಖರಾದ ಸಿಂಪಲ್ ಸುನಿ ಉಮೇಶ್ ಬಣಕರ್, ಎನ್ ಎಂ ಸುರೇಶ್, ಎ ಗಣೇಶ್, ಎಂ ಜಿ ರಾಮಮೂರ್ತಿ, ಕೆ ಎಂ ವೀರೇಶ್, ಛಾಯಾಗ್ರಾಹಕ ಕೃಷ್ಣ ಕುಮಾರ್ ಮುಂತಾದವರು ಹಾಜರಿದ್ದು ಚಿತ್ರಕ್ಕೆ ಶುಭ ಹಾರೈಸಿದರು.
