ಚಿತ್ರ: ರಿವೈಂಡ್‌

ತಾರಾಗಣ: ತೇಜ್‌, ಚಂದನಾ, ಸಂಪತ್‌, ಧರ್ಮ, ಸುಂದರ್‌ರಾಜ್‌, ಆನಂದ್‌

ನಿರ್ದೇಶನ: ತೇಜ್‌

ನಿರ್ಮಾಣ: ವಿನೋದ್‌

ಸಂಗೀತ: ಸುರೇಶ್‌ ಸಾಲೋಮನ್‌

ಛಾಯಾಗ್ರಾಹಣ: ಪ್ರೇಮ್‌

-ಆರ್‌ ಕೇಶವಮೂರ್ತಿ

ಇಲ್ಲಿ ವಿಜ್ಞಾನ ಇದೆ, ಹಾಗೆ ತೋಚಿದಂತೆ ಕಲ್ಪನೆ ಮಾಡಿಕೊಳ್ಳುವ ಕಾಲ್ಪನಿಕ ಕತೆಯೂ ಇದೆ. ಜತೆಗೆ ಬೇರೆಯವರ ಕನಸುಗಳಿಗೆ ಕನ್ನ ಹಾಕಬಹುದಾದ ದಾರಿಗಳೂ ಇವೆ. ಹೀಗೆ ಸೈನ್ಸು, ಕಲ್ಪನೆ ಮತ್ತು ಕನಸು ಇವುಗಳನ್ನು ಒಟ್ಟಿಗೆ ರುಬ್ಬಿ ‘ರಿವೈಂಡ್‌’ ಹೆಸರಿನಲ್ಲಿ ಸಿನಿಮಾ ರೂಪ ಕೊಡಲು ಪ್ರಯತ್ನಿಸಿದ್ದಾರೆ ನಿರ್ದೇಶಕ, ನಟ ಕಂ ನಿರ್ಮಾಪಕ ತೇಜ್‌. ಚಿತ್ರದ ಇಡೀ ಕತೆ ನಾಯಕನ ಮಗುವಿನ ಅಪಹರಣದ ಸುತ್ತ ಸಾಗುತ್ತದೆ. ಲೂಸಿ ಡ್ರೀಮ್‌, ಶೇರ್‌ ಡ್ರೀಮ್‌ ಹೀಗೆ ಹೊಸ ಹೊಸ ತಂತ್ರಗಳ ಮೂಲಕ ಕತೆ ಕಟ್ಟುವ ಸಾಹಸದಲ್ಲಿ ತೇಜ್‌ ಸಾಕಷ್ಟು ಶ್ರಮಪಟ್ಟಿರುವುದು ಎದ್ದು ಕಾಣುತ್ತದೆ.

ಚಿತ್ರದ ನಾಯಕಿ ಖ್ಯಾತ ಕ್ರೈಮ್‌ ಪತ್ರಕರ್ತ. ದೊಡ್ಡ ದೊಡ್ಡ ಕಂಪನಿಗಳ ಭ್ರಷ್ಟರನ್ನು ತಮ್ಮ ವರದಿ ಮೂಲಕ ಬಯಲು ಮಾಡಿದ ದಿಟ್ಟವರದಿಗಾರ ಎಂಬುದು ಹೀರೋ ಕ್ಯಾರೆಕ್ಟರ್‌ನ ಹಿನ್ನೆಲೆ. ಇಂಥ ಕ್ರೈಮ್‌ ವರದಿಗಾರನ ಮಗಳು ಅಪಹರಣಕ್ಕೆ ಒಳಗಾದಾಗ ಏನಾಗುತ್ತದೆ ಎಂಬುದನ್ನು ಸಿನಿಮಾ ಮುಗಿಯುವ ತನಕ ಗೊತ್ತಾಗುವುದಿಲ್ಲ. ತನ್ನ ವೃತ್ತಿಯ ಕಾರಣಕ್ಕೆ ಹುಟ್ಟಿಕೊಂಡ ಶತ್ರುಗಳೇ ಈ ಕೆಲಸ ಮಾಡಿದ್ದಾರೆಂದು ಭಾವಿಸುವ ಹೊತ್ತಿಗೆ, ಚಿತ್ರಕತೆಯಲ್ಲೊಂದು ತಿರುವು ಎದುರಾಗುತ್ತದೆ.

ಪ್ರತೀ ತಿಂಗಳು ಮಿಡ್‌ ನೈಟ್‌ ಶೋ ನೋಡೋ ಒಬ್ಬನ ಭೀಕರ ಸಾವು: ಕೃಷ್ಣ ಟಾಕೀಸ್‌ನಲ್ಲಿ ದೆವ್ವದ ಮಿಸ್ಟರಿ

ಸೈನ್ಸು, ಥ್ರಿಲ್ಲರ್‌, ಸಸ್ಪೆನ್ಸ್‌ ಹೀಗೆ ಯಾವುದೇ ಜಾನರ್‌ಗೆ ಬೇಕಾದರೂ ಈ ಚಿತ್ರವನ್ನು ಅನ್ವಯಿಸಬಹುದು ಎಂಬುದು ಸಿನಿಮಾ ನೋಡಿದ ಮೇಲೆ ಮೂಡುವ ಅಭಿಪ್ರಾಯ. ತನ್ನ ಮಗಳನ್ನು ಉಳಿಸುವ ನಿಟ್ಟಿನಲ್ಲಿ ನಾಯಕ, ಯಾವ ಯಾವ ತಂತ್ರ, ವಿಜ್ಞಾನಗಳ ಮೊರೆ ಹೋಗುತ್ತಾರೆ, ಆ ತಂತ್ರಗಳು ಕಾಲ್ಪನಿಕವೋ, ವಾಸ್ತವೋ ಎನ್ನುವ ತರ್ಕಗಳು ಹುಟ್ಟಿಕೊಂಡರೂ ಸಿನಿಮಾ ಮುಗಿದ ಮೇಲೆ ಈ ಎಲ್ಲ ಅನುಮಾನ, ತರ್ಕಗಳು ಮಾಯವಾಗುತ್ತವೆ!

ತೀರಾ ಸೀಮಿತ ಚಿತ್ರೀಕರಣ ಸ್ಥಳಗಳು, ಅದ್ದೂರಿ ಎನಿಸದ ಮೇಕಿಂಗ್‌, ಕಡಿಮೆ ಪಾತ್ರಧಾರಿಗಳು, ಯಾವುದೇ ವೈಭವೀಕರಣ ಇಲ್ಲದೆ ತಾನು ಹೇಳಬೇಕಾಗಿರುವುದನ್ನು ತೆರೆ ಮೇಲೆ ತನ್ನ ಪಾಡಿಗೆ ತಾನು ಹೇಳುತ್ತಾ ಹೋಗಿದ್ದಾರೆ ತೇಜ್‌. ಅಭಿನಯ, ಅದ್ಭುತ ಡೈಲಾಗ್‌ಗಳು, ದೃಶ್ಯ ವೈಭವ ಇತ್ಯಾದಿಗಳನ್ನು ಹುಡುಕದೆ ಸುಮ್ಮನೆ ಸಿನಿಮಾ ನೋಡಬೇಕು ಅಷ್ಟೆ. ತೇಜ್‌, ಧರ್ಮ, ಸಂಪತ್‌, ಚಂದನಾ ಇಷ್ಟೇ ಪಾತ್ರಗಳು ಚಿತ್ರದ ನಿರೂಪಣೆಯ ಭಾರವನ್ನು ಹೊತ್ತು ಸಾಗುತ್ತಾರೆ.