‘ಸಂಕಷ್ಟಕರ ಗಣಪತಿ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದವರು ಕಾರ್ಪೊರೇಟ್‌ ಕಂಪನಿ ಉದ್ಯೋಗಿ ಶ್ರುತಿ ಗೊರಾಡಿಯಾ. ಇದೀಗ ರಾಕೇಶ್‌ ಅಡಿಗ ನಿರ್ದೇಶನದ ‘ನೈಟ್‌ ಔಟ್‌’ ಚಿತ್ರದೊಂದಿಗೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.

ಬೆಂಗಳೂರು (ಏ. 10): ‘ಸಂಕಷ್ಟಕರ ಗಣಪತಿ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದವರು ಕಾರ್ಪೊರೇಟ್‌ ಕಂಪನಿ ಉದ್ಯೋಗಿ ಶ್ರುತಿ ಗೊರಾಡಿಯಾ. ಗುಜರಾತಿ ಮೂಲದವರಾದರೂ, ಶ್ರುತಿ ಹುಟ್ಟಿಬೆಳೆದಿದ್ದು ಬೆಂಗಳೂರು.

ಅದೇ ನಂಟಿನೊಂದಿಗೆ ಬೆಳ್ಳಿತೆರೆಗೆ ಕಾಲಿಟ್ಟು ಒಂದು ವರ್ಷ ಆಗಿದೆ. ಇದೀಗ ರಾಕೇಶ್‌ ಅಡಿಗ ನಿರ್ದೇಶನದ ‘ನೈಟ್‌ ಔಟ್‌’ ಚಿತ್ರದೊಂದಿಗೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಇದೇ ವಾರ ತೆರೆ ಕಾಣುತ್ತಿರುವ ಈ ಚಿತ್ರದಲ್ಲಿನ ತಮ್ಮ ಪಾತ್ರ, ಚಿತ್ರಕತೆಯ ವಿಶೇಷತೆಯ ಜತೆಗೆ ಭವಿಷ್ಯದ ಸಿನಿ ಜರ್ನಿ ಕುರಿತು ಅವರೊಂದಿಗೆ ಮಾತುಕತೆ.

‘ನೈಟ್‌ ಔಟ್‌’ಚಿತ್ರವನ್ನು ಒಪ್ಪಿಕೊಂಡಿದ್ದಕ್ಕಿದ್ದ ಕಾರಣ ಏನು?

ಪ್ರಮುಖವಾಗಿ ಕಾರಣವಾಗಿದ್ದು ಚಿತ್ರದಲ್ಲಿನ ನನ್ನ ಪಾತ್ರ. ಮೊದಲ ಚಿತ್ರದಲ್ಲಿ ನನಗೆ ಸಿಕ್ಕಿದ್ದ ಪಾತ್ರಕ್ಕಿಂತ ಇದು ತುಂಬಾ ಡಿಫೆರೆಂಟ್‌ ಆಗಿದೆ. ಎರಡನೇ ಚಿತ್ರಕ್ಕೆ ವಿಭಿನ್ನವಾದ ಪಾತ್ರ ಸಿಗಬೇಕು ಅಂತ ನಾನೇನು ನಿರೀಕ್ಷೆ ಮಾಡಿದ್ದೇನೋ ಆ ಪ್ರಕಾರವೇ ಆಯಿತು. ಹಾಗೆಯೇ ಒಂದೊಳ್ಳೆ ಕತೆಯಿತ್ತು. ಅದರ ಜತೆಗೆ ಸಿನಿಮಾದ ಮೇಲೆ ಅಪಾರವಾದ ಕಾಳಜಿಯಿದ್ದ ಹೊಸಬರ ತಂಡ ಸಿಕ್ಕಿತು. ಅವೆಲ್ಲವೂ ಈ ಸಿನಿಮಾಕ್ಕೆ ನಾನು ಬರಲು ಕಾರಣವಾಯಿತು.

ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳೋದಾದ್ರೆ...

ಮೊದಲ ಚಿತ್ರದಲ್ಲಿನ ನನ್ನ ಪಾತ್ರ, ನನ್ನ ರಿಯಲ್‌ ಲೈಫ್‌ಗೆ ತುಂಬಾ ಹತ್ತಿರವಿತ್ತು. ಆದರೆ ಇಲ್ಲಿ ನನಗೆ ಸಿಕ್ಕಿದ್ದು ಅದಕ್ಕೆ ತದ್ವಿರುದ್ಧವಾದ ಪಾತ್ರ. ಪಕ್ಕಾ ಡಿಗ್ಲಾಮ್‌. ಟೌನ್‌ ಹುಡುಗಿ. ಹಳ್ಳಿಯಿಂದ ಪಟ್ಟಣಕ್ಕೆ ಬರುತ್ತಾಳೆ. ತುಂಬಾ ಧೈರ್ಯವಂತೆ. ಆದರೆ ಪ್ರೀತಿಯಲ್ಲಿ ಸಿಲುಕಿದಾಗ ಆಕೆಯ ಬದುಕಲ್ಲಿ ಏನೆಲ್ಲ ಸವಾಲು ಎದುರಿಸುತ್ತಾಳೆ ಎನ್ನುವುದೇ ನನ್ನ ಪಾತ್ರ. ನನ್ನನ್ನು ನಾನು ಕಲಾವಿದೆಯಾಗಿ ತೋರಿಸಿಕೊಳ್ಳಲು ಒಳ್ಳೆಯ ಅವಕಾಶ ಸಿಕ್ಕಿದೆ.

ಇದೊಂದು ನೈಜ ಘಟನೆಯ ಚಿತ್ರ ಎನ್ನುವುದು ನಿಜವಾ?

ಹೌದು, ಕತೆ ಕೇಳುವ ದಿನವೇ ನಿರ್ದೇಶಕರು ನನಗೆ ಈ ಮಾತು ಹೇಳಿದ್ದರು. ಇದೊಂದು ನೈಜ ಘಟನೆ ಆಧರಿತ ಚಿತ್ರ. ಹಾಗಾಗಿ ಕತೆಯಲ್ಲಿನ ಪಾತ್ರಗಳಿಗೆ ಅಷ್ಟೇ ಸಹಜವಾದ ಅಭಿನಯ ಬೇಕಾಗುತ್ತದೆ ಎಂದು ನಿರ್ದೇಶಕ ರಾಕೇಶ್‌ ಸೂಚನೆ ನೀಡಿದ್ದರು. ನನಗೂ ಕುತೂಹಲ ಇತ್ತು. ಚಿತ್ರೀಕರಣ ಶುರುವಾದಾಗ ಆ ಕತೆಯ ಕೆಲವು ಅಂಶಗಳು ಗೊತ್ತಾದವು. ತುಂಬಾ ಕ್ಯೂರಿಯಾಸಿಟಿ ಹುಟ್ಟಿಸುವಂತ ಕತೆ ಅದು. ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎನ್ನುವ ನಂಬಿಕೆ ನಂಗಂತೂ ನೂರಕ್ಕೆ ನೂರರಷ್ಟಿದೆ.

ಅದು ಸರಿ, ವರ್ಷದಲ್ಲೇ ಒಂದೇ ಸಿನಿಮಾ ಆಗಿದ್ದು ಯಾಕೆ?

ನಾನು ಈಗಷ್ಟೇ ಸಿನಿಮಾ ಜಗತ್ತಿಗೆ ಎಂಟ್ರಿಯಾದವಳು. ನಟಿ ಆಗಿ ಗುರುತಿಸಿಕೊಳ್ಳುವುದಕ್ಕೆ ಇನ್ನಷ್ಟುಸಮಯ ಬೇಕಿದೆ. ಆದರೂ ನನ್ನ ಮೊದಲ ಸಿನಿಮಾ ‘ಸಂಕಷ್ಟಕರ ಗಣಪತಿ’ಚಿತ್ರ ತೆರೆ ಕಂಡ ನಂತರ ಸಾಕಷ್ಟುಆಫರ್‌ ಬಂದಿವೆ. ತುಂಬಾ ಜನ ಹೊಸ ನಿರ್ದೇಶಕರು ಭೇಟಿ ಮಾಡಿ ಕತೆ ಹೇಳಿದರು. ನನಗೆ ಇಷ್ಟವಾಗುವಂತಹ ಪಾತ್ರಗಳು ಇನ್ನು ಸಿಕ್ಕಿಲ್ಲ. ಹಾಗಾಗಿ ಕೆಲವನ್ನು ಒಪ್ಪಿಕೊಂಡಿಲ್ಲ. ಆದರೂ ಒಳ್ಳೆಯ ಪಾತ್ರಗಳು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇನೆ.

ಅಂದ್ರೆ, ನೀವು ಎಂತಹ ಪಾತ್ರಗಳನ್ನು ನಿರೀಕ್ಷೆ ಮಾಡುತ್ತಿದ್ದೀರಿ?

ಇಂಥದ್ದೇ ಪಾತ್ರ, ಹೀಗೆ ಇರಬೇಕು ಅಂತೇನೂ ಇಲ್ಲ. ನಟನೆಗೆ ಅವಕಾಶ ಇರುವಂತಹ ಪಾತ್ರಗಳು ಸಿಗಬೇಕು, ಅವು ಪ್ರೇಕ್ಷಕರಿಗೂ ಇಷ್ಟವಾಗುವಂತಿರಬೇಕು ಎನ್ನುವುದು ನನ್ನ ಹೆಬ್ಬಯಕೆ. ಮೊದಲ ಚಿತ್ರದಲ್ಲಿ ಅಂತಹ ಪಾತ್ರ ಸಿಕ್ಕಿತ್ತು. ಅದು ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಈಗ ‘ನೈಟ್‌ ಔಟ್‌’ ನಲ್ಲೂ ಅಂತಹದೇ ಮತ್ತೊಂದು ಬಗೆಯ ಪಾತ್ರ ಸಿಕ್ಕಿದೆ. ಈ ಪಾತ್ರ ನೋಡಿದರೆ, ನಾನೇನು ನಿರೀಕ್ಷೆ ಮಾಡುತ್ತಿದ್ದೇನೆ ಅನ್ನೋದು ಗೊತ್ತಾಗುತ್ತೆ.

ನೈಟ್‌ ಔಟ್‌ ಮೂಲಕ ಒಂದೊಳ್ಳೆ ಬ್ರೇಕ್‌ ಸಿಗಬಹುದಾ?

ಅದೆಲ್ಲ ಲೆಕ್ಕಾಚಾರ ಹಾಕೋದಿಕ್ಕೆ ಆಗುವುದಿಲ್ಲ. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ಹಾಗೆ ನಮ್ಮ ಸಿನಿಮಾ ನಮಗೆ ಚೆನ್ನಾಗಿಯೇ ಇರುತ್ತೆ. ಚೆನ್ನಾಗಿಯೇ ಮಾಡಿದ್ದೇವೆ ಎನ್ನುವ ವಿಶ್ವಾಸ, ನಂಬಿಕೆ ನಮಗಿರುತ್ತೆ. ಆದರೆ, ಅಂತಿಮವಾಗಿ ಅದು ಪ್ರೇಕ್ಷಕರಿಗೆ ಇಷ್ಟವಾಗಬೇಕು. ಅವರ ಮೂಲಕ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಗಬೇಕು. ಆಗ ನಾವೇನು, ನಮ್ಮ ಭವಿಷ್ಯವೇನು ಅನ್ನೋದು ಗೊತ್ತಾಗುತ್ತದೆ.

ಚಿತ್ರೀಕರಣದ ಅನುಭವ ಹೇಗಿತ್ತು?

ಎಲ್ಲರೂ ಇಲ್ಲಿ ಅಷ್ಟೋ ಇಷ್ಟೋ ಅನುಭವ ಇದ್ದವರೇ ಇದ್ದರು. ನಾನು ಹೊಸಬಳು. ರಾಕೇಶ್‌ ಆ್ಯಕ್ಟರ್‌ ಆಗಿ ಅನುಭವ ಪಡೆದವರು. ನಿರ್ದೇಶನ ಅನ್ನೋದಷ್ಟೇ ಹೊಸದು. ಅನೇಕ ಸಂಗತಿಗಳನ್ನು ಹೇಳಿಕೊಟ್ಟರು. ಜತೆಗೆ ಸೆಟ್‌ಗೆ ಹೋಗುವ ಮುನ್ನ ವರ್ಕ್ಶಾಪ್‌ ಮಾಡಿದ್ದೆವು. ಹಾಗಾಗಿ ತುಂಬಾ ಎಂಜಾಯ್‌ ಮಾಡುತ್ತಲೇ ಶೂಟಿಂಗ್‌ ಮುಗಿಸಿದೆವು.

- ದೇಶಾದ್ರಿ ಹೊಸ್ಮನೆ