Asianet Suvarna News Asianet Suvarna News

ಡಾ.ರಾಜ್ ಅವರ ಈ ಸಿನಿಮಾ 63 ವರ್ಷಗಳ ಹಿಂದೆಯೇ 8 ಭಾಷೆಗಳಿಗೆ ಡಬ್ ಆಗಿತ್ತು!

ಕನ್ನಡ ಸಿನಿಮಾ ಉದ್ಯಮದಲ್ಲಿ ಕಾಂತಾರವೇ ಇತರೆ ಭಾಷೆಗಳಿಗೆ ಡಬ್ ಆದ ಮೊದಲ ಕನ್ನಡ ಚಿತ್ರವೆಂದು ಚರ್ಚಿತವಾಗುತ್ತಿದೆ. ಕಾಂತಾರಗೆ ಸಿಕ್ಕಿದೆ ಯಶಸ್ಸು ಇಡೀ ಕನ್ನಡಿಗರಿಗೆ ಸಿಕ್ಕ ಗೆಲವು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಡಾ.ರಾಜ್‌ಕುಮಾರ್ ನಟಿಸಿದ ಚಿತ್ರವೊಂದು ಎಂಟು ಭಾಷೆಗಳಲ್ಲಿ ಡಬ್ ಆಗಿತ್ತು. 

Kannada Movie Mahishasura Mardhini dubbed to 8 Indian languages 63 years ago
Author
First Published Nov 3, 2022, 2:55 PM IST

-ಗಣೇಶ್ ಕಾಸರಗೋಡು

63 ವರ್ಷಗಳ ಹಿಂದೆ ಕನ್ನಡದ ಸಿನಿಮಾವೊಂದು 8 ಭಾಷೆಗಳಿಗೆ ಡಬ್ ಆಗಿ ಅಷ್ಟೂ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿರುವ ಹೆಮ್ಮೆಯ ಸಂಗತಿಯೊಂದನ್ನು ಹೇಳಲು ನಿಮ್ಮ ಮುಂದೆ ಕೂತಿದ್ದೇನೆ:
 
ಆ ಸಿನಿಮಾದ ಹೆಸರು : 'ಮಹಿಷಾಸುರ ಮರ್ಧಿನಿ'. ರಾಜಕುಮಾರ್ ಅವರು ಯಾವ ಬಿರುದು-ಬಾವಲಿಯನ್ನೂ ಪಡೆಯದಿದ್ದ ಕಾಲದಲ್ಲಿ ನಟಿಸಿದ ಬ್ಲ್ಯಾಕ್ ಆ್ಯಂಡ್ ವೈಟ್ ಸಿನಿಮಾವಿದು! ಈ ಸಿನಿಮಾ ತೆರೆಕಂಡದ್ದು 1959ರಲ್ಲಿ. ಅಂದರೆ, ಭರ್ತಿ63 ವರ್ಷಗಳ ಹಿಂದೆ! ಆ ವರ್ಷ ತಯಾರಾದ ಒಟ್ಟು ಕನ್ನಡ ಸಿನಿಮಾಗಳ ಸಂಖ್ಯೆ ಕೇವಲ ಆರು! ಅರವತ್ಮೂರು ವರ್ಷಗಳ ಹಿಂದೆ 'ಮಹಿಷಾಸುರ ಮರ್ಧಿನಿ'ಯಂಥ ಕಪ್ಪು-ಬಿಳುಪು ಪೌರಾಣಿಕ ಚಿತ್ರವೊಂದು ಹಿಂದಿಯೂ ಸೇರಿ ಎಂಟು ಭಾಷೆಗಳಿಗೆ ಡಬ್ ಆಗಿ ಬಾಕ್ಸ್ ಆಫೀಸಿನಲ್ಲಿ ದಿಗ್ವಿಜಯ ಸಾಧಿಸಿರುವುದು ಸಣ್ಣ ಸಂಗತಿಯೇನಲ್ಲ! ರಾಜ್‌‍ಕುಮಾರ್ ಅವರು ಮಹಿಷಾಸುರನ ಪಾತ್ರದಲ್ಲಿ ನಟಿಸಿದ್ದರೆ, ಚಾಮುಂಡೇಶ್ವರಿ ಪಾತ್ರದಲ್ಲಿ ನಟಿಸಿದವರು ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಹೆತ್ತಮ್ಮ ಶ್ರೀಮತಿ ಸಂಧ್ಯಾ! ನಾರದನಾಗಿ ಕೆ.ಎಸ್.ಅಶ್ವಥ್, ರಂಭೇಶನಾಗಿ ಉದಯಕುಮಾರ್, ವ್ಯಾಘ್ರಸಿಂಹನಾಗಿ ನರಸಿಂಹರಾಜು, ಗುಣವತಿಯಾಗಿ ಸಾಹುಕಾರ್ ಜಾನಕಿ ನಟಿಸಿದ 'ಮಹಿಷಾಸುರ ಮರ್ಧಿನಿ' ಚಿತ್ರ ಆ ಕಾಲದಲ್ಲೇ ಬೆಂಗಳೂರಿನಲ್ಲಿ ನೂರು ದಿನ ಪ್ರದರ್ಶಿತವಾಗಿ ದಾಖಲೆ ನಿರ್ಮಿಸಿತ್ತು.
 
ಈ ಚಿತ್ರದ ಮತ್ತೊಂದು ನಂಬಲಸಾಧ್ಯವಾದ ವಿಶೇಷವೆಂದರೆ, ನಿರ್ಮಾಪಕರು ತಮ್ಮ ನಾಯಕನಟನಿಗೆ ಕೊಟ್ಟ ಸಂಭಾವನೆ! ಸಾಮಾನ್ಯವಾಗಿ ಅಗ್ರಿಮೆಂಟಿನಲ್ಲಿರುವಷ್ಟು ಸಂಭಾವನೆಯನ್ನು ಕೊಡದೇ ಸತಾಯಿಸುವ ಕನ್ನಡ ಚಿತ್ರ ನಿರ್ಮಾಪಕರ ನಡುವೆ, ಒಪ್ಪಿರುವುದಕ್ಕಿಂತಲೂ ಎರಡು ಪಟ್ಟು ಹೆಚ್ಚು ಸಂಭಾವನೆಯನ್ನು ಕೊಟ್ಟು ದಿಗ್ಭ್ರಮೆ ಹುಟ್ಟಿಸುವ ಘಟನೆಯೊಂದು ಆಗ ನಡೆಯಿತು! ಇದು ನಿಜ. 'ಮಹಿಷಾಸುರ ಮರ್ಧಿನಿ' ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ಉತ್ತೇಜಿತರಾದ ನಿರ್ಮಾಪಕ ಬಿ.ಎಸ್.ರಂಗಾ ಅವರು ರಾಜಕುಮಾರ್ ಅವರಿಗೆ ಮೊದಲು ಒಪ್ಪಿಕೊಂಡದ್ದಕ್ಕಿಂತಲೂ ಎರಡು ಪಟ್ಟು ಹೆಚ್ಚು ಸಂಭಾವನೆಯನ್ನು ನೂರನೇ ದಿನದ ಸವಿನೆನಪಿಗಾಗಿ ಉಡುಗೊರೆ ನೀಡಿ ಬೆನ್ನು ತಟ್ಟಿದ್ದೊಂದು ದಾಖಲೆಯಾಗಿ ಉಳಿದಿದೆ!

Kantara ಹಿಂದಿಗೆ ರಿಮೇಕ್ ಮಾಡುವ ಬಗ್ಗೆ ರಿಷಬ್ ಪ್ರತಿಕ್ರಿಯೆ ವೈರಲ್; ಶೆಟ್ರು ಹೇಳಿದ್ದೇನು?

ಈ ಸಿನಿಮಾವನ್ನು (Movie) ನೋಡಲು ಹಳ್ಳಿ ಹಳ್ಳಿಗಳಿಂದ ಚಕ್ಕಡಿಯಲ್ಲಿ ಜನರು ಬಂದಿದ್ದರು! ರಾತ್ರಿಯ ಹೊತ್ತು ಹಳ್ಳಿಗಳಿಗೆ ವಾಪಾಸ್ಸು ಹೋಗಲಾಗದೇ ಸಿನಿಮಾ ನೋಡಿದ ಟಾಕೀಸಿನಲ್ಲೇ ಮಲಗಿ, ಬೆಳಗೆದ್ದು ಹೋಗುತ್ತಿದ್ದರು ಪ್ರೇಕ್ಷಕ ಪ್ರಭುಗಳು! ಇದೇ ರೀತಿ ಈ ಕಾಲದಲ್ಲೂ ರಿಷಬ್ ಶೆಟ್ಟಿಯವರ 'ಕಾಂತಾರ' ಸಿನಿಮಾವನ್ನು ನೋಡಲು ಮಂದಿ ಕಾಸರಗೋಡಿನಿಂದ ಬಸ್'ನಲ್ಲಿ ಪ್ರಯಾಣಿಸಿದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು!

'ಮಹಿಷಾಸುರ ಮರ್ಧಿನಿ' ಚಿತ್ರದ ಇತರ ವಿವರಗಳಿಗೆ ಬರುವುದಿದ್ದರೆ, ಇದು ಆ ಕಾಲದಲ್ಲಿ ತೆರೆಕಂಡ ಒಂದು ಮಹತ್ವದ ಚಿತ್ರ. ಹಲವಾರು ಅದ್ಧೂರಿ ಪೌರಾಣಿಕ ಸಿನಿಮಾಗಳನ್ನು ತಯಾರಿಸಿದ ಮದರಾಸಿನ 'ವಿಕ್ರಂ ಸ್ಟುಡಿಯೋ'ದ ಮಾಲೀಕರಾದ ಬಿ.ಎಸ್.ರಂಗಾ ಅವರು ಇತರೆ ಭಾಷಾ ಚಿತ್ರರಂಗಕ್ಕೆ ಸೆಡ್ಡು ಹೊಡೆದು, ತಯಾರಿಸಿದ ಈ ಚಿತ್ರ ತನ್ನ ತಾಂತ್ರಿಕ ಶ್ರೀಮಂತಿಕೆಯಿಂದ ಗಮನ ಸೆಳೆಯಿತು. ಅಭಿನಯದ ದೃಷ್ಟಿಯಲ್ಲೂ ಒಬ್ಬರಿಗೊಬ್ಬರು ಪೈಪೋಟಿ ನೀಡಿದ್ದು ವಿಶೇಷವೇ. ಮಹಿಷಾಸುರನೆಂಬ ನೆಗೆಟಿವ್ ಪಾತ್ರದಲ್ಲಿ ರಾಜಕುಮಾರ್ ಮಿಂಚಿದರೆ, ಈ ಪಾತ್ರವನ್ನು ಸಂಹರಿಸುವ ಚಾಮುಂಡೇಶ್ವರಿ ಪಾತ್ರದಲ್ಲಿ ಸಂಧ್ಯಾ ಗಮನ ಸೆಳೆದಿದ್ದರು.

Kantara 300 ಕೋಟಿ ಕಲೆಕ್ಷನ್‌ನತ್ತ ಮುಖ ಮಾಡಿದ ಶಿವ-ಲೀಲಾ ರೊಮ್ಯಾನ್ಸ್‌

ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ ಭಗವಾನ್ ವಿಷ್ಣು ಪಾತ್ರದಲ್ಲಿ, ಚಿತ್ರಸಾಹಿತಿ ಚಿ|ಉದಯಶಂಕರ್ ಮನೋಜ್ಞವಾಗಿ ನಟಿಸಿದ್ದು! ಸಂಭಾಷಣೆ ಮತ್ತು ಗೀತೆಗಳನ್ನು ರಚಿಸಿದ್ದು ಇದೇ ಉದಯಶಂಕರ್ ತಂದೆ ಚಿ|ಸದಾಶಿವಯ್ಯ. ಅಂದಹಾಗೆ, ರಾಜಕುಮಾರ್ ಅವರು ಪ್ರಪ್ರಥಮವಾಗಿ ಗಾಯಕರಾಗಿ ಪರಿಚಯವಾದದ್ದೂ ಇದೇ ಸಿನಿಮಾದ ಮೂಲಕವೇ. ಇವರು ಗಾಯಕಿ ಎಸ್.ಜಾನಕಿ ಜತೆ ಹಾಡಿರುವ 'ತುಂಬಿತು ಮನವಾ ತಂದಿತು ಸುಖವಾ' ಎಂಬ ಯುಗಳಗೀತೆ ಈಗಲೂ ಜನಪ್ರಿಯ. ಒಟ್ಟು ಒಂದು ಡಜನ್ ಹಾಡುಗಳಿರುವ ಈ ಚಿತ್ರಕ್ಕಾಗಿ ಸಂಗೀತ ಸಂಯೋಜನೆ ಮಾಡಿದ್ದು ಜಿ.ಕೆ.ವೆಂಕಟೇಶ್. ಮದರಾಸಿನ 'ವಿಕ್ರಂ ಸ್ಟುಡಿಯೋ'ದಲ್ಲಿ ಚಿತ್ರೀಕರಣಗೊಂಡ ಮೊಟ್ಟ ಮೊದಲ ಚಿತ್ರವಿದು! ಸ್ವತಃ ಅತ್ಯುತ್ತಮ ಛಾಯಾಗ್ರಾಹಕರಾಗಿದ್ದ ಬಿ.ಎಸ್.ರಂಗಾ ತಾವು ನಿರ್ಮಿಸಿದ ಈ ಚಿತ್ರಕ್ಕೂ ಕ್ಯಾಮೆರಾ ಹಿಡಿದಿದ್ದರು!

Follow Us:
Download App:
  • android
  • ios