ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ ಶಂಕರ್ ರಾಜ್ ನಿರ್ದೇಶನದ ಅಜಯ್‌ ರಾವ್‌ ಮತ್ತು ರಚಿತಾ ರಾಮ್‌ ಅಭಿನಯದ ಬಹು ನಿರೀಕ್ಷಿತ ಲವ್‌ ಯು ರಚ್ಚು ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ ಅಜಯ್‌ ರಾವ್‌ (Ajay Rao) ಮತ್ತು ರಚಿತಾ ರಾಮ್‌ (Rachita Ram) ಅಭಿನಯದ ಬಹು ನಿರೀಕ್ಷಿತ 'ಲವ್‌ ಯು ರಚ್ಚು' (Love You Rachchu) ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸೌಂಡ್‌ ಮಾಡಿದೆ. ಇದೀಗ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಹೌದು! ಗುರು ದೇಶಪಾಂಡೆ (Guru Deshpande) ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶಂಕರ್ ರಾಜ್ (Shankar Raj) ಆ್ಯಕ್ಷನ್ ಕಟ್ ಹೇಳಿದ್ದು, ಡಿಸೆಂಬರ್ 31ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ 'ಲವ್‌ ಯು ರಚ್ಚು' ಚಿತ್ರ ಬೆಳ್ಳಿತೆರೆ ಮೇಲೆ ಬಿಡುಗಡೆಯಾಗಲಿದೆ.

Add Asianetnews Kannada as a Preferred SourcegooglePreferred

'ಲವ್‌ ಯು ರಚ್ಚು' ಚಿತ್ರ ರೊಮ್ಯಾಂಟಿಕ್ ಕಥಾಹಂದರವನ್ನೊಳಗೊಂಡಿದ್ದು, ಚಿತ್ರದ ಕಥೆಯನ್ನು ಶಶಾಂಕ್ (Shashank) ಬರೆದಿದ್ದಾರೆ. ಇತ್ತೀಚೆಗೆ ಚಿತ್ರದ 'ಮುದ್ದು ನೀನು' (Muddu Neenu) ವಿಡಿಯೋ ಸಾಂಗ್​ ರಿಲೀಸ್​ ಆಗಿತ್ತು. ಸಿದ್ ಶ್ರೀರಾಮ್‌ (Sid Sriram) ದನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ನಾಯಕ ಅಜಯ್‌ ರಾವ್‌ ಅವರೇ ಕೊರಿಯೋಗ್ರಫಿ ಮಾಡಿದ್ದರು. ಈ ಹಾಡಿನಲ್ಲಿ ರಚಿತಾ ರಾಮ್ ಹಾಟ್​ ಅವತಾರದಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ಈ ಹಾಡಿಗೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಕ್ಕೆ ರಚಿತಾ ಫಸ್ಟ್‌ನೈಟ್‌ ಬಗ್ಗೆ ಪ್ರಶ್ನೆ ಎತ್ತಿದರು. 

ಕಿಡಿ ಹಚ್ಚಿದ 'ಫಸ್ಟ್‌ನೈಟ್' ಹೇಳಿಕೆ: ರಚಿತಾ ರಾಮ್ ಕ್ಷಮೆಗೆ ಪಟ್ಟು

ಆಮೇಲೆ ಉತ್ತರವನ್ನೂ ಅವರೇ ನೀಡಿದರು. 'ಫಸ್ಟ್‌ನೈಟ್‌ನಲ್ಲಿ ರೊಮ್ಯಾನ್ಸ್‌ ಮಾಡ್ತಾರೆ, ಫಸ್ಟ್‌ನೈಟ್‌ ಕಾನ್ಸೆಪ್ಟ್‌ನಲ್ಲಿರುವ ಈ ಹಾಡಿನಲ್ಲೂ ನಾನು ಲೈಟಾಗಿ ರೊಮ್ಯಾನ್ಸ್‌ ಮಾಡೋ ದೃಶ್ಯದಲ್ಲಿ ಕಾಣಿಸಿಕೊಂಡಿದ್ದೇನೆ. ಹಿಂದೆ ಬೋಲ್ಡ್‌ ಆಗಿ ನಟಿಸಲ್ಲ ಅಂತ ಹೇಳಿ ಇಲ್ಲಿ ಹೀಗೆ ಕಾಣಿಸಿಕೊಂಡಿರೋದಕ್ಕೆ ಒಂದು ಕಾರಣ ಇದೆ. ಅದೇನು ಅಂತ ಸಿನಿಮಾದಲ್ಲೇ ರಿವೀಲ್‌ ಆಗುತ್ತೆ' ಎಂದು ರಚಿತಾ ರಾಮ್ ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಈ ಚಿತ್ರದಲ್ಲಿ ಅಜಯ್‌ ರಾವ್‌ ಮಗಳು ಚರಿಷ್ಮಾ (Charishma) ಬಾಲ ನಟಿಯಾಗಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಸನ್ನಿವೇಶವೊಂದರಲ್ಲಿ ಪುಟ್ಟ ಮಗುವೊಂದು ಅಭಿನಯಿಸಬೇಕಾಗಿತ್ತು. ನಮ್ಮ ಚಿತ್ರದ ನಾಯಕ ಅಜಯ್‌ ರಾವ್‌ ಮಗಳು ಚರಿಷ್ಮಾ ಈ ಪಾತ್ರಕ್ಕೆ ಹೊಂದಿಕೆಯಾಗುತ್ತಾಳೆ, ಅವಳಿಂದ ಈ ಸನ್ನಿವೇಶ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ ಎಂದು ಇಡೀ ಚಿತ್ರತಂಡಕ್ಕೆ ಅನಿಸಿತು. ಅದರಂತೆ ಚರಿಷ್ಮಾ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು. ಸಿನಿಮಾದಲ್ಲಿ ಚರಿಷ್ಮಾ ತುಂಬ ಕ್ಯೂಟ್‌ ಆಗಿ ಕಾಣುತ್ತಾಳೆ ಎಂದು ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ತಿಳಿಸಿದ್ದಾರೆ.

ಶಾಂಪೇನ್ ಓಪನ್ ಮಾಡಿದಕ್ಕೆ ಕ್ಷಮೆ ಕೇಳಿದ ರಚಿತಾ ರಾಮ್!

ಇದು ನನ್ನ ಪ್ರೊಡಕ್ಷನ್‌ನಲ್ಲಿ ಬರಬೇಕಿದ್ದ ಸಿನಿಮಾ. ಆದರೂ ಈ ಸಿನಿಮಾಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಚಿತ್ರದ ಮೇಕಿಂಗ್‌ ವೇಳೆ ಘರ್ಷಣೆಗಳಾಗಿವೆ. ಒಂದು ಡೈಮಂಡ್‌ ಹೊರಬರಬೇಕು ಅಂದರೆ ಅನೇಕ ಕಠಿಣತೆಗಳನ್ನು ಹಾದು ಬರುವುದು ಅನಿವಾರ್ಯ. ನಮ್ಮ ಈ ಸಿನಿಮಾ ರೆಕಾರ್ಡ್‌ ಕ್ರಿಯೇಟ್‌ ಮಾಡುವ ವಿಶ್ವಾಸ ಇದೆ. ಎಲ್ಲ ಸನ್ನಿವೇಶಗಳನ್ನೂ ಸಮಚಿತ್ತದಿಂದ ನಿಭಾಯಿಸುವ ಗಂಡನ ಪಾತ್ರವನ್ನಿಲ್ಲಿ ನಿಭಾಯಿಸಿದ್ದೇನೆ' ಎಂದು ಅಜೇಯ್‌ ರಾವ್‌ ಹೇಳಿದ್ದಾರೆ. 

ಇನ್ನು ಫೈಟರ್​ ವಿವೇಕ್​ ಅವರು ಚಿತ್ರೀಕರಣದ​ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರು. ಈ ಪ್ರಕರಣದಿಂದ ಸಿನಿಮಾ ತಂಡದ ಕೆಲವರು ಅರೆಸ್ಟ್​ ಕೂಡ ಆಗಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸದ್ಯ 'ಲವ್‌ ಯು ರಚ್ಚು' ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ಸಿನಿಮಾದ ಟ್ರೇಲರ್‌ ಬಿಡುಗಡೆ ಯೋಜನೆ ಹಾಕಿಕೊಂಡಿದೆ. ಕದ್ರಿ ಮಂಜುನಾಥ್ ಸಂಗೀತ ಸಂಯೋಜನೆ (Kadri Manikanth) ಚಿತ್ರಕ್ಕಿದೆ. 

"