Asianet Suvarna News Asianet Suvarna News

'ಎರಡು ಸಾವಿರದ ಇಪ್ಪತ್ತು ಗೋಪಿಕೆಯರು': ಪೊಲೀಸ್​ ಅಧಿಕಾರಿ ರವಿಕಾಂತೇ ಗೌಡರಿಂದ ಚಿತ್ರದ ಆಡಿಯೋ ರಿಲೀಸ್‌

ನಿವೃತ್ತ ಪೊಲೀಸ್‌ ಅಧಿಕಾರಿ ಕುಚ್ಚಣ್ಣ ಶ್ರೀನಿವಾಸ್‌ ನಿರ್ಮಾಣದ, ನಾರಾಯಣ ಸ್ವಾಮಿ ನಿರ್ದೇಶನದ 'ಎರಡು ಸಾವಿರದ ಇಪ್ಪತ್ತು ಗೋಪಿಕೆಯರು' ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಬೆಂಗಳೂರು ಜಂಟಿ ಆಯುಕ್ತರಾಗಿರುವ ಡಾ.ಬಿ.ಆರ್‌. ರವಿಕಾಂತೇಗೌಡರು ಆಡಿಯೋ ಬಿಡುಗಡೆ ಮಾಡಿದರು.

kannada movie eradu saavirada ippattu gopikeyaru audio released by police officer ravikanthe gowda gvd
Author
Bangalore, First Published Dec 1, 2021, 6:39 PM IST

ನಿವೃತ್ತ ಪೊಲೀಸ್‌ ಅಧಿಕಾರಿ ಕುಚ್ಚಣ್ಣ ಶ್ರೀನಿವಾಸ್‌ (Kucchanna Srinivas) ನಿರ್ಮಾಣದ, ನಾರಾಯಣ ಸ್ವಾಮಿ ನಿರ್ದೇಶನದ 'ಎರಡು ಸಾವಿರದ ಇಪ್ಪತ್ತು ಗೋಪಿಕೆಯರು' (Eradu Saavirada Ippattu Gopikeyaru) ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಬೆಂಗಳೂರು ಜಂಟಿ ಆಯುಕ್ತರಾಗಿರುವ ಡಾ.ಬಿ.ಆರ್‌. ರವಿಕಾಂತೇಗೌಡರು (Dr B.R.Ravikanthe Gowda) ಆಡಿಯೋ ಬಿಡುಗಡೆ ಮಾಡಿದರು. ಈ ಚಿತ್ರವು ಡಿಸೆಂಬರ್ 10ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಾಲಾಜಿ ಶರ್ಮಾ, ಪ್ರಿಯಾಂಕಾ ಚಿಂಚೋಳಿ, ನಂದೀಶ್‌ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಹೃದಯಶಿವ, ಗೌಸ್​ಪೀರ್​ ಮತ್ತು ಮಹೇಂದ್ರ ಗೌಡ ಸಾಹಿತ್ಯ ಬರೆದಿದ್ದಾರೆ.  ಶ್ರೀಧರ್ ವಿ. ಸಂಭ್ರಮ್ (Sridhar V Sambhram) ಸಂಗೀತ ಸಂಯೋಜನೆ ಮಾಡಿದ್ದು, ಕುಚ್ಚಣ್ಣ ಶ್ರೀನಿವಾಸ್‌ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

'ಮಲಯಾಳಂ, ತಮಿಳು ಭಾಷೆಗಳಲ್ಲಿ ಸಣ್ಣ ಬಜೆಟ್‌ನಲ್ಲಿ ಒಳ್ಳೆ ಸಿನೆಮಾ ಮಾಡ್ತಾರೆ ಅಂತ ಮಾತಾಡುತ್ತೇವೆ. ನಮ್ಮಲ್ಲಿ ಒಳ್ಳೆಯ ಸಿನಿಮಾ ಬಂದಾಗ ಅದನ್ನು ನಾವು ಬೆಂಬಲಿಸಬೇಕಿದೆ. ಕುಚ್ಚಣ್ಣ ಬುದ್ಧಿವಂತರು. ಸೂಕ್ಷ್ಮ ಮನಸ್ಸುಳ್ಳವರು. ಅವರ ಸಾರಥ್ಯದಲ್ಲಿ ಸಿನೆಮಾ ಆಗಿದೆ ಅಂದ್ರೆ ಇದು ಒಳ್ಳೆಯ ಸಿನೆಮಾ ಆಗಿರುತ್ತದೆ. ಇಂಥಾ ಸಣ್ಣ ಬಜೆಟ್‌ನ ಒಳ್ಳೆ ಸಿನೆಮಾಗಳಿಗೆ ಬೆಂಬಲಿಸದೆ ಇದ್ದರೆ ಕೆಟ್ಟ ಸಿನೆಮಾ ನೋಡಬೇಕಾಗಿ ಬರುತ್ತದೆ. ಈ ಚಿತ್ರದ ಮೂರು ಹಾಡುಗಳನ್ನು ಕೇಳಿದ್ದೇನೆ. ಹಾಡುಗಳನ್ನು ಕೇಳಿದರೆ ರಿಫ್ರೆಶ್‌ ಆಗುವಂತಿದೆ. ಮನಸ್ಸಿಗೆ ಬಿಡುಗಡೆ ಕೊಡುವಂತಿದೆ. ಸಮಾಜ ಆರೋಗ್ಯಪೂರ್ಣವಾಗಿ ಬೆಳೆಯಬೇಕು ಅಂದರೆ ಇಂಥಾ ಹೊಸ ಪ್ರಯತ್ನಗಳನ್ನು ಬೆಂಬಲಿಸಬೇಕು' ಎಂದು ರವಿಕಾಂತೇಗೌಡ ಹೇಳಿದರು.

Puneeth Rajkumar: ಇಂದು ಅಪ್ಪು-ಅಶ್ವಿನಿ 22ನೇ ವಿವಾಹ ವಾರ್ಷಿಕೋತ್ಸವ!

ಚಿತ್ರ ಮಾಡುವ ನಿಟ್ಟಿನಲ್ಲಿ ಮೂರು ಪ್ರಮುಖ ಹಂತಗಳಿರುತ್ತವೆ. ಮೊದಲನೆಯದು ಬರವಣಿಗೆಯ ಹಂತ. ಚಿತ್ರಕಥೆ ಎನ್ನುವುದು ಸವಾಲಿನ ಕೆಲಸ. ಏಕಾಂಗಿಯಾಗಿ ಚಿತ್ರಕಥೆ ಬರೆಯುವುದಕ್ಕೆ ಸಾಧ್ಯವಿಲ್ಲ. ಬರೆದೂ ಇಲ್ಲ ಎಂಬುದು ನನ್ನ ನಂಬಿಕೆ. ಗುಂಪಿನಲ್ಲಿ ಚರ್ಚೆ ಮಾಡಿಕೊಂಡು, ಮಾತಾಡಿಕೊಂಡು ಮಾಡುವ ಕ್ರಿಯೆ ಅದು. ನಾನು, ನಮ್ಮ ಚಿತ್ರದ ನಿರ್ದೇಶಕ ನಾರಾಯಣಸ್ವಾಮಿ ಒಂದೂವರೆ ವರ್ಷಗಳ ಕಾಲ ಚಿತ್ರಕಥೆ ಮಾಡಿದ್ದೇವೆ. ಎರಡನೆಯ ಹಂತ ಚಿತ್ರೀಕರಣ. ಹಾಗೆಯೇ, ಮೂರನೆಯ ಹಂತ ಹಾಡುಗಳಿಗೆ ಸಂಗೀತ ಅಳವಡಿಸುವುದು. ಯಾವುದೇ ಚಿತ್ರದ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿಸಬೇಕಾದರೆ ಒತ್ತಾಸೆಯಾಗಿ ಸಂಗೀತ ಇರಬೇಕಾಗುತ್ತದೆ. ಸಿನಿಮಾಗಳಲ್ಲಿ ಸಂಗೀತ ಪ್ರಧಾನ ಪಾತ್ರ ವಹಿಸುತ್ತದೆ. ನನಗೆ ವೈಯಕ್ತಿಕವಾಗಿ ಈ ಮೂರನೆಯ ಹಂತ ಬಹಳ ಇಷ್ಟದ್ದು. ಮೂರು ಹಾಡುಗಳು ನಮ್ಮ ಚಿತ್ರದಲ್ಲಿದೆ' ಎಂದು ಕುಚ್ಚಣ್ಣ ಶ್ರೀನಿವಾಸ್‌ ತಿಳಿಸಿದರು.

Raymo Teaser: ಇಶಾನ್-ಆಶಿಕಾ ರಂಗನಾಥ್‌ ಜೋಡಿಗೆ ಆಕ್ಷನ್ ಕಟ್ ಹೇಳಿದ ಪವನ್ ಒಡೆಯರ್

ವಿಶೇಷವಾಗಿ 'ರವಿಕಾಂತೇ ಗೌಡ ಕೇವಲ ಓರ್ವ ಪೊಲೀಸ್​ ಅಧಿಕಾರಿ ಮಾತ್ರವಲ್ಲ. ಅವರೊಬ್ಬ ಸಾಹಿತಿ. ಅವರ ತಂದೆ ಬೆಸಗರಹಳ್ಳಿ ರಾಮಣ್ಣ ಕನ್ನಡದ ಜನಪ್ರಿಯ ಕಥೆಗಾರ. ರವಿಕಾಂತೇ ಗೌಡ ಕೂಡ ಸಾಹಿತ್ಯ ರಚಿಸಿದ್ದಾರೆ. ಬಹುಶಃ ನಿವೃತ್ತಿಗಾಗಿ ಕಾಯುತ್ತಿದ್ದಾರೆ ಅಂದುಕೊಂಡಿದ್ದೇನೆ. ಆಮೇಲೆ ಅವರ ಹಲವು ಪುಸ್ತಕಗಳು ಪ್ರಕಟವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಅವರಿಗೆ ಆಹ್ವಾನ ಕಳಿಸಿದಾಗ ವಾಟ್ಸಾಪ್​ನಲ್ಲೇ ಒಂದು ಕವನ ಕಳಿಸಿದರು. ಬಹಳ ಖುಷಿಯಾಯಿತು. ಒಳ್ಳೆಯ ಸಾಲುಗಳಿವೆ. ಅವರು ಇಂದು ಮುಖ್ಯ ಅತಿಥಿಯಾಗಿ ಬಂದಿರುವುದು ಸಂತೋಷ ಎಂದು ಕುಚ್ಚಣ್ಣ ಶ್ರೀನಿವಾಸ್‌ ಹೇಳಿದರು. ಇನ್ನು ಸಂಗೀತ ನಿರ್ದೇಶಕ ಶ್ರೀಧರ್‌ ಸಂಭ್ರಮ್‌, 'ಕಲಾತ್ಮಕವಾಗಿ ಸಿನೆಮಾ ಮಾಡಿದ್ದಾರೆ. ಹೊಸತನ ಒಪ್ಪಿಕೊಳ್ಳುವ ತಂಡ ಇದು' ಎಂದರು. ಹಿರಿಯ ನಟ ಸರಿಗಮ ವಿಜಿ, ಚಲಪತಿ, ಕಾರ್ಯಕಾರಿ ನಿರ್ಮಾಪಕ ರಾಜಶೇಖರ, ನಟರಾದ ಬಾಲಾಜಿ ಶರ್ಮಾ, ನಂದೀಶ್‌ ಇದ್ದರು.

Follow Us:
Download App:
  • android
  • ios