ನಟ ಸುದೀಪ್‌ ಅವರು ಮತ್ತೊಂದು ಸರ್ಕಾರಿ ಶಾಲೆಯನ್ನು ದತ್ತು ಪಡೆಯುವ ಮೂಲಕ ಅಕ್ಷರ ಕಲಿಕೆಯ ಮಹತ್ವ ಸಾರಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಿಂದ 49 ಕಿಮೀ ದೂರದಲ್ಲಿರುವ ಆವಿಗೆ ಎನ್ನುವ ಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಂಡಿದ್ದಾರೆ. ಹಲವು ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿರುವ ಸುದೀಪ್‌ ಅವರ ಕಿಚ್ಚ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಈ ಶಾಲೆಯ ಅಭಿವೃದ್ದಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ. ದಟ್ಟಕಾಡಿನ ಮಧ್ಯೆ ವಾಸಿಸುತ್ತಿರುವ ಗುಡ್ಡಗಾಡಿನ ಕುಣಬಿ ಜನಾಂಗದವರ ಮಕ್ಕಳಿಗಾಗಿ ಈ ಶಾಲೆ ಕಟ್ಟಿಸಲಾಗಿದೆ. ಆದರೆ, ಶಾಲೆಗೆ ಮುಖ್ಯೋಪಾಧ್ಯಾಯರ ಹೊರತಾಗಿ ಪಾಠ ಮಾಡಲು ಶಿಕ್ಷಕರೇ ಬರುತ್ತಿಲ್ಲ.

ಇಡೀ ಊರಿನಲ್ಲಿ ಕೇವಲ ಮೂವರು ಮಾತ್ರ ವಿದ್ಯಾವಂತರು ಇದ್ದಾರೆ. ಈ ಪೈಕಿ ಒಬ್ಬರು ಡಿಗ್ರಿ ಮಾಡಿಕೊಂಡಿದ್ದರೆ, ಮತ್ತಿಬ್ಬರು ಪಿಯುಸಿ ಮಾಡಿದ್ದಾರೆ. ಇವರಲ್ಲಿ ಒಬ್ಬರು ಇದೇ ಶಾಲೆಯಲ್ಲಿ ಪಾಠ ಹೇಳಲು ಬರುತ್ತಿದ್ದಾರೆ. ಹೀಗೆ ಶಿಕ್ಷಕರ ಕೊರತೆಯಿಂದ ಪ್ರಾಥಮಿಕ ಹಂತದಲ್ಲೇ ಅಕ್ಷಕರ ಕಲಿಕೆಯಿಂದ ಈ ಭಾಗದ ಮಕ್ಕಳು ವಂಚಿತಗೊಳ್ಳುತ್ತಿದ್ದಾರೆ. ಅಲ್ಲದೆ ಈ ಶಾಲೆಗೆ ಬರಬೇಕು ಅಂದರೆ ಮಕ್ಕಳು 8 ಕಿಲೋಮೀಟರ್‌ ನಡೆದುಕೊಂಡೇ ಬರಬೇಕು.

3 ವರ್ಷಗಳಿಂದ ಕತ್ತಲಲ್ಲಿದ್ದ ಹಿರಿ ಜೀವಗಳಿಗೆ ಬೆಳಕಾದ ಕಿಚ್ಚ ಸುದೀಪ್‌!

ಹೀಗೆ ಸಮಸ್ಯೆಗಳ ತಾಣವಾಗಿರುವ ಈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಕಂಡ ಕಿಚ್ಚ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಶಾಲೆಯನ್ನ ದತ್ತು ಪಡೆದಿದ್ದು ಈಗ ಶಾಲೆಯ ಅಭಿವೃದ್ದಿ ಜತೆಗೆ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ವ್ಯವಸ್ಥೆ ಮುಂದಾಗಿದೆ.