ಗೆಳೆಯರ ತಂಡ ಸೇರಿಕೊಂಡು ಒಂದು ಚಂದದ ಸಿನಿಮಾ ಮಾಡಬೇಕು ಅನ್ನುವ ಆಸೆ ಅನೇಕರಿಗಿರುತ್ತದೆ. ಆ ಆಸೆ ನೆರವೇರುವುದು ಕೆಲವರಿಗೆ ಮಾತ್ರ. ಅಂಥಾ ಒಂದು ಪ್ಯಾಶನೇಟ್‌ ಗೆಳೆಯರ ತಂಡ ಸೇರಿ ಮಾಡಿದ, ಭರವಸೆ ಇಟ್ಟುಕೊಳ್ಳಬಹುದಾದ ಒಂದು ಸಿನಿಮಾ ‘ಕಡಲ ತೀರದ ಭಾರ್ಗವ’. 

ಕಡಲ ತೀರದ ಭಾರ್ಗವ ಚಿತ್ರದ ಟೀಸರ್‌ ಈಗಾಗಲೇ ಅಶ್ವಿನಿ ಆಡಿಯೋದ ಎಆರ್‌ಸಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ಅದನ್ನು ನೋಡಿಕೊಂಡು ಈ ತಂಡದ ಬಗ್ಗೆ ತಿಳಿದುಕೊಳ್ಳಲು ಹೊರಟರೆ ಅಚ್ಚರಿಯಾಗುತ್ತದೆ.

ಈ ಸಿನಿಮಾದ ನಿರ್ದೇಶಕರ ಹೆಸರು ಪನ್ನಗ ಸೋಮಶೇಖರ್‌. ಅವರು ಕತೆಯೊಂದು ಸಿದ್ಧ ಮಾಡಿ ಗೆಳೆಯರಾದ ಭರತ್‌ ಮತ್ತು ವರುಣ್‌ರಾಜ್‌ಗೆ ತಿಳಿಸುತ್ತಾರೆ. ಆ ಇಬ್ಬರು ಗೆಳೆಯರು ಉತ್ಸಾಹದಿಂದ ನಟಿಸಲು ಸಿದ್ಧರಾದರು. ಅಷ್ಟೇ ಅಲ್ಲ, ತಾವೇ ನಿರ್ಮಾಣ ಹೊಣೆಯನ್ನೂ ಹೊತ್ತುಕೊಂಡರು. ಈ ಇಬ್ಬರು ಹೊಸ ನಟರ ನಟನೆಯ ವೈಖರಿ ನೋಡಿ ಇಡೀ ಚಿತ್ರತಂಡ ದಂಗಾಗಿದೆ. ಟೀಸರ್‌ ನೋಡಿದರೆ ನಿಮಗೂ ತಿಳಿಯಬಹುದು.

'ಗಾಳಿಪಟ 2' ಶೂಟಿಂಗ್ ಮುಕ್ತಾಯ: ಯೋಗರಾಜ್ ಭಟ್

ಇಡೀ ತಂಡಕ್ಕೆ ಮಾರ್ಗದರ್ಶಿ ಥರ ಇದ್ದವರು ಕೆ.ಎಸ್‌. ಶ್ರೀಧರ್‌. ಅವರು ಇಲ್ಲಿ ಸೈಕ್ರಿಯಾಟ್ರಿಸ್ಟ್‌ ಪಾತ್ರ ಮಾಡಿದ್ದಾರೆ. ಅವರು, ‘ಇತ್ತೀಚಿನ ವರ್ಷಗಳಲ್ಲಿ ನನ್ನ ಮನಸ್ಸಿಗೆ ಇಷ್ಟವಾದ ಪಾತ್ರ ಇದು. ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಯಂಗ್‌ ಆರ್ಟಿಸ್ಟ್‌ಗಳಲ್ಲಿ ಇಂಟೆನ್ಸ್‌ ಆಗಿ ನಟಿಸುವ ತಾಕತ್ತಿರುವ ನಟರಿವರು’ ಎಂದರು. ಈ ಮಾತು ಇಡೀ ತಂಡಕ್ಕೆ ಸಿಕ್ಕ ಮೆಚ್ಚುಗೆ.

ಅಶ್ವಿನಿ ರಾಮ್‌ಪ್ರಸಾದ್‌ ಅವರು ಈ ಚಿತ್ರದ ಹಾಡಿನ, ದೃಶ್ಯಗಳ ತುಣುಕು ಕೇಳಿ, ನೋಡಿ ಮೆಚ್ಚಿಕೊಂಡು ಆಡಿಯೋ ಹಕ್ಕು ಪಡೆದುಕೊಂಡಿದ್ದಾರೆ.

ಶ್ರುತಿ ಪ್ರಕಾಶ್‌ ಈ ಚಿತ್ರದ ನಾಯಕಿ. ವೀಣಾ ಸಹ-ನಿರ್ಮಾಪಕಿ. ಅನಿಲ್‌ ಸಿ.ಜೆ ಸಂಗೀತ ನಿರ್ದೇಶಕರು. ಕೀರ್ತನ್‌ ಪೂಜಾರಿ ಛಾಯಾಗ್ರಾಹಕರು. ಉಮೇಶ್‌ ಸಂಕಲನಕಾರರು. ಅಶ್ವಿನ್‌ ಹಾಸನ್‌, ರಾಘವ ನಾಗ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕರು ಪತ್ರಿಕಾಗೋಷ್ಠಿಯ ಕೊನೆಯಲ್ಲಿ ಒಂದು ಮಾತು ಹೇಳಿದರು, ‘ಆಳಕ್ಕೆ ಹೋಗದಿದ್ದರೆ ಏನೂ ಅರ್ಥವಾಗುವುದಿಲ್ಲ’ ಎಂದು. ಅರ್ಥವಾಗಬೇಕಾದರೆ ಸಿನಿಮಾದ ಟೀಸರ್‌ ನೋಡಿ.

YouTube video player