ಸಿನಿಮಾ ಹಾಲ್ ಹೌಸ್‌ಫುಲ್ ಆಗುವುದು ಯಾವಾಗ?ಕನ್ನಡ ಚಿತ್ರರಂಗದ ಮುಂದಿನ ದಾರಿ ಯಾವುದು?- ಈ ಪ್ರಶ್ನೆಗಳ ಸುತ್ತ ಸ್ಯಾಂಡಲ್‌ವುಡ್ ನಿರ್ಮಾಪಕರ ಚರ್ಚೆಗಳು ಸಾಗುತ್ತಿವೆ. ಯಾಕೆಂದರೆ ಆಗಸ್‌ಟ್ 1ರಿಂದಲೇ ಶೇ.100ರಷ್ಟು ಸೀಟು ಭರ್ತಿ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಬಹುದು ಎನ್ನುವ ನಿರೀಕ್ಷೆಯಲ್ಲಿತ್ತು ಚಿತ್ರರಂಗ.

ಈ ಹಿನ್ನೆಲೆಯಲ್ಲೇ ನಟರಾದ ಶಿವರಾಜ್‌ಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ್ ಅಭಿನಯದ ದೊಡ್ಡ ಬಜೆಟ್‌ನ ಚಿತ್ರಗಳು ಬಿಡುಗಡೆಯ ದಿನಾಂಕ ಘೋಷಣೆ ಮಾಡಿಕೊಂಡಿದ್ದವು. ಈ ಚಿತ್ರಗಳ ಜತೆಗೆ ಕೆಲವು ಸಣ್ಣ ಬಜೆಟ್ ಚಿತ್ರಗಳೂ ಬರುವ ಸೂಚನೆ ಕೊಟ್ಟಿದ್ದವು. ಎಲ್ಲ ಚಿತ್ರಗಳ ನಿರ್ಮಾಪಕರು ಆಗಸ್‌ಟ್ 15ರ ನಂತರವೇ ತಮ್ಮ ಚಿತ್ರಗಳನ್ನು ಥಿಯೇಟರ್‌ಗಳಿಗೆ ತರುವ ಪ್ಲಾನ್‌ನಲ್ಲಿದ್ದರು. ಇದಕ್ಕೆ ಕಾರಣವೂ ಇದೆ. ಆ.1ರ ನಂತರ ಶೇ. 100ರಷ್ಟು ಸೀಟು ಭರ್ತಿಗೆ ಅದೇಶ ಬಂದು ಎರಡು ವಾರ ಕಳೆದ ಮೇಲೆ ಥಿಯೇಟರ್‌ಗಳಿಗೆ ಜನ ಬರುವ ರೀತಿ ನೋಡಿಕೊಂಡೇ ದೊಡ್ಡ ಚಿತ್ರಗಳನ್ನು ಚಿತ್ರಮಂದಿರಗಳತ್ತ ಮುಖ ಮಾಡಿಸುವ ಯೋಚನೆಯಲ್ಲಿದ್ದರು ನಿರ್ಮಾಪಕರು.

ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಆಗಸ್‌ಟ್ ತಿಂಗಳಲ್ಲೂ ಶೇ.100ರಷ್ಟು ಸೀಟು ಭರ್ತಿ ಅದೇಶ ಬಂದು, ಚಿತ್ರಮಂದಿರಗಳು ಹೌಸ್‌ಫುಲ್ ಸಂಭ್ರಮ ಕಾಣುವುದು ಕಷ್ಟ ಎನಿಸುತ್ತಿದೆ. ಶೇ.100ರಷ್ಟು ಸೀಟು ಭರ್ತಿ ಯಾವಾಗ ಘೋಷಣೆ ಮಾಡುತ್ತಾರೆ ಎಂಬುದರ ಬಗೆಗಿನ್ನೂ ಸ್ಪಷ್ಪತೆ ಇಲ್ಲ. ಹೀಗಾಗಿ ಶೇ.100ರಷ್ಟು ಸೀಟು ಭರ್ತಿ ಅದೇಶ ನೀಡುವ ಮೂಲಕ ಸಿನಿಮಾ ಹಾಲ್‌ಗೆ ಹೌಸ್‌ಫುಲ್ ಬೋರ್ಡ್ ಹಾಕಿಸುವ ನಿರ್ಮಾಪಕರ ಕನಸು ಮತ್ತು ನಿರೀಕ್ಷೆ ಸದ್ಯಕ್ಕೆ ಮುಂದೆ ಹೋಗಿದೆ.

ನಿರ್ಮಾಪಕರು ಏನು ಹೇಳುತ್ತಾರೆ?

1. ಸಿ ಎಂ ನಿರ್ಧಾರದ ಬಳಿಕ ಚಿತ್ರ ಬಿಡುಗಡೆ

ಆಗಸ್‌ಟ್ 1 ರಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿ ಅದೇಶ ಬರುತ್ತದೆ ಎನ್ನುವ ನಂಬಿಕೆಯಲ್ಲೇ ನಮ್ಮ ‘ಸಲಗ’ ಚಿತ್ರದ ದಿನಾಂಕ ಘೋಷಣೆ ಮಾಡಲಾಗಿತ್ತು. ಪರಿಸ್ಥಿತಿ ಈಗ ಬದಲಾಗಿದೆ. 8 ಜಿಲ್ಲೆಗಳನ್ನು ಲಾಕ್ ಮಾಡಲಾಗಿದೆ. ಬುಧವಾರ ಹೊಸ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚಿತ್ರಮಂದಿರಗಳ ಸಂಪೂರ್ಣ ಅನ್‌ಲಾಕ್‌ಗೆ ಮನವಿ ಮಾಡುತ್ತೇವೆ. ನಮ್ಮ ಮನವಿಗೆ ಮುಖ್ಯಮಂತ್ರಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದರ ಮೇಲೆ ನಮ್ಮ ಚಿತ್ರದ ಬಿಡುಗಡೆಯ ಹೊಸ ಡೇಟ್ ಅಧಿಕೃತವಾಗಿ ಘೋಷಣೆ ಮಾಡುತ್ತೇವೆ. - ಕೆ ಪಿ ಶ್ರೀಕಾಂತ್, ನಿರ್ಮಾಪಕ

ರಾಜ್ಯದಲ್ಲಿ 50 ಮಲ್ಟಿಪ್ಲೆಕ್ಸ್‌,30 ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳು ಓಪನ್!

2. ಎಲ್ಲರಲ್ಲೂ ಗೊಂದಲವಿದೆ

‘ನಮ್ಮ ‘ಕೋಟಿಗೊಬ್ಬ 3’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದರೂ ಬಿಡುಗಡೆಯ ದಿನಾಂಕ ಘೋಷಣೆ ಮಾಡದೆ ಕಾಯುತ್ತಿರುವುದು ಈ ಕಾರಣಕ್ಕೆ. ಯಾಕೆಂದರೆ ಶೇ.100ರಷ್ಟು ಸೀಟು ಭರ್ತಿ ಅದೇಶ ಯಾವಾಗ ಬರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಆಗಸ್‌ಟ್ 1ರಿಂದಲೇ ಹೊಸ ಅನ್‌ಲಾಕ್ ಅದೇಶ ಬರುತ್ತದೆ ಎಂದುಕೊಂಡು ಕೆಲವರು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕ ಪ್ರಕಟಿಸಿದರು. ಇಡೀ ಚಿತ್ರರಂಗ ಸೇರಿ ನಿಯೋಗ ಮಾಡಿಕೊಂಡು ಹೋಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಕೇಳಬೇಕಿದೆ. - ಸೂರಪ್ಪ ಬಾಬು, ನಿರ್ಮಾಪಕ

ವಾಣಿಜ್ಯ ಮಂಡಳಿ- ನಿರ್ಮಾಪಕ ಸಂಘದ ನಡೆ ಏನು?

ಚಿತ್ರರಂಗದ ಮಾತೃಸಂಸ್ಥೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಂದು ನಿಯೋಗ ಮಾಡಿಕೊಂಡು ಬುಧವಾರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ತಿರ್ಮಾನಿಸಿದೆ. ‘ನಾವು ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕಿತ್ತು. ಆದರೆ, ಅವರಿಗೆ ಬೇರೆ ಬೇರೆ ಕಾರ್ಯಕ್ರಮಗಳು ಇದ್ದುದ್ದರಿಂದ ನಮಗೆ ಬುಧವಾರ ಭೇಟಿಗೆ ಅವಕಾಶ ಕೊಟ್ಟಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಜತೆಗೆ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಹೊಸ ಮುಖ್ಯಮಂತ್ರಿಗಳ ಬಳಿ ವಿವರಿಸುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿ ಅದೇಶಕ್ಕೂ ಮನವಿ ಮಾಡುತ್ತೇವೆ’ ಎನ್ನುತ್ತಾರೆ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್.

ಒಟ್ಟಿನಲ್ಲಿ ಚಿತ್ರರಂಗದ ಮನವಿಯನ್ನು ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರು ಪರಿಶೀಲನೆ ಮಾಡಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಸದ್ಯಕ್ಕಂತೂ ಯಾರಲ್ಲೂ ಸ್ಪಷ್ಟತೆ ಇಲ್ಲ. ಆಗಸ್‌ಟ್ ತಿಂಗಳಲ್ಲಿ ಹೌಸ್‌ಫುಲ್‌ಗೆ ಅವಕಾಶ ಸಿಗುತ್ತದೆಂಬ ನಿರೀಕ್ಷೆ ಸದ್ಯಕ್ಕೆ ಕಷ್ಟವಾಗಿದೆ. ಅಂದಹಾಗೆ ಇತ್ತೀಚೆಗೆ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಹೊಸ ಮುಖ್ಯಮಂತ್ರಿಗಳನ್ನು ಖಾಸಗಿ ಕಾರ್ಯಕ್ರಮಕ್ಕೆ ಅಹ್ವಾನಿಸಲು ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿ ವಿಚಾರ ಬಂದಾಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದಂತೆ ಅನುಕೂಲ ಮಾಡಿಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎನ್ನಲಾಗಿದೆ.