ತಾರೆಗಳು ನಾಪತ್ತೆ: ಹೊಸಬರೇ ಚಿತ್ರರಂಗದ ಪಾಲಿನ ಅನ್ನದಾತರು.. ಇಲ್ಲಿದೆ ಕತೆಯೇ ಹೀರೋ ಆಗಿದ್ದು!
‘ಭೀಮ’ ಚಿತ್ರದ ಮೂಲಕ ದುನಿಯಾ ವಿಜಯ್ ಹಾಗೂ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೂಲಕ ಗಣೇಶ್- ಇಬ್ಬರೇ ಹೆಸರು ಉಳಿಸಿದವರು. ಮಿಕ್ಕಂತೆ 10ಕ್ಕೂ ಹೆಚ್ಚು ಸ್ಟಾರ್‌ಗಳ ಚಿತ್ರಗಳ ಬಂದಿದ್ದರೂ ಅವು ಮರು ದಿನ ಚಿತ್ರಮಂದಿರಗಳಲ್ಲಿ ಉಳಿದುಕೊಂಡಿದ್ದು ಕಾಣೆ.
ಆರ್. ಕೇಶವಮೂರ್ತಿ
ಈ ವರ್ಷದ ಕ್ಯಾಲೆಂಡರ್ ಹತ್ತನೇ ತಿಂಗಳಿಗೆ ಕಾಲಿಡಲು ಮೂರು ದಿನ ಬಾಕಿ. ಕನ್ನಡ ಚಿತ್ರರಂಗದಲ್ಲಿ ಇಲ್ಲಿವರೆಗೂ ತೆರೆಕಂಡ ಚಿತ್ರಗಳ ಸಂಖ್ಯೆ 190ಕ್ಕೂ ಹೆಚ್ಚು. ಇಷ್ಟೂ ಚಿತ್ರಗಳ ಪೈಕಿ ದೊಡ್ಡ ತಾರೆಗಳ ಸಿನಿಮಾಗಳನ್ನು ಹುಡುಕುವುದೆಂದರೆ ಸಿನಿಮಾ ಆರಂಭವಾದ ಮೇಲೆ ಥಿಯೇಟರ್ ಪ್ರವೇಶಿಸುವ ಪ್ರೇಕ್ಷಕ ಕತ್ತಲಲ್ಲಿ ಸೀಟು ಹುಡುಕಿದಂತೆ. ಟಾರ್ಚ್ ಹಾಕಿಕೊಳ್ಳದೆ ಹೋದರೆ ಪ್ರೇಕ್ಷಕನಿಗೆ ತನ್ನ ಸೀಟಿನ ನಂಬರ್ ಪತ್ತೆ ಮಾಡೋದು ಕಷ್ಟ. 2024ನೇ ಸಾಲಿನ ಈ 9 ತಿಂಗಳಲ್ಲಿ ತೆರೆಕಂಡ ಸಿನಿಮಾಗಳಲ್ಲಿ ದೊಡ್ಡ ನಟರ ಚಿತ್ರಗಳನ್ನೂ ಹುಡುಕಿದರೆ ಹೀಗೆ ಕತ್ತಲು.. ಕತ್ತಲು..
‘ಭೀಮ’ ಚಿತ್ರದ ಮೂಲಕ ದುನಿಯಾ ವಿಜಯ್ ಹಾಗೂ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೂಲಕ ಗಣೇಶ್- ಇಬ್ಬರೇ ಹೆಸರು ಉಳಿಸಿದವರು. ಮಿಕ್ಕಂತೆ 10ಕ್ಕೂ ಹೆಚ್ಚು ಸ್ಟಾರ್‌ಗಳ ಚಿತ್ರಗಳ ಬಂದಿದ್ದರೂ ಅವು ಮರು ದಿನ ಚಿತ್ರಮಂದಿರಗಳಲ್ಲಿ ಉಳಿದುಕೊಂಡಿದ್ದು ಕಾಣೆ. ಈ ವರ್ಷದ ಮೊದಲ ತಿಂಗಳಿನ, ಮೊದಲ ವಾರದಲ್ಲಿ ಕನ್ನಡ ಚಿತ್ರರಂಗ ತನ್ನ ಪ್ರದರ್ಶನ ಖಾತೆ ಶುರು ಮಾಡಿದ್ದು ‘ಆನ್‌ಲೈನ್ ಮದುವೆ ಆಫ್‌ಲೈನ್ ಶೋಭನ’ ಚಿತ್ರದ ಮೂಲಕ. ವಿಶೇಷ ಎಂದರೆ ವರ್ಷದ ಮೊದಲ ಚಿತ್ರವೇ ಹೊಸಬರದ್ದು.
ರಿಷಬ್ ಶೆಟ್ಟಿ ನನ್ನ ತಮ್ಮ ಎಂದ ಕಿಚ್ಚ ಸುದೀಪ್: ಇವರಿಬ್ಬರದ್ದು ಸ್ನೇಹ ಮಾತ್ರವಲ್ಲ ಅಣ್ತಮ್ಮಂದಿರ ಸಂಬಂಧ!
ಈ ಚಿತ್ರದಿಂದ ಶುರುವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಬಂದ ಪವಿತ್ರನ್ ನಿರ್ದೇಶನದ ‘ಕರ್ಕಿ’ ಚಿತ್ರದವರೆಗೂ ಹುಡುಕಿದರೂ ಕನ್ನಡದ ದೊಡ್ಡ ತಾರೆಗಳು ಅಂತ ಪತ್ತೆಯಾಗೋದು ಜಗ್ಗೇಶ್, ದುನಿಯಾ ವಿಜಯ್, ಗಣೇಶ್, ಆದಿತ್ಯ, ನೀನಾಸಂ ಸತೀಶ್, ಶರಣ್, ವಿನಯ್ ರಾಜ್‌ಕುಮಾರ್, ರಾಜ್ ಬಿ ಶೆಟ್ಟಿ ಹೀಗೆ ಒಂದಿಷ್ಟು ಮಂದಿ. ಇನ್ನೂ ಒಂಭತ್ತನೇ ತಿಂಗಳ ಕೊನೆಯ ವಾರದಲ್ಲೂ ತೆರೆಗೆ ಬರುತ್ತಿರುವ ಚಿತ್ರಗಳು ಕೂಡ ಬಹುತೇಕ ಹೊಸಬರದ್ದೇ. ಅಚ್ಚರಿ ಎನಿಸಿದರೂ ಇದು ನಿಜ. 2024ನೇ ವರ್ಷ ಮುಗಿಯಲು ಇನ್ನೂ ಮೂರು ತಿಂಗಳು ಮಾತ್ರ ಬಾಕಿ. ಆದರೂ ಸ್ಯಾಂಡಲ್‌ವುಡ್‌ನ ಯಾವ ದೊಡ್ಡ ಸ್ಟಾರ್ ಚಿತ್ರವೂ ಚಿತ್ರಮಂದಿರಗಳಿಗೆ ಬಂದು ಸದ್ದು ಮಾಡಲಿಲ್ಲ. ಹೀಗಾಗಿ ಈ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ತಾರೆಗಳು ನಾಪತ್ತೆ, ಹೊಸಬರ ಚಿತ್ರಗಳೇ ಅನ್ನದಾತರು.
ಮುಂದೆ ಬರಲಿರುವ ತಾರೆಗಳು: ಉಪೇಂದ್ರ ನಟನೆಯ ‘ಯುಐ’, ಧ್ರುವ ಸರ್ಜಾ ಅವರ ‘ಮಾರ್ಟಿನ್’ ಹಾಗೂ ‘ಕೆಡಿ’, ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರಗಳು 2024ನೇ ವರ್ಷದ ದೊಡ್ಡ ಸಿನಿಮಾಗಳು ಎಂದುಕೊಳ್ಳಬಹುದು. ಈ ಪೈಕಿ ‘ಯುಐ’ ಹಾಗೂ ‘ಮಾರ್ಟಿನ್’ ಮುಂದಿನ ತಿಂಗಳು ಬರುತ್ತಿವೆ.
ಪರಭಾಷೆಯ ಸ್ಟಾರ್‌ಗಳದ್ದೇ ಮೇಲುಗೈ: ಕನ್ನಡದಲ್ಲಿ ತಾರೆಗಳು ನಾಪತ್ತೆ ಎನಿಸಿಕೊಂಡರೆ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಸ್ಟಾರ್‌ಗಳು ಸದ್ದು ಮಾಡಿದ್ದಾರೆ. ತೆಲುಗಿನಲ್ಲಿ ಪ್ರಭಾಸ್, ಮಹೇಶ್ ಬಾಬು, ರವಿತೇಜ, ರಾಮ್ ಪೋತಿನೇನಿ, ವಿಜಯ್ ದೇವರಕೊಂಡ, ನಾನಿ, ಅಕ್ಕಿನೇನಿ ನಾರ್ಜುನಾ, ತಮಿಳಿನಲ್ಲಿ ಧನುಷ್, ವಿಕ್ರಮ್, ವಿಜಯ್, ವಿಜಯ್ ಸೇತುಪತಿ, ಜಯಂ ರವಿ, ಶಶಿಕುಮಾರ್, ವಿಜಯ್ ಆ್ಯಂಟನಿ, ವಿಶಾಲ್ ಹಾಗೂ ಮಯಾಳಂನಲ್ಲಿ ಮಮ್ಮುಟ್ಟಿ, ಫಹಾದ್ ಫಾಸಿಲ್, ಪೃಥ್ವಿರಾಜ್ ಸುಕುಮಾರನ್, ಟೊವಿನೋ ಥಾಮಸ್... ಹೀಗೆ ಆಯಾ ಭಾಷೆಯಲ್ಲಿ ದೊಡ್ಡ ತಾರೆಗಳ ಚಿತ್ರಗಳು ಬಂದಿವೆ.
ಥೇಟ್ ಸಿನಿಮಾ ಸ್ಟೈಲ್ನಲ್ಲೇ ಅವಾಜ್ ಬಿಟ್ಟ ಪವನ್ ಕಲ್ಯಾಣ್: ಅಬ್ರಾಡ್ನಿಂದ ವೀಡಿಯೋ ಬಿಟ್ಟ ಪ್ರಕಾಶ್ ರಾಜ್!
ಕತೆಯೇ ಹೀರೋ ಆಗಿದ್ದು: ಜನಪ್ರಿಯ ತಾರೆಗಳು ಇಲ್ಲದೆ ಕತೆಯೇ ಹೀರೋ ಎನಿಸಿಕೊಂಡು ಗೆಲ್ಲುವ ಮೂಲಕ ಮಲಯಾಳಂ ಹಾಗೂ ತೆಲುಗು ಚಿತ್ರರಂಗ ಹೊಸ ಅಧ್ಯಯ ಬರೆದಿದ್ದು ಈ ವರ್ಷದ ಒಂಭತ್ತು ತಿಂಗಳ ಹೈಲೈಟ್ ಎನ್ನಬಹುದು. ತೆಲುಗಿನ ‘ಕಮಿಟಿ ಕುರ್ರೊಳ್ಳು’, ‘ಮಾರುತಿ ನಗರ್ ಸುಬ್ರಮಣ್ಯಂ’ ಹಾಗೂ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್’, ‘ಪ್ರೇಮಲು’, ತಮಿಳಿನ ‘ಅರಣ್ಮನೈ 4’ ಚಿತ್ರಗಳು ಕಂಟೆಂಟ್ ಕಾರಣಕ್ಕೆ ಯಶಸ್ವಿ ಎನಿಸಿಕೊಂಡಿವೆ.