82 ವರ್ಷ ವಯಸ್ಸಿನ ದತ್ತಣ್ಣ ಅವರು ಇನ್ನೂ ಏಕೆ ಬ್ಯಾಚುಲರ್ ಆಗಿದ್ದಾರೆ? ಅವರು ಊಟ ತಿಂಡಿ ಹೇಗೆ ಮಾಡುತ್ತಾರೆ? ಎಂಬ ರಹಸ್ಯವನ್ನು ಸ್ವತಃ ದತ್ತಣ್ಣ ಅವರೇ ಬಿಚ್ಚಿಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸ್ಟಿಲ್ ಬ್ಯಾಚುಲರ್ ಆಗಿರುವ ಹಿರಿಯ ನಟ ದತ್ತಣ್ಣ ಅವರಿಗೆ ಇದೀಗ 82 ವರ್ಷ ವಯಸ್ಸಾಗಿದೆ. ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಿರುವ ದತ್ತಣ್ಣ ಈಗಲೂ ಅಡುಗೆ ಮಾಡುವುದನ್ನು ಕಲಿತುಕೊಂಡಿಲ್ಲ. ಅಡುಗೆ ಮಾತ್ರವಲ್ಲ ಒಂದು ಕಾಫಿ ಮಾಡುವುದಕ್ಕೂ ಬರುವುದಿಲ್ಲ ಎಂದು ಸ್ವತಃ ನಟ ದತ್ತಣ್ಣ ಹೇಳಿಕೊಂಡಿದ್ದಾರೆ. ಆದರೆ, ಊಟ-ತಿಂಡಿ ಹೇಗೆ ಮಾಡುತ್ತಾರೆ ಎಂಬ ರಹಸ್ಯವನ್ನೂ ಬಿಚ್ಚಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಒಂದು ತುಣುಕಿನಲ್ಲಿ ದತ್ತಣ್ಣ ಅವರ ಮಾತಿನ ವಿಡಿಯೋ ವೈರಲ್ ಆಗಿದೆ. ಹಾಟ್ ಸೀಟಿನಲ್ಲಿ ಕುಳಿತುಕೊಂಡಿದ್ದ ನಟ ದತ್ತಣ್ಣ ಅವರಿಗೆ ಯುವಕನೊಬ್ಬ ಒಂದು ಪ್ರಶ್ನೆ ಕೇಳುತ್ತಾನೆ. ನೀವು ಬ್ಯಾಚುಲರ್ ಆಗಿಯೇ ಜೀವನ ಕಳೆದ ವ್ಯಕ್ತಿ ಆಗಿದ್ದೀರಿ. ಇದೀಗ ನಾನು ಮದುವೆ ಮಾಡಿಕೊಳ್ಳಬೇಕೋ ಅಥವಾ ಬೇಡವೋ ಎಂದು ನಟ ದತ್ತಣ್ಣ ಅವರಿಗೆ ಪ್ರಶ್ನೆ ಕೇಳಿದ್ದಾನೆ. ನಿನ್ನ ಅಭಿಪ್ರಾಯವೇನು ಎಂದು ಕೇಳಿದಾಗ ಪ್ರಶ್ನೆ ಮಾಡಿದ ಯುವಕ ನಾನು ಮದುವೆ ಆಗಬಾರದು ಎಂದುಕೊಂಡಿದ್ದೇನೆ. ನನ್ನ ಸ್ನೇಹಿ ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕುತ್ತಿದ್ದಾನೆ ಎಂದು ದತ್ತಣ್ಣ ಅವರಿಗೆ ತಿಳಿಸುತ್ತಾನೆ.
ಇದಕ್ಕೆ ನಗುತ್ತಲೇ ಪ್ರತಿಕ್ರಿಯೆ ನೀಡಿದ ದತ್ತಣ್ಣ ಅವರು ನಿನ್ನ ಸ್ನೇಹಿತನನ್ನು ಕೇಳು.., ಆತ ಯಾವ ಕಾರಣಕ್ಕೆ ಮದುವೆ ಮಾಡಿಕೊಳ್ಳಬೇಕು ಎಂಬುದಕ್ಕೆ ಸ್ಪಷ್ಟ ಮತ್ತು ಸಮರ್ಪಕ ಉತ್ತರವನ್ನು ಕೊಟ್ಟರೆ ಧಾರಾಳವಾಗಿ ಮದುವೆ ಮಾಡಿಕೊಳ್ಳಲಿ. ಇದಕ್ಕೆ ನನ್ನ ಅಭ್ಯಂತರವೇನಿಲ್ಲ. ಆದರೆ, ನೀನು ಮದುವೆ ಆಗಬಾರದು ಎನ್ನುವ ನಿರ್ಧಾರಕ್ಕೆ ಬರುವ ಮುನ್ನ ನೀನು ಕೂಡ ದತ್ತಣ್ಣನಂತೆ ಜೀವನ ಮಾಡಲು ಸಾಧ್ಯವೇ ಎಂಬುದನ್ನು ಯೋಚನೆ ಮಾಡಬೇಕು. ನನಗೆ ಇದೀಗ 82 ವರ್ಷವಾದರೂ ಏಕಾಂಗಿಯಾಗಿ ಜೀವನ ಮಾಡಲು ಯೋಗ್ಯತೆ ಇದೆಯಾ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ನಾಗತಿಹಳ್ಳಿ ಜೊತೆ ಫುಡ್ ಕೋರ್ಟ್ ನಲ್ಲಿ ತಿಂಡಿಪೋತ ದತ್ತಣ್ಣ! ಇಬ್ಬರ ತಲೆ ತಿಂದಿದ್ದ ಪ್ರಶ್ನೆಗೆ ಉತ್ತರ ನಿಮ್ಮಲ್ಲಿದ್ಯಾ?
ಮುಂದುವರೆದು, ನಾನು ಈಗಲೂ ಫುಟ್‌ಪಾತ್‌ನಲ್ಲಿಯೇ ಊಟ ಮಾಡುವುದು. ನನ್ನ ಮನೆಯಲ್ಲಿ ಅಡುಗೆ ಮನೆ ಎಂಬುದನ್ನೇ ಇಟ್ಟುಕೊಂಡಿಲ್ಲ. ಅಡುಗೆ ಮಾತ್ರವಲ್ಲ, ಕಾಫಿ ಹೇಗೆ ಮಾಡಬೇಕು ಎಂಬುದು ನನಗೆ ಗೊತ್ತಿಲ್ಲ. ಇದೆಲ್ಲದಕ್ಕೂ ತಯಾರಿದ್ದೀನಿ ಎನ್ನುವುದಾದರೆ, ಒಬ್ಬಂಟಿಯಾಗಿರುವ ಯೋಚನೆ ಮಾಡಬಹುದು ಎಂದು ತಿಳಿಸುತ್ತಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಅಮರ್ ವಿಜಯ್ ಎನ್ನುವವರು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಹಲವಾರು ಕಾಮೆಂಟ್‌ಗಳು ಕೂಡ ಬಂದಿವೆ. ಅದರಲ್ಲಿ ಒಬ್ಬ ನೆಟ್ಟಿಗ 'ನಾನು ಅಷ್ಟೇ ಮದುವೆ ಆಗಬಾರದು ಅಂಥ ಇದೀನಿ. 2014ರಲ್ಲಿ ಬೆಂಗಳೂರಿಗೆ ಬಂದೆ ಈವತ್ತಿಗೂ ನಾನು ಹೋಟೆಲ್ ನಲ್ಲಿ ಊಟ ಮಾಡೋದು. ನನಗೆ ಈಗ 29 ವರ್ಷ ಸುಮಾರು 11 ವರ್ಷದಿಂದ ಹೊರಗಡೆ ನೇ ಊಟ ನಾನ್ ಆರಾಮಾಗಿ ಇದೀನಿ... ಎಂದು ಕಾಮೆಂಟ್ ಮಾಡಿದ್ದಾನೆ. ಮತ್ತೊಬ್ಬರು 'ಮದುವೆ ಆದವರು ಮದುವೆ ಆಗೋದ್ ಬೇಡ ಅನ್ನುತಾರೆ ಮದುವೆ ಆಗದೇ ಇರುವವರು ಮದುವೆ ಆಗ್ಬೇಕು ಅನ್ನುತಾರೆ' ಎಂದಿದ್ದಾರೆ. ಇನ್ನೊಬ್ಬರು 'ಗುರು ಮದುವೆ ಆಗಲೇ ಬೇಡಿ ... ಇದು ನನ್ನ ಅನುಭವ ....' ಎಂದು ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಬಹುತೇಕರು ಸಿಂಗಲ್ ಲೈಫ್ ಬೆಟರ್ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನರ್ಸ್‌ನ ಇಟ್ಕೋಬಹುದಲ್ಲ, ಮದ್ವೆಯೆಲ್ಲಾ ಯಾಕೆ: ಹಿರಿಯ ನಟ ದತ್ತಣ್ಣ
