ಹೊಸಬರ ಚಿತ್ರ ‘ಗ್ರೂಫಿ’ಯ ಹಾಡುಗಳು ಬಿಡುಗಡೆಯಾಗಿವೆ. ಆಗಸ್ಟ್‌ 20ರ ವರಮಹಾಲಕ್ಷ್ಮಿ ಹಬ್ಬದಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್‌ ಆಗಲಿದೆ.

ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದ ಮೊದಲ ಭಾಗ ಅರ್ಜುನ್‌ ಜನ್ಯಾ ಅವರ ಹೊಗಳಿಕೆಗೆ ಮೀಸಲಾಯ್ತು. ಅರ್ಜುನ್‌ ಜನ್ಯಾ ತಮ್ಮ ಶಿಷ್ಯಂದಿರ ಮೊದಲ ಸಾಹಸಕ್ಕೆ ಬೆನ್ನು ತಟ್ಟಿದರು. ‘21 ವರ್ಷಗಳ ಕೆಳಗೆ ಇದೇ ಜಾಗದಲ್ಲಿ ವಿ. ಮನೋಹರ್‌ ಸಂಗೀತಕ್ಕೆ ಕೀಬೋರ್ಡ್‌ ನುಡಿಸುತ್ತಿದ್ದೆ. ಇಲ್ಲಿಂದಲೇ ನನ್ನ ಸ್ನೇಹಿತರ ಜರ್ನಿಯೂ ಶುರುವಾಗಿದೆ. ಅವರ ಪ್ರಯತ್ನ ಯಶಸ್ವಿಯಾಗಲಿ’ ಎಂದು ಶುಭ ಹಾರೈಸಿದರು.

ದೃಶ್ಯ 2 ಚಿತ್ರದ ಮಹತ್ವದ ಭಾಗದ ಶೂಟಿಂಗ್‌ ಮುಕ್ತಾಯ: ಆರೋಹಿ

ನಿರ್ದೇಶಕ ರವಿ ಅರ್ಜುನ್‌ ಮಾತನಾಡಿ, ‘ಈ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ಪ್ರಕೃತಿಯ ಜೊತೆಗೇ ಸಾಗುತ್ತದೆ. ಸಾಮಾಜಿಕ ಕಳಕಳಿಯ ಸಂದೇಶವೂ ಇದೆ. ಆರು ಜನರ ತಂಡದ ಕತೆ. ಎಲ್ಲರೂ ಸೆಲ್ಫಿಗಾಗಿ ಒದ್ದಾಡುತ್ತಿರುವಾಗ ಗ್ರೂಪ್‌ ಅನ್ನೋದು ಎಷ್ಟುಮುಖ್ಯ ಅಂತ ಈ ಸಿನಿಮಾದಲ್ಲಿ ಹೇಳಿದ್ದೇವೆ’ ಎಂದರು.

ನಾಯಕ ಆರ್ಯನ್‌ಗೆ ಫೋಟೋ ಜರ್ನಲಿಸ್ಟ್‌ ಪಾತ್ರವಂತೆ. ನಾಯಕಿ ಪದ್ಮಶ್ರೀ ಜೈನ್‌ ಮಾತನಾಡಿ, ‘ಇದರಲ್ಲಿ ಭುವಿ ಅನ್ನೋ ಪಾತ್ರ ನನ್ನದು. ಸೆಲ್ಫಿಗಾಗಿ ತಹತಹಿಸುವ, ಪ್ರತೀ ಕ್ಷಣವನ್ನೂ ಜೀವಿಸುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದರು. ನಿರ್ಮಾಪಕ ಕೆ.ಜಿ. ಸ್ವಾಮಿ, ಸಂಗೀತ ನಿರ್ದೇಶಕ ವಿಜೇತ್‌ ಕೃಷ್ಣ ಮತ್ತಿತರರು ಭಾಗವಹಿಸಿದ್ದರು.