ಫಹಾದ್ ಫಾಸಿಲ್ ನಟನೆಯ ಧೂಮಂ ಪೋಸ್ಟರ್‌‌ ನೋಡಿ ಕನ್ನಡಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಕನ್ನಡ ಎಲ್ರೋ, ನಾಚಿಕೆ ಆಗ್ಬೇಕು ಎಂದು ಹೊಂಬಾಳೆ ಫಿಲ್ಮ್ಸ್‌ಗೆ  ತರಾಟೆ ತೆಗೆದುಕೊಂಡಿದ್ದಾರೆ. 

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾದಲ್ಲಿ ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ. ಸಿನಿಮಾಗೆ ಧೂಮಂ ಎಂದು ಟೈಟಲ್ ಇಡಲಾಗಿದೆ. ಸಿನಿಮಾ ಅನೌನ್ಸ್ ಆಗಿದ್ದು ಆಯ್ತು ಚಿತ್ರೀಕರಣ ಮುಗಿಸಿದ್ದು ಆಗಿದೆ. ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಧೂಮಂ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಸಿನಿಮಾತಂಡ ಚಿತ್ರ ಪ್ರಾರಂಭವಾದ ವೇಗದಲ್ಲಿ ಚಿತ್ರೀಕರಣ ಕೂಡ ಮುಗಿಸಿ ಅಚ್ಚರಿ ಮೂಡಿಸಿತ್ತು. ಇದೀಗ ಧೂಮಂ ಸಿನಿಮಾದ ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. 

ಫಹಾದ್ ಫಾಸಿಲ್ ಮತ್ತು ಪವನ್ ಕುಮಾರ್ ಕಾಂಬಿನೇಷನ್‌ನಲ್ಲಿ ಬಂದ ಧೂಮಂ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಪ್ರತಿಭಾವಂತ ನಟ ಹಾಗೂ ಪ್ರತಿಭಾವಂತ ನಿರ್ದೇಶಕ ಇಬ್ಬರ ಕಾಂಬಿನೇಷನ್‌ನಲ್ಲಿ ಬರ್ತಿರುವ ಧೂಮಂ ಸಿನಿಮಾದ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಇಂದು ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಫಹಾದ್ ಬಾಯಿಗೆ ಪ್ಲಾಸ್ಟರ್ ಅಂಟಿಸಲಾಗಿದೆ. ಫಹಾದ್ ಗಂಭೀರ ನೋಣ ಗಮನ ಸೆಳೆಯುತ್ತಿದೆ. ಪೋಸ್ಟರ್‌ಗೆ 'ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ. ಇಲ್ಲಿದೆ ಮೊದಲ ಕಿಡಿ’ ಎಂಬ ಕ್ಯಾಪ್ಷನ್​ನೊಂದಿಗೆ ಪೋಸ್ಟರ್​ ಹಂಚಿಕೊಂಡಿದೆ ಹೊಂಬಾಳೆ ಫಿಲ್ಮ್ಸ್.

'ಧೂಮಂ' ಫಸ್ಟ್ ಲುಕ್ ರಿಲೀಸ್‌ ಡೇಟ್ ಅನೌನ್ಸ್ ಮಾಡಿದ ಹೊಂಬಾಳೆ: 'ಸಲಾರ್' ಅಪ್‌ಡೇಟ್‌ ಎಲ್ಲಿ ಎಂದ ಫ್ಯಾನ್ಸ್

ಕನ್ನಡ ಫ್ಯಾನ್ಸ್ ಅಸಮಾಧಾನ

ಅಂದಹಾಗೆ ಧೂಮಂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಆದರೆ ಸದ್ಯಕ್ಕೆ ಪೋಸ್ಟರ್ ಮಲಯಾಳಂ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿದೆ. ಇದು ಕನ್ನಡ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕನ್ನಡ ನಿರ್ಮಾಣ ಸಂಸ್ಥೆ, ಕನ್ನಡ ನಿರ್ದೇಶಕ ಆದರೆ ಕನ್ನಡದಲ್ಲೇ ಇಲ್ಲ ಪೋಸ್ಟರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮಲಯಾಳಂ ನಟ ಓಕೆ ಆದರೆ ಕನ್ನಡದಲ್ಲಿ ಪೋಸ್ಟರ್ ಯಾಕಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಕನ್ನಡ ಎಲ್ರೋ...ಎಂದು ಕೆಟ್ಟ ಪದ ಬಳಸಿದ್ದಾರೆ. ಲುಕ್ ಸೂಪರ್ ಆಗಿದೆ ಆದರೆ ಕನ್ನಡ ಯಾಕಿಲ್ಲ ನಾಚಿಕೆ ಆಗಬೇಕು ಎಂದು ತರಾಟೆ ತೆಗೆದುಕೊಂಡಿದ್ದಾರೆ. ಧೂಮಂ ಸಿನಿಮಾ ನಿಜಕ್ಕೂ ಯಾವ ಭಾಷೆಯಲ್ಲಿ ತಯಾರಾಗುತ್ತಿದೆ, ಕನ್ನಡದಲ್ಲಿ ಯಾಕಿಲ್ಲ ಎಂದು ಹೊಂಬಾಳೆ ಫಿಲ್ಮ್ಸ್ ಮತ್ತು ನಿರ್ದೇಶಕ ಪವನ್ ಕುಮಾರ್‌ರನ್ನ ಪ್ರಶ್ನೆ ಮಾಡುತ್ತಿದ್ದಾರೆ.

Scroll to load tweet…

ಧೂಮಂ ಸಿನಿಮಾದಲ್ಲಿ ಫಹಾದ್ ಫಾಸಿಲ್ ಜೊತೆ ಸೂರರೈ ಪೊಟ್ರು ಖ್ಯಾತಿಯ ನಟಿ ಅಪರ್ಣಾ ಬಾಲಮುರಳಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ನಟ ಫಹಾದ್​ ಫಾಸಿಲ್​ ಜೊತೆ ಮಲಯಾಳಂನ ಮತ್ತೋರ್ವ ನಟ ರೋಷನ್​ ಮ್ಯಾಥೀವ್ ಕೂಡ ನಟಿಸಿದ್ದಾರೆ. ಲೂಸಿಯಾ ಸಿನಿಮಾಗೆ ಸಂಗೀತ ನೀಡಿದ್ದ ಪೂರ್ಣಚಂದ್ರ ತೇಜಸ್ವಿ ಧೂಮಂ ಸಿನಿಮಾಗೂ ಸಂಗೀತ ನೀಡಿದ್ದಾರೆ. ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಧೂಮಂ ಕನ್ನಡದಲ್ಲೂ ರಿಲೀಸ್ ಆಗುತ್ತಾ ಕಾದುನೋಡಬೇಕಿದೆ.