ಕನ್ನಡದ ಕೋಟಿ ನಿರ್ಮಾಪಕ ರಾಮು ಅವರ ಕೊನೆಯ ಕನಸು ‘ಅರ್ಜುನ್‌ ಗೌಡ’. ಪ್ರಜ್ವಲ್‌ ದೇವರಾಜ್‌ ನಟನೆಯ ಈ ಚಿತ್ರವನ್ನು ಕಳೆದ ಮೂರು ವರ್ಷಗಳಿಂದ ಮಗುವಿನಂತೆ ಸಾಕುತ್ತಿದ್ದರು. ಈ ಚಿತ್ರ ಹುಟ್ಟಿಕೊಂಡಿದ್ದು ಹೇಗೆ, ಸಿನಿಮಾ ಯಾವಾಗ ಬಿಡುಗಡೆ ಮಾಡಬೇಕಿತ್ತು, ರಾಮು ಅವರ ಮುಂದಿನ ಸಿನಿಮಾ ಪ್ಲಾನ್‌ಗಳೇನಿತ್ತು ಎಂಬುದನ್ನು ನಿರ್ದೇಶಕ ಲಕ್ಕಿ ಶಂಕರ್‌ ಹೇಳಿದ್ದಾರೆ.

ಲಕ್ಕಿ ಶಂಕರ್‌, ನಿರ್ದೇಶಕ

ನನ್ನ ಮತ್ತು ರಾಮು ಅವರ ಪ್ರಯಾಣ ಮೂರು ವರ್ಷ. ಒಂದು ಚಿತ್ರಕ್ಕಾಗಿ ಒಬ್ಬ ನಿರ್ಮಾಪಕ, ನಿರ್ದೇಶಕನ ಜತೆ ಮೂರು ವರ್ಷ ಜರ್ನಿ ಮಾಡುತ್ತಾನೆ ಅಂದರೆ ಆ ನಿರ್ಮಾಪಕನಿಗೆ ಸಿನಿಮಾ ಮೇಲಿರುವ ಪ್ರೀತಿ, ಮೋಹ ಎಂಥದ್ದು ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಯಾವಾಗ ‘ಅರ್ಜುನ್‌ ಗೌಡ’ ಅಂತ ನಾಮಕರಣ ಮಾಡಿ ಸಿನಿಮಾ ಆರಂಭಿಸಿದ್ವೋ ಅಂದಿನಿಂದಲೇ ಅವರ ಮುಂದಿನ ಎಲ್ಲಾ ಸಿನಿಮಾ ಕನಸು, ಯೋಜನೆ ಮತ್ತು ದಾರಿಗಳು ಈ ಚಿತ್ರದ ಮೇಲೆ ನಿಂತಿದ್ದವು.

ಗಾಲ್ಫ್ ಕ್ಲಬ್‌ನಲ್ಲಿ ಸರ್ವರ್ ಆಗಿದ್ದ ಕೋಟಿ ರಾಮು..!

ಹತ್ತಾರು ಸಿನಿಮಾಗಳನ್ನು ನಿರ್ಮಿಸಿದವರು, 400ಕ್ಕೂ ಹೆಚ್ಚು ಚಿತ್ರಗಳನ್ನು ವಿತರಣೆ ಮಾಡಿದವರು, ಬೇರೆ ಬೇರೆ ಭಾಷೆಯ ವಿತರಕರು ಹಾಗೂ ನಿರ್ಮಾಪಕರ ಜತೆ ಸ್ನೇಹ ಬೆಳೆಸಿಕೊಂಡಿದ್ದವರು. ಸಿನಿಮಾ ಸೋತಾಗ ಕುಗ್ಗಲಿಲ್ಲ. ಗೆದ್ದಾಗ ಅಹಂ ತೋರಿಸಲಿಲ್ಲ. ಆದರೆ, ಕೊರೋನಾ ಎನ್ನುವ ಕಣ್ಣಿಗೇ ಕಾಣದ ವೈರಸ್‌ ಮುಂದೆ ದೈತ್ಯ ನಿರ್ಮಾಪಕ ರಾಮು ಸೋತುಬಿಟ್ಟರು. ಅವರ ನಿಧನ ನನಗೆ ಲೈಫ್‌ ಬ್ರೇಕ್‌ ಆದಂತೆ ಆಗಿದೆ.

ರಾಮು ಅವರನ್ನು ನಾನು ಭೇಟಿ ಆಗಿದ್ದು ಆಕಸ್ಮಿಕವಾಗಿ. ಆಗ ಅವರು ‘ಮುಂಬೈ’ ಸಿನಿಮಾ ನಿರ್ಮಿಸುತ್ತಿದ್ದರು. ಆ್ಯಕ್ಷನ್‌ ಸಿನಿಮಾ ಪ್ರಿಯರಾಗಿದ್ದ ರಾಮು ಅವರಿಗೆ ನಾನು ಕತೆ ಹೇಳಬೇಕು ಅಂದುಕೊಂಡು ಹೋದೆ. ಅದೇ ‘ಓಂ 2’ ಚಿತ್ರದ ಕತೆ. ಕತೆ ಕೇಳಿ ‘ಶಿವಣ್ಣ ಡೇಟ್‌ ನನ್ನ ಬಳಿ ಇದೆ. ಕತೆ ಚೆನ್ನಾಗಿದೆ. ಸಿನಿಮಾ ಮಾಡೋಣ. ಮತ್ತೊಮ್ಮೆ ಸಿಕ್ಕಿ ಕತೆ ಪೂರ್ತಿ ಹೇಳಿ’ ಅಂತ ಹೇಳಿ ಕಳುಹಿಸಿದರು.

ಅದ್ದೂರಿ ಸಿನಿಮಾಗಳ ಸರದಾರ; ಕೋಟಿ ಕನಸುಗಾರ ರಾಮು ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು! 

ತುಂಬಾ ದಿನ ಆದ ಮೇಲೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಂಡು ‘ಏನ್ರಿ ಬರಲೇ ಇಲ್ಲ. ಏನಾಯಿತು ನೀವು ಹೇಳಿದ ಕತೆ’ ಅಂತ ಕೇಳಿದರು. ಆಗ ಅವರೇ ನನ್ನ ಆಫೀಸ್‌ಗೆ ಕರೆದುಕೊಂಡು ಹೋಗಿ ಕತೆ ಹೇಳುವಂತೆ ಕೇಳಿದರು. ಆಗ ನಾನು ‘ಓಂ 2 ಕತೆ ಆಮೇಲೆ ಮಾಡೋಣ. ಈಗ ಬೇರೆ ಕತೆ ಮಾಡಿಕೊಂಡಿದ್ದೇನೆ, ಕೇಳಿ’ ಎಂದು ಹೇಳಿದ ಕತೆಯೇ ಈ ‘ಅರ್ಜುನ್‌ ಗೌಡ’. ತೆಲುಗಿನಲ್ಲಿ ‘ಅರ್ಜುನ್‌ ರೆಡ್ಡಿ’ ಸಿನಿಮಾ ಹಿಟ್‌ ಆದ ಮೇಲೆ ರಾಮು ಅವರೇ ‘ಅರ್ಜುನ್‌ ಗೌಡ’ ಹೆಸರು ನೋಂದಾಯಿಸಿಕೊಂಡಿದ್ದರು. ನಾನು ಹೇಳಿದ ಕತೆಗೆ ‘ಅರ್ಜುನ್‌ ಗೌಡ’ ಟೈಟಲ್‌ ಸೂಕ್ತ ಎಂದು ಅವರೇ ಹೇಳಿದರು. ಅಲ್ಲಿಂದ ನಮ್ಮ ಪ್ರಯಾಣ ಶುರುವಾಯಿತು.

"

ಯಾವಾಗ ಸಿಕ್ಕರೂ ಸಿನಿಮಾ ಬಿಟ್ಟು ಬೇರೆ ಮಾತನಾಡುತ್ತಿರಲ್ಲ. ನನ್ನ ಮೊಬೈಲ್‌ಗೆ ಪ್ರತಿ ದಿನ ಮೊದಲು ಫೋನ್‌ ಬರುತ್ತಿದ್ದದ್ದು ರಾಮು ಅವರಿಂದಲೇ. ಹೀಗೆ ಮೂರು ವರ್ಷ ಜರ್ನಿ. ಅವರು ಸಿನಿಮಾ ಕನಸುಗಳು, ಯೋಜನೆಗಳನ್ನು ಕಂಡು ನಾನು ಅವರನ್ನು ‘ನೀವು ನಮ್ಮ ಕನ್ನಡದ ರಾಜ್‌ಕಪೂರ್‌’ ಎಂದು ಹೇಳುತ್ತಿದ್ದೆ. ಅವರ ಹೆಸರನ್ನು ನಾನು ಮೊಬೈಲ್‌ನಲ್ಲಿ ರಾಜ್‌ಕಪೂರ್‌ ಎಂದೇ ಸೇವ್‌ ಮಾಡಿಕೊಂಡಿದ್ದೇನೆ. ಕೊನೆ ಕೊನೆಗೆ ‘ಅರ್ಜುನ್‌ ಗೌಡ’ ಚಿತ್ರದ ಮೇಲೆ ಅವರು ಯಾವ ರೀತಿ ನಂಬಿಕೆ ಇಟ್ಟುಕೊಂಡಿದ್ದರು ಎಂದರೆ ಎಡಿಟಿಂಗ್‌ ರೂಮ್‌ನಲ್ಲಿ ಕೂತು ಒಬ್ಬರೇ ಸಿನಿಮಾ ನೋಡಿ ಸಂತೋಷದಿಂದ ನನಗೆ ಫೋನ್‌ ಮಾಡಿ ಆ ಸೀನ್‌ ಸೂಪರ್‌, ಈ ಫೈಟ್‌ ಸಕತ್ತಾಗಿದೆ ಎಂದು ಹೇಳುತ್ತಿದ್ದರು. ‘ನೀವು ಬೇರೆ ಸಿನಿಮಾ ಒಪ್ಪಿಕೊಳ್ಳಬೇಡಿ. ಈ ಸಿನಿಮಾ ಗೆಲ್ಲುತ್ತದೆ. ಜತೆಗೆ ಮತ್ತೆ ಮೂರು ಸಿನಿಮಾ ಮಾಡೋಣ’ ಎಂದು ಹೇಳುತ್ತಿದ್ದರು. ಕೊರೋನಾ ಎರಡನೇ ಅಲೆಯ ಲಾಕ್‌ಡೌನ್‌ ಘೋಷಣೆ ಮಾಡೋದು ಒಂದು ದಿನ ತಡವಾಗಿದ್ದರೂ ನಾವು ಚಿತ್ರದ ಬಿಡುಗಡೆ ದಿನಾಂಕ ಪ್ರಕಟಣೆ ಮಾಡುತ್ತಿದ್ದೆವು.

‘ಈ ಸಿನಿಮಾ ಬಿಡುಗಡೆ ಮಾಡಲು ಇದೇ ಸೂಕ್ತ ಸಮಯ. ಕನ್ನಡದಲ್ಲಿ ಸಿನಿಮಾ ಇಲ್ಲ. ಒಳ್ಳೆಯ ಚಿತ್ರವನ್ನು ಜನ ಕೈ ಬಿಡಲ್ಲ’ ಎಂದು ಹೇಳಿ ಚಿತ್ರದ ಜಾಹೀರಾತು ಡಿಸೈನ್‌ ಮಾಡಿಸಿ ನೋಡಿಕೊಂಡು ಹೋದವ ರಾಮು ಅವರು ಮತ್ತೆ ಬರಲಿಲ್ಲ.

ತುಂಬಾ ಸ್ವಚ್ಛತೆ ಕಾಪಾಡಿಕೊಂಡಿದ್ದರು. ಪಕ್ಕಾ ಹೈಜನಿಕ್‌ ಲೈಫ್‌. ಡಸ್ಟ್‌ ಅಲರ್ಜಿ ಇತ್ತು. ಇಂಥ ವ್ಯಕ್ತಿ ಕೊರೋನಾಗೆ ಬಲಿಯಾಗುತ್ತಾರೆ ಎಂದರೆ ಏನು ಹೇಳೋದು! ‘ಅರ್ಜುನ್‌ ಗೌಡ’ ಚಿತ್ರದಿಂದ ತಾನು ಗೆಲ್ಲುತ್ತೇನೆ ಅಂತಿದ್ದರು. ಈಗ ದೊಡ್ಡ ಸಿನಿಮಾಗಳ ಮಾರುಕಟ್ಟೆ. ನಾನು ದೊಡ್ಡ ಸಿನಿಮಾಗಳನ್ನೇ ಮಾಡಬೇಕು ಎನ್ನುತ್ತಿದ್ದರು ಈಗಿಲ್ಲ ಅಂದರೆ ಹೇಗೆ!? ಒಂದು ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿ, ಬೆಂಗಳೂರಿಗೆ ಬಂದು ಹತ್ತಾರು ಚಿತ್ರಗಳನ್ನು ನಿರ್ಮಿಸಿ, ಕೋಟಿ ನಿರ್ಮಾಪಕ ಅನಿಸಿಕೊಂಡ ಅವರ ಸಾಧನೆ ಕಡಿಮೆ ಅಲ್ಲ.

ರಾಮು ಅವರ ಹುಟ್ಟೂರು ಕುಣಿಗಲ್‌ ತಾಲೂಕಿನ ಕೊಡಿಗೇಹಳ್ಳಿ. ಅವರು ಬೆಂಗಳೂರಿಗೆ ಬಂದು ಇದ್ದಿದ್ದು ಹೆಬ್ಬಾಳದ ಬಳಿಯ ಕೊಡಿಗೇಹಳ್ಳಿ. ಹುಟ್ಟು ಮತ್ತು ಅಂತ್ಯ ಒಂದೇ ಹೆಸರಿನ ಊರಿನಲ್ಲಿ. ಇನ್ನೂ ಡೈನಾಮಿಕ್‌ ಸ್ಟಾರ್‌ ದೇವರಾಜ್‌ ಅವರನ್ನು ಹೀರೋ ಮಾಡಿದ ಮೊದಲ ನಿರ್ಮಾಪಕ. ಹಾಗೆ ಅವರ ಪುತ್ರ ಪ್ರಜ್ವಲ್‌ ದೇವರಾಜ್‌ಗೇ ಕೊನೆಯ ಸಿನಿಮಾ ನಿರ್ಮಿಸಿದವರು.

ಅವರ ಬ್ಯಾನರ್‌ನಲ್ಲಿ ಕೆಲಸ ಮಾಡಿದ ಒಬ್ಬ ನಿರ್ದೇಶಕನಾಗಿ ನಾನು ಮಾಡಬಹುದಾದ ಕೆಲಸ ಎಂದರೆ ಅವರ ಕನಸಿನಂತೆ ‘ಅರ್ಜುನ್‌ ಗೌಡ’ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಿ ಅದರ ಯಶಸ್ಸು- ಸಂಭ್ರಮವನ್ನು ರಾಮು ಅವರಿಗೆ ಅರ್ಪಿಸುವುದು.