ಈ ಹಿಂದೆ ‘ಮದಿಪು’ ಚಿತ್ರವನ್ನು ನಿರ್ದೇಶಿಸಿ ಗಮನ ಸೆಳೆದ ಪ್ರತಿಭಾವಂತ ನಿರ್ದೇಶಕ ಚೇತನ್ ಮುಂಡಾಡಿ ಅವರ ‘ವರ್ಣಪಟಲ’ ಸಿನಿಮಾ ನಾಳೆ (ಏ.8) ಬಿಡುಗಡೆಯಾಗಲಿದೆ.
ಆಟಿಸಂಗೆ ತುತ್ತಾಗಿರುವ ಮಕ್ಕಳ ಕತೆಯನ್ನು ಈ ಚಿತ್ರದಲ್ಲಿ ನೋಡಬಹುದಾಗಿದೆ. ಶ್ರೀ ಸಾಯಿ ಗಣೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಕವಿತಾ ಸಂತೋಷ್ ಹಾಗೂ ಲಂಡನ್ ಮೂಲದ ಮಕ್ಕಳ ತಜ್ಞೆ ಆಗಿರುವ ಸರಸ್ವತಿ ಹೊಸದುರ್ಗ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ, ಗಣೇಶ್ ಹೆಗಡೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಜ್ಯೋತಿ ರೈ ಚಿತ್ರದ ಮುಖ್ಯ ಪಾತ್ರಧಾರಿ. ಬಾಲ ಕಲಾವಿದರಾಗಿ ಅಂಶಿಕಾ ಶೆಟ್ಟಿ, ಧನಿಕಾ ಹೆಗ್ಡೆ ಮುಂತಾದವರು ನಟಿಸಿದ್ದಾರೆ. ಬಹುಭಾಷಾ ತಾರೆ ಸುಹಾಸಿನಿ ವೈದ್ಯೆಯಾಗಿ ನಟಿಸಿದ್ದಾರೆ. ಇವರ ಪಾತ್ರವೂ ಹೈಲೈಟ್ ಎಂಬುದು ಚಿತ್ರದ ವಿಶೇಷ.
ಉದ್ಯಮಿ ಕವಿತಾ ಸಂತೋಷ್ ಅವರೇ ಆಟಿಸಂಗೆ ತುತ್ತಾಗಿರುವ ಮಕ್ಕಳ ಕುರಿತು ಅಧ್ಯಯನ, ಸಮೀಕ್ಷೆ ನಡೆಸಿ ಬರೆದಿರುವ ಕತೆ ಇದಾಗಿದೆ. ಇಂಥ ಮಕ್ಕಳನ್ನು ನಿಭಾಯಿಸುವ ಪೋಷಕರ ಸವಾಲುಗಳು ಚಿತ್ರದ ಪ್ರಮುಖ ಅಂಶಗಳು. ‘ಆಟಿಸಂಗೆ ತುತ್ತಾಗಿರುವ ಮಕ್ಕಳ ಕತೆಯನ್ನು ಹೇಳುವ ಮೂಲಕ ಜಾಗೃತಿ ಮೂಡಿಸುವುದು ಮತ್ತು ಮಕ್ಕಳ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯಗಳ ಬಗ್ಗೆಯೂ ಅರಿವು ಮೂಡಿಸುವುದು ಈ ಚಿತ್ರದ ಉದ್ದೇಶ ಆಗಿದೆ. ಮಕ್ಕಳ ಸಿನಿಮಾ ಎನ್ನುವ ಕಾರಣಕ್ಕೆ ಮಕ್ಕಳೇ ಈ ಚಿತ್ರವನ್ನು ನೋಡಬೇಕು ಎನ್ನುವ ಷರತ್ತು ಇಲ್ಲ. ಎಲ್ಲರೂ ಈ ಚಿತ್ರ ನೋಡಬೇಕು. ಸಮಾಜಕ್ಕೆ ಇಂಥ ಕತೆಗಳನ್ನು ಹೇಳುವ ಅಗತ್ಯ ಈಗ ಇದೆ. ಆಟಿಸಂ ಮಕ್ಕಳ ಬಾಳಿನಲ್ಲಿ ಸಂತೋಷ ತುಂಬುವ ಪ್ರಯತ್ನ ಇದು’ ಎನ್ನುತ್ತಾರೆ ನಿರ್ಮಾಪಕಿ ಕವಿತಾ ಸಂತೋಷ್.
Varnapatala Autism movie : ಆಟಿಸಂ ಮಗುವಿನ ಕತೆ ಹೊಂದಿರುವ ಚಿತ್ರ ವರ್ಣಪಟಲ
ಆಟೋ ರಾಜು ಅವರು ಈ ಚಿತ್ರವನ್ನು 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಮಲ್ಟಿಪ್ಲೆಕ್ಸ್‌ಗಳಿಗೆ ಹೆಚ್ಚಿನ ಗಮನ ಕೊಟ್ಟು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟುಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ವಿತರಕರಾದ ಆಟೋ ರಾಜು ಅವರದ್ದು.
ಈ ಚಿತ್ರ ಈಗಾಗಲೇ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಅವಾರ್ಡ್, 11ನೇ ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ…, ವಲ್ಡ್‌ರ್ ಪ್ರೀಮಿಯರ್ ಫಿಲ್ಮ್ ಅವಾರ್ಡ್, ರೆಡ್ ಮೂವೀ ಅವಾರ್ಡ್, ಒನಿರೋಸ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸಿನಿಮಾ ಪ್ರಶಸ್ತಿಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಚಿತ್ರವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ ನಿರ್ಮಾಪಕರಾದ ಕವಿತಾ ಸಂತೋಷ್ ಹಾಗೂ ಸರಸ್ವತಿ ಹೊಸದುರ್ಗ.

