ಬಾಲಿವುಡ್‌ ಮತ್ತೆ ಸೊರಗುತ್ತಿದೆ, ಸ್ಟಾರ್ ಡಮ್‌ ಹಾಗೂ ಪ್ಯಾನ್ ಇಂಡಿಯಾ ಪೋಬಿಯಾಗೆ ತೆಲುಗು ಚಿತ್ರರಂಗ ಸಿಕ್ಕಿಕೊಂಡಿದೆ. ನೇಟಿವಿಟಿಯಲ್ಲಿ ತಮಿಳು ಮಿಂಚುತ್ತದೆ, ಮಲಯಾಳಂ ಚಿತ್ರರಂಗ ಓಟಿಟಿಯನ್ನು ಅಳುತ್ತಿದೆ. ಕೆಜಿಎಫ್ 2 ನಂತರ ಕನ್ನಡ ಚಿತ್ರರಂಗದ ಯಶಸ್ಸಿನ ರಥ ಎಳೆಯುವ ಚಿತ್ರಗಳು ಯಾವುವು ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಜೊತೆಗೆ ನಿರೀಕ್ಷೆಯೂ ಮುಂದುವರೆದಿದೆ.

ಲಾಲ್‌ಸಿಂಗ್‌ ಛಡ್ಡಾ ಮತ್ತು ರಕ್ಷಾಬಂಧನ್‌ ಚಿತ್ರಗಳು ಬಿಡುಗಡೆ ಆಗುತ್ತಿದ್ದಂತೆ ಎಲ್ಲವೂ ಸರಿಹೋಗುತ್ತದೆ ಎಂದುಕೊಂಡಿದ್ದ ಬಾಲಿವುಡ್‌ ಮತ್ತೆ ಮಂಕಾಗಿದೆ. ಲಾಲ್‌ಸಿಂಗ್‌ಗೆ ಬಾಯ್ಕಾಟ್‌ ಭೀತಿ ಇದ್ದರೂ ಅಕ್ಷಯ್‌ಕುಮಾರ್‌ ಅಭಿನಯದ ರಕ್ಷಾಬಂಧನಕ್ಕೆ ಯಾವ ಬಂಧನವೂ ಇರಲಿಲ್ಲ. ಆದರೆ ಪ್ರೇಕ್ಷಕ ಅದರತ್ತ ತಿರುಗಿಯೂ ನೋಡಲಿಲ್ಲ.

ಅಲ್ಲಿಗೆ, ಪ್ರೇಕ್ಷಕ ಓಟಿಟಿಯನ್ನು ನಂಬಿದ್ದಾನೆ ಮತ್ತು ದಕ್ಷಿಣ ಭಾರತೀಯ ಚಿತ್ರಗಳಿಗಾಗಿ ಕಾಯುತ್ತಿದ್ದಾನೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಲಯಾಳಂ ಚಿತ್ರಗಳು ಗೆಲ್ಲುತ್ತಿವೆ. ತಮಿಳು ಸಿನಿಮಾಗಳು ನಿಲ್ಲುತ್ತಿವೆ. ತೆಲುಗು ಸದ್ಯಕ್ಕೆ ಬಿಗ್‌ಬಜೆಟ್‌ ದಾಳಿಯಿಂದ ಕುಸಿದಿದ್ದರೂ ಸಲಾರ್‌ ಚಿತ್ರದ ಬಗ್ಗೆ ಭರವಸೆ ಇಟ್ಟುಕೊಂಡಿದೆ. ಬರುವ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆ ಆಗಲಿರುವ ಮಹೇಶ್‌ಬಾಬು ಚಿತ್ರದ ಸುದ್ದಿ ಈಗಲೇ ಚಾಲ್ತಿಯಲ್ಲಿದೆ.

ಈ ಮಧ್ಯೆ ಕನ್ನಡ ಚಿತ್ರರಂಗ ಎಲ್ಲೆಡೆ ಸುದ್ದಿ ಮಾಡುತ್ತಿದೆ.

ಕೈ ಹಿಡಿದ 3 ಚಿತ್ರಗಳು

ಯಶ್‌ ನಟನೆಯ ‘ಕೆಜಿಎಫ್‌ 2’ ನಂತರ ಸಾಲು ಸಾಲು ಚಿತ್ರಗಳು ಬಂದರೂ ಯಾವುದೂ ನೆಲೆ ನಿಲ್ಲಲಿಲ್ಲ. ಕನ್ನಡ ಚಿತ್ರರಂಗವನ್ನು ಕೈ ಹಿಡಿಯಲು ಮತ್ತೆ ಪ್ಯಾನ್‌ ಇಂಡಿಯಾ ಚಿತ್ರಗಳೇ ಬೇಕಾ, ಅದೇ ಮಾಸ್‌ ಎಲಿಮೆಂಟ್‌ ಚಿತ್ರಗಳನ್ನೇ ಕೊಡಬೇಕಾ ಎನ್ನುವ ಗೊಂದಲದಲ್ಲಿದ್ದಾಗಲೇ ಯಾವುದೇ ಅಬ್ಬರವಿಲ್ಲದೆ ಬಂದು ಸದ್ದು ಮಾಡಿದ್ದು ‘777 ಚಾರ್ಲಿ’. ಹೊಡಿ- ಬಡಿ ಚಿತ್ರಗಳನ್ನು ನೋಡಲು ಮಾತ್ರ ಸೀಮಿತವಲ್ಲ. ನಾವೂ ಕೂಡ ಭಾವುಕರೇ ಎಂದು ‘777 ಚಾರ್ಲಿ’ಯನ್ನು ಪ್ರೇಕ್ಷಕರು ಅಪ್ಪಿಕೊಂಡರು. ರಕ್ಷಿತ್‌ ಶೆಟ್ಟಿಮತ್ತು ಚಾರ್ಲಿ ಹೆಸರಿನ ನಾಯಿ ಪಾತ್ರಧಾರಿ 100 ಕೋಟಿ ಕ್ಲಬ್‌ ಸೇರಿತು.

ಫ್ಯಾಂಟಸಿ ಜಗತ್ತಿನ ನೆರಳಾಗಿ ‘ವಿಕ್ರಾಂತ್‌ ರೋಣ’ ಚಿತ್ರವನ್ನು ಹೊತ್ತು ತಂದ ನಟ ಸುದೀಪ್‌, ಗಳಿಕೆಯಲ್ಲಿ ಕಿಚ್ಚು ಹತ್ತಿಸಿದರು. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಚಿತ್ರರಂಗ ಮತ್ತೆ ಗಾಂಧಿನಗರದ ಸಿನಿಮಾ ಬಜಾರ್‌ ಕಡೆ ತಿರುಗಿ ನೋಡಿತು. ಅದರಲ್ಲೂ ಮಲಯಾಳಂ ಹಾಗೂ ತಮಿಳು ಚಿತ್ರರಂಗ ‘ವಿಕ್ರಾಂತ್‌ ರೋಣ’ ಚಿತ್ರವನ್ನು ದೊಡ್ಡ ಮಟ್ಟದಲ್ಲೇ ಕೊಂಡಾಡಿತು. ‘ಕೆಜಿಎಫ್‌ 2’ ಚಿತ್ರವನ್ನು ಉತ್ತರ ಭಾರತದ ಸಿನಿಮಾ ಮಂದಿ ಮೆಚ್ಚಿಕೊಂಡಂತೆ. ಈ ಎರಡೂ ಚಿತ್ರಗಳ ಸರದಿಯನ್ನು ಮುಂದುವರಿಸಿದ್ದು ಗಣೇಶ್‌ ಅವರ ‘ಗಾಳಿಪಟ 2’. ಇದು ಪ್ಯಾನ್‌ ಇಂಡಿಯಾ ಚಿತ್ರ ಅಲ್ಲದಿದ್ದರೂ ಗಣೇಶ್‌ ಅವರಿಗೆ ಈ ಚಿತ್ರ ಓವರ್‌ಸೀಸ್‌ ಮಾರುಕಟ್ಟೆಯನ್ನು ವಿಸ್ತರಿಸಿತು. ಮೊದಲ ವಾರದಲ್ಲೇ ಷೇರು ಬರುವ ಮಟ್ಟಗೆ ಜನರಿಗೆ ತಲುಪಿತು. ಮಾಸ್‌, ಆ್ಯಕ್ಷನ್‌ ಆಚೆಗೂ ಇದ್ದ ಈ ಮೂರು ಚಿತ್ರಗಳು ಗೆದ್ದವು.

ಮುಂದಿನ ನಿರೀಕ್ಷೆಗಳು

ಈ ಮೂರು ಚಿತ್ರಗಳ ಸರದಿಯನ್ನು ಮುಂದೆ ಯಾವ ಚಿತ್ರಗಳು ಮುಂದುವರಿಸಲಿವೆ ಎನ್ನುವ ಲೆಕ್ಕಾಚಾರ ಆಗಲೇ ಹುಟ್ಟಿಕೊಂಡಿದೆ. ಆ ಮೂಲಕ ಕನ್ನಡದ ಮುಂದಿನ ಬಹು ನಿರೀಕ್ಷಿತ ಚಿತ್ರಗಳು ಯಾವುವು ಎನ್ನುವುದು ಎಲ್ಲರ ಕುತೂಹಲ. ಈ ಪೈಕಿ ಗಂಧದ ಗುಡಿ, ಕಬ್ಜ, ಮಾರ್ಟಿನ್‌, ವೇದ, ತೋತಾಪುರಿ, ರಾಘವೇಂದ್ರ ಸ್ಟೋರ್ಸ್‌, ಸಪ್ತ ಸಾಗರದಾಚೆ ಎಲ್ಲೋ, ಹೆಡ್‌ ಬುಷ್‌, ಕಾಂತಾರ, ತ್ರಿಬಲ್‌ ರೈಡಿಂಗ್‌, ಬನಾರಸ್‌... ಹೀಗೆ ಸಾಲು ಸಾಲು ಚಿತ್ರಗಳು ಬಿಡುಗಡೆ ಆಗುತ್ತಿದ್ದು, ಈ ಎಲ್ಲ ಚಿತ್ರಗಳ ಮೇಲೆ ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲೇ ನಿರೀಕ್ಷೆಗಳು ಇವೆ. ಕನ್ನಡ ಚಿತ್ರರಂಗವನ್ನು ತೀರಾ ಸೋಲಿನ ಸಿಲುಕಿಸದೆ ಹಿಂದಿನ ಚಿತ್ರಗಳ ಯಶಸ್ಸನ್ನು ಈ ಚಿತ್ರಗಳು ಮುಂದುವರಿಸಲಿವೆ ಎಂಬುದು ಸದ್ಯದ ನಂಬಿಕೆ ಮತ್ತು ಭರವಸೆ.