ಕಿರುತೆರೆಯಿಂದ ಮತ್ತೊಬ್ಬರು ಪ್ರತಿಭಾವಂತ ನಟಿ ಹಿರಿತೆರೆಗೆ ಬರುತ್ತಿದ್ದಾರೆ. ಹೆಸರು ಅಂಕಿತ ಅಮರ್. ಮಯೂರ ರಾಘವೇಂದ್ರ ನಿರ್ದೇಶನದ, ಪೃಥ್ವಿ ಅಂಬಾರ್ ನಾಯಕನಾಗಿ ನಟಿಸುತ್ತಿರುವ ‘ಅಬ ದಬ ಜಬ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ನಮ್ಮೂರ ಯುವರಾಣಿ ಧಾರಾವಾಹಿಯಲ್ಲಿ ನಟಿಸಿದ್ದ ಇವರು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ನಿರೂಪಕಿ ಆಗಿದ್ದರು. ಅವರ ಜೊತೆ ಮಾತುಕತೆ.
ಆರ್ ಕೇಶವಮೂರ್ತಿ
ನಿಮ್ಮ ಹಿನ್ನೆಲೆ ಏನು?
ನಾನು ಮೈಸೂರಿನ (Mysore) ಹುಡುಗಿ. ಮಾಸ್ಟರ್ ಡಿಗ್ರಿ ಮಾಡಿದ್ದೇನೆ. ಡಬಲ್ ಗೋಲ್ಡ್ ಮೆಡಲ್ ವಿದ್ಯಾರ್ಥಿ. ಮೆಡಿಕಲ್ ಬಯೋಕೆಮಿಸ್ಟ್ರಿ ಓದಿದ್ದೇನೆ. ನನ್ನ ತಂದೆ ಅಮರ್ ಬಾಬು, ತಾಯಿ ಆಶಾ ರಂಗಭೂಮಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಪ್ರೇರಣೆ ಮತ್ತು ನನಗೆ ಚಿಕ್ಕಂದಿನಿಂದಲೂ ಇದ್ದ ಆಸಕ್ತಿ ನನ್ನ ಬಣ್ಣದ ಜಗತ್ತಿಗೆ ಕರೆತಂದಿತು.
ಕಿರುತೆರೆಯಲ್ಲಿ ನಿಮ್ಮ ಜರ್ನಿ ಶುರುವಾಗಿದ್ದು ಹೇಗೆ?
ಕಲರ್ಸ್ ಕನ್ನಡ (Colors Kannada) ವಾಹಿನಿಯ ನಮ್ಮನೆ ಯುವರಾಣಿ (Nammane Yuvarani), ತೆಲುಗಿನಲ್ಲಿ ಶ್ರೀಮತಿ ಶ್ರೀನಿವಾಸ್ (Srimathi Srinivas) ಧಾರಾವಾಹಿ, ಇದರ ಜತೆಗೆ ಎಸ್‌ಪಿಬಿಯವರು ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋಗೆ ನಿರೂಪಕಿ ಆಗಿ. ಇವು ಕಿರುತೆರೆಯ ನನ್ನ ಹೆಜ್ಜೆ ಗುರುತುಗಳು.
ಕಿರುತೆರೆ ಪ್ರತಿಭೆಗಳು ಹಿರಿತೆರೆಗೆ ಬರೋದು ಕಡಿಮೆ ಅಲ್ವಾ?
ಕೆಲವರು ಕಿರುತೆರೆಯೇ ಸಾಕು ಅಂದುಕೊಂಡಿರುತ್ತಾರೆ. ಹಲವರಿಗೆ ಕಿರುತೆರೆ ಮತ್ತು ಹಿರಿತೆರೆಯಲ್ಲೂ ಗುರುತಿಸಿಕೊಳ್ಳಬೇಕು ಅನಿಸಿರುತ್ತದೆ. ಆದರೆ, ನನಗೆ ನಟನೆ ಮಾಡಬೇಕು. ಅದು ಕಿರುತೆರೆನಾ, ಹಿರಿತೆರೆನಾ, ರಂಗಭೂಮಿನಾ, ರಿಯಾಲಿಟಿ ಶೋನಾ (Reality Show) ಎಂಬುದು ಮುಖ್ಯವಲ್ಲ. ಬಣ್ಣ ಹಚ್ಚಬೇಕು ಎಂಬುದಷ್ಟೇ ಮುಖ್ಯ. ಹೀಗಾಗಿ ಒಳ್ಳೆಯ ಅವಕಾಶ ಅಂತ ಅಬ ಜಬ ದಬ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದೇನೆ.
![]()
ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?
ನನ್ನದು ಗಾಯಕಿ ಪಾತ್ರ. ಫಸ್ಟ್ ಲುಕ್ ಫೋಟೋ ಬಿಡುಗಡೆ ಮಾಡಿದ್ದಾರೆ. ನನ್ನ ಫೋಟೋ ಹಿಂದೆ ಲೆಜೆಂಡ್ ಎಸ್‌ಪಿಬಿ (SPB) ಅವರ ಫೋಟೋ ಇದೆ. ಚಿತ್ರದಲ್ಲಿ ನನ್ನ ಪಾತ್ರಕ್ಕೂ ಎಸ್‌ಪಿಬಿ ಅವರಿಗೂ ನಂಟಿದೆ. ನನ್ನ ಪಾತ್ರದ ಮೇಲೆ ಅವರ ನೆರಳು ಇದೆ. ಇದು ನನ್ನ ಅದೃಷ್ಟ.
ಬೀದಿಯಲ್ಲಿ ನೃತ್ಯ ಮಾಡುವ ನಿಮ್ಮದೊಂದು ವಿಡಿಯೋ ತುಂಬಾ ವೈರಲ್ ಆಗಿತ್ತಲ್ಲಾ?
ಅದು ಒಂದು ವರ್ಷದ ಹಿಂದೆ ರಾಮನವಮಿಗೆ ನಾವು ದೇವರ ಕೀರ್ತನೆ ಹಾಡಿಕೊಂಡು ಒಂದು ದೇವಸ್ಥಾನದಿಂದ ಮತ್ತೊಂದು ದೇವಸ್ಥಾನಕ್ಕೆ ಹೋಗುವಾಗ ಮಾಡಿದ ದೇವರ ನೃತ್ಯ ಅದು. ಮೈಸೂರಿನಲ್ಲಿ ನಾನು ಹೋಗುತ್ತಿರುವ ಸಂಗೀತ ಕ್ಲಾಸ್‌ನಿಂದ ಪ್ರತಿ ತಿಂಗಳು ಮಾಡುತ್ತಿದ್ದ ವಿಶೇಷ ಕಾರ್ಯಕ್ರಮ ಅದು. ಆ ವಿಡಿಯೋ ಅಷ್ಟು ವೈರಲ್ ಆಗುತ್ತದೆ ಎಂದುಕೊಂಡಿರಲಿಲ್ಲ.
'ಎದೆ ತುಂಬಿ ಹಾಡುವೆನು' ಸಂಗೀತ ರಿಯಾಲಿಟಿ ಶೋಗೆ 'ನಮ್ಮನೆ ಯುವರಾಣಿ' ನಟಿಯೇ ಆ್ಯಂಕರ್!
ಹಿರಿತೆರೆಗೆ ಬರಲು ಕಿರುತೆರೆ ಅನುಭವ ಸಾಕಾ?
ಇದರ ಜತೆಗೆ ರಂಭೂಮಿ ಕಲಾವಿದರಾಗಿರುವ ನನ್ನ ಹೆತ್ತವರು ಕೊಡುತ್ತಿರುವ ಮಾರ್ಗದರ್ಶನ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶಕ ಮಯೂರ ರಾಘವೇಂದ್ರ ಅವರು ನನ್ನ ಪಾತ್ರವನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಇದೆಲ್ಲ ಸೇರಿ ನನ್ನಿಂದ ನಟನೆ ತೆಗೆಸುತ್ತದೆ ಎಂದುಕೊಂಡಿದ್ದೇನೆ.
