ನಾಲ್ಕೈದು ದಿನಗಳಿಂದ ಹೀಗೆ ಶೂಟಿಂಗ್‌ ಮಾಡಿಕೊಳ್ಳುತ್ತಿರುವ ಈ ಚಿತ್ರದ ಹೆಸರು ‘ಜೂಟಾಟ’. ನಾಗೇಂದ್ರ ಕಾರ್ತಿಕ್‌ ಇದರ ನಿರ್ದೇಶಕರು. ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ‘ಮೈತ್ರಿ’, ‘ಕರಿಯಾ 2’, ‘ದೇವ್ರಾಣೆ’, ‘ಕಾಂಚನಾ’, ‘ಜಟ್ಟ’ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ನಾಗೇಶ್‌ ಕಾರ್ತಿಕ್‌ ಅವರದ್ದು.

ವರ್ಷಗಳ ನಂತರ ಅಡುಗೆ ಮನೆಗೆ ಕಾಲಿಟ್ಟ ನಟಿ; ಬಾಲ್ಕನಿಯಲ್ಲಿ ಕೂರೋದೇ ಹಾಬಿಯಂತೆ!

ಮೊದಲ ಬಾರಿಗೆ ‘ಜೂಟಾಟ’ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ದಡಿಯ ಗಿರಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಮನು, ಅಶೋಕ್‌, ಮೋಹನ್‌ ಜುನೇಜ, ತುಮಕೂರು ಮೋಹನ್‌ ಮುಂತಾದವರು ಚಿತ್ರದ ಮುಖ್ಯ ಪಾತ್ರಧಾರಿಗಳು. ವಿಶೇಷ ಅಂದರೆ ಈ ಚಿತ್ರದಲ್ಲಿ ಲೀಡ್‌ ಪಾತ್ರ ಮಾಡುತ್ತಿರುವುದು ಅನಿತಾ ಭಟ್‌. ಲಾಕ್‌ಡೌನ್‌ ಸಡಿಲಗೊಂಡು ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ನಂತರ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಹೋಗಿರುವ ಈ ಚಿತ್ರದ ನಿರ್ದೇಶಕರ ಮಾತು ಕೇಳಿ.

 

‘ಲಾಕ್‌ಡೌನ್‌ಗೂ ಮೊದಲೇ ನಮ್ಮ ಸಿನಿಮಾ ಸೆಟ್ಟೇರಿ ಚಿತ್ರೀಕರಣ ಮಾಡಿಕೊಳ್ಳುತ್ತಿತ್ತು. ಆದರೆ, ಲಾಕ್‌ಡೌನ್‌ ಆಗಿ ಚಿತ್ರೀಕರಣ ನಿಲ್ಲಿಸಬೇಕಾಯಿತು. ಅರ್ಧಕ್ಕೆ ನಿಂತಿರುವ ಚಿತ್ರಗಳು ಶೂಟಿಂಗ್‌ ಮಾಡಿಕೊಳ್ಳಬಹುದು ಎನ್ನುವ ಸರ್ಕಾರದ ಅನುಮತಿ ಮೇರೆಗೆ ಐದು ದಿನಗಳಿಂದ ಶೂಟಿಂಗ್‌ ಮಾಡುತ್ತಿದ್ದೇವೆ. ಚಿತ್ರೀಕರಣ ಸೆಟ್‌ನಲ್ಲಿ ತಂತ್ರಜ್ಞರು, ನಿರ್ದೇಶನ ವಿಭಾಗ ಹಾಗೂ ಕಲಾವಿದರು ಸೇರಿ 15 ಜನ ಮಾತ್ರ ಇದ್ದೇವೆ. ಸರ್ಕಾರ ಹೇಳಿರುವ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿಕೊಂಡೇ ಚಿತ್ರೀಕರಣ ಮಾಡುತ್ತಿದ್ದೇವೆ. ಇಲ್ಲಿವರೆಗೂ ನಮಗೆ ತೊಂದರೆ ಆಗಿಲ್ಲ. ಮೆಡಿಕಲ್‌ ಚೆಕಪ್‌, ಪಿಪಿಇ ಕಿಟ್‌, ಒಂದಿನಕ್ಕೆ ಒಬ್ಬರಿಗೆ ಮೂರು ಅಥವಾ ನಾಲ್ಕು ಮಾಸ್ಕ್‌ಗಳು, ಸ್ಯಾನಿಟೈಸರ್‌ ಸೇರಿದಂತೆ ಬೇರೆ ಬೇರೆ ಕಾರಣಕ್ಕೆ ಬಜೆಟ್‌ ಹೆಚ್ಚಾಗಿದೆ. ಇದು ಅನಿವಾರ್ಯ ಕೂಡ’ ಎನ್ನುತ್ತಾರೆ ನಾಗೇಶ್‌ ಕಾರ್ತಿಕ್‌.

ಚಿತ್ರೀಕರಣ ಸೆಟ್‌ಗೆ ಬರುತ್ತಿರುವ ಎಲ್ಲರು ಪರಸ್ಪರ ಪರಿಚಿತರು. ಯಾರು ಕೂಡ ಬೇರೆ ಬೇರೆ ಊರುಗಳಿಗೆ ಅಥವಾ ಬೆಂಗಳೂರಿನಲ್ಲೇ ಬೇರೆ ಪ್ರದೇಶಗಳಿಗೆ ಹೋಗಿ ಬಂದವರಲ್ಲ. ತಂತ್ರಜ್ಞರ ತಂಡ ಕೂಡ ಗೊತ್ತಿರುವವರೆ. ಯಾರಿಗೂ ಹೊಸ ಊರು ಅಥವಾ ಹೊಸ ಪ್ರದೇಶಗಳಿಗೆ ಭೇಟಿ ಕೊಟ್ಟಟ್ರಾವಲ್‌ ಹಿಸ್ಟರಿ ಇಲ್ಲ. ಆ ಧೈರ್ಯವೇ ಮೊದಲು ಶೂಟಿಂಗ್‌ ಹೋಗುವಂತೆ ಮಾಡಿದೆ. ಚಿತ್ರೀಕರಣ ಶುರುವಾಗಿ ಮುಗಿಯುವ ತನಕ ಯಾರೂ ಎಲ್ಲೂ ಹೋಗಬಾರದು ಎನ್ನುವ ಷರತ್ತು ಹಾಕಿಕೊಂಡಿದ್ದಾರೆ. ಶೂಟಿಂಗ್‌ ಶುರುವಾಗುವ ಮುನ್ನ ಎಲ್ಲರಿಗೂ ಮೆಡಿಕಲ್‌ ಚೆಕಪ್‌ ಮಾಡಿಸಲಾಗಿದೆ. ಜತೆಗೆ ಚಿತ್ರೀಕರಣ ಸೆಟ್‌ನಲ್ಲಿ ಕಡಿಮೆ ಜನ, ಯಾವುದೇ ರೀತಿಯ ರೋಮ್ಯಾಂಟಿಕ್‌ ದೃಶ್ಯಗಳು, ಅಪ್ಪಿಕೊಳ್ಳುವ ಸೀನ್ಸ್‌ ಇಲ್ಲ. ಆ ಧೈರ್ಯದ ಮೇಲೆ ಕಲಾವಿದರು ಶೂಟಿಂಗ್‌ ಸೆಟ್‌ಗೆ ಬಂದಿದ್ದಾರೆ ಎಂಬುದು ನಿರ್ದೇಶಕರ ವಿವರಣೆ.

ಈಗ ಚಿತ್ರೀಕರಣಗೊಳ್ಳುತ್ತಿರುವುದರಲ್ಲಿ ರೊಮ್ಯಾಂಟಿಕ್‌ ಸೀನ್ಸ್‌ ಇಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡೇ ಚಿತ್ರೀಕರಣ ಮಾಡಬಹುದು. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಧೈರ್ಯದಿಂದಲೇ ಚಿತ್ರೀಕರಣಕ್ಕೆ ಹೋಗಿದ್ದು. ಯಾರಿಗೂ ಇದುವರೆಗೂ ತೊಂದರೆ ಆಗಿಲ್ಲ. ಕಾಮಿಡಿ ಮತ್ತು ಆತ್ಮ ಈ ಎರಡನ್ನೂ ಬೇರೆ ರೀತಿಯಲ್ಲಿ ತೋರಿಸುವ ಪ್ರಯತ್ನ ಆ ಚಿತ್ರದಲ್ಲಿ ಮಾಡುತ್ತಿದ್ದಾರೆ ನಿರ್ದೇಶಕರು. - ಅನಿತಾ ಭಟ್‌, ನಟಿ

ಗ್ಲಾಮರ್‌, ಹಾರರ್‌ ಹಾಗೂ ಕಾಮಿಡಿ ಈ ಮೂರು ಚಿತ್ರದ ಮುಖ್ಯ ಅಂಶಗಳು. ದೆವ್ವ ಮತ್ತು ಆತ್ಮಗಳು ಹೇಗೆಲ್ಲ ಬರುತ್ತವೆ ಎಂಬುದನ್ನು ಈಗಾಗಲೇ ತೆರೆ ಮೇಲೆ ನೋಡಿದ್ದೀರಿ. ಆದರೆ, ಯಾರೂ ಊಹೆ ಮಾಡದಂತೆ ಆತ್ಮವೊಂದು ಹುಟ್ಟಿಕೊಳ್ಳುತ್ತದೆ. ಅದು ಎಲ್ಲಿಂದ, ಹೇಗೆ ಎಂಬುದು ಚಿತ್ರದ ಕತೆಯಂತೆ. ಇನ್ನೂ ಐದಾರು ದಿನಗಳ ಚಿತ್ರೀಕರಣ ಬಾಕಿಯಿದ್ದು, ಅಂದುಕೊಂಡಂತೆ ಚಿತ್ರೀಕರಣ ನಡೆಯುತ್ತಿದೆ.