ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ಬಗ್ಗೆ ನಟಿ ಐಶಾನಿ ಶೆಟ್ಟಿ ಮಾತು...

ನಟಿ ಐಶಾನಿ ಶೆಟ್ಟಿ, ಗುಳ್ಟುಚಿತ್ರದ ನಟ ನವೀನ್‌ ಶಂಕರ್‌, ಸಿದ್ದುಮೂಲಿಮನಿ, ಕರಿಸುಬ್ಬು, ಜಯಶ್ರೀ ಆರಾಧ್ಯ, ಶಾಂಭವಿ, ಯಶ್‌ ಶೆಟ್ಟಿಮುಂತಾದವರು ನಟಿಸಿರುವ ಸಿನಿಮಾ ‘ಧರಣಿ ಮಂಡಲ ಮಧ್ಯಗೊಳಗೆ’. ಈ ಚಿತ್ರದ ಬಿಡುಗಡೆಗೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಮಾಧ್ಯಮಗಳ ಮುಂದೆ ಬಂದು ತಮ್ಮ ಚಿತ್ರದ ಕುರಿತು ಹೇಳಿಕೊಂಡಿತು. ಶ್ರೀಧರ್‌ ನಿರ್ದೇಶನ ಹಾಗೂ ಓಂಕಾರ್‌, ವೀರೇಂದ್ರ ಕಂಚನ್‌, ಗೌತಮಿ ರೆಡ್ಡಿ ನಿರ್ಮಾಣ, ಕೀರ್ತನ್‌ ಪೂಜಾರಿ ಛಾಯಗ್ರಹಣ ಇರುವ ಚಿತ್ರವಿದು.

‘ನನ್ನ ಪಾತ್ರದ ಫಸ್ಟ್‌ ಲುಕ್‌ ಬಿಡುಗಡೆ ಆದಾಗಲೇ ತುಂಬಾ ಜನ ಫೋನ್‌ ಮಾಡಿ ವಿಷ್‌ ಮಾಡಿದ್ದರು. ಶಾಕುಂತಲೆ ಗೆಟಪ್‌ನಲ್ಲಿ ನನ್ನ ಪಾತ್ರದ ಲುಕ್‌ ಬಿಡುಗಡೆ ಮಾಡಲಾಗಿತ್ತು. ನಾನು ಇದುವರೆಗೂ ಮಾಡದಿರುವ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ. ಆ ಕಾರಣಕ್ಕೆ ನನಗೆ ತುಂಬಾ ವಿಶೇಷ ಮತ್ತು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಕತೆ ಕೇಳಿದಾಗಲೇ ಕನ್ನಡಕ್ಕೆ ಒಂದು ಭಿನ್ನ ಸಿನಿಮಾ ಬರುತ್ತಿದೆ ಎನ್ನುವ ನಂಬಿಕೆ ಹುಟ್ಟಿಕೊಂಡಿತು’ ಎಂದರು ಐಶಾನಿ ಶೆಟ್ಟಿ. ನಿರ್ದೇಶಕ ಶ್ರೀಧರ್‌ ಶಿಕಾರಿಪುರ ಅವರು ನಟ ಪುನೀತ್‌ರಾಜ್‌ಕುಮಾರ್‌ ಅವರನ್ನು ನೆನಪಿಸಿಕೊಂಡರು. ಯಾಕೆಂದರೆ ಅವರಿಂದಲೇ ಈ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದ್ದು. ‘ನಮ್ಮ ಚಿತ್ರದ ಮೇಲೆ ಅಪ್ಪು ಅವರ ಆಶೀರ್ವಾದ ಇರುತ್ತದೆ. ಬೇರೆ ಬೇರೆ ಜಾಗಗಳಲ್ಲಿ ನಡೆಯುವ ಹಲವು ಕತೆಗಳು ಒಂದೇ ಕಡೆ ಬಂದು ಸೇರುವ ರೀತಿಯಲ್ಲಿ ಕತೆಯ ನಿರೂಪಣೆ ಇರುತ್ತದೆ. ಇದೊಂದು ಕ್ರೈಮ್‌ ಡ್ರಾಮ ಕತೆ. ನಿರೂಪಣೆ ಮತ್ತು ಚಿತ್ರದಲ್ಲಿ ಹೇಳಿರುವ ಕ್ರೈಮ್‌ ನೆರಳು ಹೊಸದಾಗಿದೆ’ ಎಂದರು ನಿರ್ದೇಶಕರು.

ಇನ್ನೂ ನಟ ನವೀನ್‌ ಶಂಕರ್‌ ‘ಗುಳ್ಟು’ ಚಿತ್ರ ಆದ ಮೇಲೆ ಯಾವ ರೀತಿಯ ಸಿನಿಮಾಗಳಲ್ಲಿ ನಟಿಸಬೇಕು ಎಂದು ಯೋಚಿಸುತ್ತಿದ್ದಾಗ ಅವರಿಗೆ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಕತೆ ಬಂತಂತೆ. ‘ಐಶಾನಿ ಶೆಟ್ಟಿಅವರನ್ನು ಫ್ಯಾನ್‌ ಬಾಯ್‌ ಆಗಿ ನೋಡಿದ್ದೆ. ಈಗ ಅವರ ಜತೆಗೇ ನಟಿಸುವ ಅವಕಾಶ ಸಿಕ್ಕಿದೆ. ಖುಷಿ ಆಗುತ್ತಿದೆ. ಲಾಕ್‌ಡೌನ್‌, ಕರೋನಾ ಕಾರಣಕ್ಕೆ ಸಿನಿಮಾ ಬಿಡುಗಡೆ ಆಗುವುದು ತಡವಾಯಿತು. ತಡವಾದರೂ ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಆ ನಂಬಿಕೆ ಮೇಲೆ ಚಿತ್ರದ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ’ ಎಂಬುದು ನವೀನ್‌ ಶಂಕರ್‌ ಮಾತು.

ಧರಣಿ ಮಂಡಲ ಮಧ್ಯದೊಳಗೆ ಪೋಸ್ಟರ್ ರಿಲೀಸ್

    ಧರಣಿ ಮಂಡಲ ಮಧ್ಯದೊಳಗೆ ಹಾಡು ಬಿಡುಗಡೆ

    ಐಶಾನಿ ಶೆಟ್ಟಿಹಾಗೂ ನವೀನ್‌ ಶಂಕರ್‌ ಜೋಡಿಯಾಗಿ ನಟಿಸಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಮೆಲೋಡಿ ಹಾಡು ಬಿಡುಗಡೆ ಆಗಿದೆ. ವಿಜಯ್‌ ಪ್ರಕಾಶ್‌ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಗೌಸ್‌ ಪೀರ್‌ ಸಾಹಿತ್ಯ ಬರೆದಿದ್ದು, ರೋಣದ ಬಕ್ಕೇಶ್‌ ಹಾಗೂ ಕಾರ್ತಿಕ್‌ ಚೆನ್ನೋಜಿರಾವ್‌ ಸಂಗೀತ ನೀಡಿದ್ದಾರೆ. ನಿರ್ದೇಶಕ ಪೂರಿ ಜಗನ್ನಾಥ್‌ ಜತೆಗೆ ಕೆಲಸ ಮಾಡಿದ್ದ ಶ್ರೀಧರ್‌ ನಿರ್ದೇಶನದ ಚಿತ್ರ ಇದಾಗಿದೆ. ಓಂಕಾರ್‌, ವೀರೇಂದ್ರ ಕಂಚನ್‌, ಗೌತಮಿ ರೆಡ್ಡಿ ಈ ಚಿತ್ರ ನಿರ್ಮಿಸಿದ್ದಾರೆ. ಕೀರ್ತನ್‌ ಪೂಜಾರಿ ಛಾಯಗ್ರಾಹಣ ಚಿತ್ರಕ್ಕಿದೆ.