Wedding Gift: ಡಿವೋರ್ಸ್‌ನ ಮಾನಸಿಕ ಒತ್ತಡ ನಾನೂ ಅನುಭವಿಸಿದ್ದೀನಿ: ಸೋನು ಗೌಡ
ಡಿವೋರ್ಸ್ ಸಮಯದಲ್ಲಿ ಮಾನಸಿಕ ಒತ್ತಡ ಹೇಗಿರುತ್ತೆ ಅಂತ ಅನುಭವಿಸಿದವರಿಗೇ ಗೊತ್ತು. ಈ ಥರದ ಅನುಭವ ನನ್ನ ಬದುಕಲ್ಲೂ ಆಗಿದೆ. ಆದರೆ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ನಾನು ಮಾಡಿರುವ ಆಕಾಂಕ್ಷಾ ಪಾತ್ರ ನಾನಿರುವುದಕ್ಕೆ ವಿರುದ್ಧವಾದದ್ದು.
‘ಡಿವೋರ್ಸ್ ಸಮಯದಲ್ಲಿ ಮಾನಸಿಕ ಒತ್ತಡ ಹೇಗಿರುತ್ತೆ ಅಂತ ಅನುಭವಿಸಿದವರಿಗೇ ಗೊತ್ತು. ಈ ಥರದ ಅನುಭವ ನನ್ನ ಬದುಕಲ್ಲೂ ಆಗಿದೆ. ಆದರೆ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ನಾನು ಮಾಡಿರುವ ಆಕಾಂಕ್ಷಾ ಪಾತ್ರ ನಾನಿರುವುದಕ್ಕೆ ವಿರುದ್ಧವಾದದ್ದು. ಆ ಪಾತ್ರ ಮಾಡ್ತಾ ಹೀಗೂ ಯೋಚಿಸೋರು ಇದ್ದಾರಾ ಅನಿಸ್ತಿತ್ತು. ನನ್ನ ಪಾತ್ರವನ್ನು ಜನ ಬೈದರೆ ನಾನು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಅಂದುಕೊಳ್ತೀನಿ’ ಹೀಗಂದಿದ್ದು ಸೋನು ಗೌಡ.
‘ವೆಡ್ಡಿಂಗ್ ಗಿಫ್ಟ್’ ಚಿತ್ರದ ಟ್ರೇಲರ್ ಬಿಡುಗಡೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಚಿತ್ರ ಕಾನೂನಿನ ದುರ್ಬಳಕೆ ಸಂಬಂಧಿಸಿದ್ದು. ಜುಲೈ 8ಕ್ಕೆ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಟಿ ಪ್ರೇಮಾ, ‘ಈ ಚಿತ್ರದ ಕತೆ ಮೊದಲ ಬಾರಿ ಕೇಳಿದಾಗ ಮೌನ ಆವರಿಸಿಕೊಂಡಿತು. ಅಮ್ಮನ ಹತ್ರ ಚರ್ಚಿಸಿಯೇ ಸಿನಿಮಾ ಒಪ್ಪಿಕೊಳ್ಳುವ ನಾನು ಈ ಕತೆ ಕೇಳಿದ ತಕ್ಷಣವೇ ಒಪ್ಪಿಕೊಂಡೆ. ನನಗೆ ದೇಸಾಯಿ ಸರ್ ನೆನಪಾದರು. ನಾನು ಸಾಮಾನ್ಯವಾಗಿ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ವಿಕ್ರಮ್ ಪ್ರಭು ಅವರು ಕಥೆ ಹೇಳಿದ ತಕ್ಷಣ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಯಾಕೆಂದರೆ ಅವರು ಆಯ್ಕೆ ಮಾಡಿಕೊಂಡಿರುವ ಕಥೆ ಹಾಗೇ ಇದೆ. ನಾನು ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.
ವೆಡ್ಡಿಂಗ್ ಗಿಫ್ಟ್ ಟೀಸರ್ ಹೇಳತ್ತೆ ಕುಟುಂಬ ಕಲಹಕ್ಕೆ ಕಾರಣ..!?
ನಿರ್ದೇಶಕ, ನಿರ್ಮಾಪಕ ವಿಕ್ರಂ ಪ್ರಭು, ‘ಚಿತ್ರಕ್ಕೆ ಸೆನ್ಸಾರ್ ಆಗಿ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಕಳೆದ ವರ್ಷ ಇದೇ ಹೊತ್ತಿಗೆ ಚಿತ್ರ ಆರಂಭವಾಗಿತ್ತು. ಅಂದುಕೊಂಡ ಹಾಗೆ ಚಿತ್ರೀಕರಣ ಪೂರ್ಣವಾಗಿದೆ. ಮುಂದೆಯೂ ನನ್ನ ನಿರ್ದೇಶನದ ಚಿತ್ರಗಳನ್ನು ನಾನೇ ನಿರ್ಮಿಸುತ್ತೇನೆ’ ಎಂದರು. ಮಾತ್ರವಲ್ಲದೇ ನಾನು ಈ ಹಿಂದೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ 'ಲವ್' ಚಿತ್ರದಲ್ಲಿ ಕೆಲಸ ಮಾಡಿದ್ದೆ. ನಂತರ ಪುಣೆಗೆ ಶಿಫ್ಟ್ ಆದೆ. ಅಲ್ಲಿಯೇ ವಾಸವಾಗಿದ್ದೇನೆ. ಈಗ 'ವೆಡ್ಡಿಂಗ್ ಗಿಫ್ಟ್' ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದೇನೆ. ಕಳೆದ ವರ್ಷ ಜುಲೈನಲ್ಲಿ ನಮ್ಮ ಸಿನಿಮಾಗೆ ಮುಹೂರ್ತ ನೆರವೇರಿತ್ತು. ಈ ಜುಲೈನಲ್ಲಿ ತೆರೆಕಾಣುತ್ತಿದೆ. ನಿಗದಿಯಂತೆ ನಡೆಯಲು ಚಿತ್ರತಂಡದ ಸಹಕಾರ ಅಪಾರ. ಸಮಾಜಕ್ಕೆ ಉತ್ತಮ ಸಂದೇಶವುಳ್ಳ ಚಿತ್ರ ನೀಡುತ್ತಿದ್ದೇನೆ ಎಂದರು.
Wedding Gift: ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ ನಟಿ ಪ್ರೇಮಾ
ಮಲೆಯಾಳಂ ಸೇರಿ ಹಲವು ಭಾಷೆಗಳಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ನಿಶಾನ್ ನಾಣ್ಯಯ್ಯ ಚಿತ್ರದ ನಾಯಕ. ಕನ್ನಡದಲ್ಲಿ ಇದು ಇವರ ಮೊದಲ ಸಿನಿಮಾ. ಸೋನು ಗೌಡ ನಿಶಾನ್ ನಾಣಯ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಸಾರದಲ್ಲಿ ನಾನು ಎಂಬುದು ಯಾವಾಗ ಬರುತ್ತೋ ಆಗ ಇಬ್ಬರ ನಡುವಿನ ಸಂಬಂಧ ಬೇರೆ ತಿರುವು ಪಡೆಯುತ್ತೆ ಅಂತಹದ್ದೊಂದು ಸುಂದರ ಹಾಗೂ ಮನರಂಜನಾತ್ಮಕ ಕಥೆ ವೆಡ್ಡಿಂಗ್ ಗಿಫ್ಟ್‌ನಲ್ಲಿದೆ. ಉದಯ್ ಲೀಲಾ ಕ್ಯಾಮೆರಾ ನಿರ್ದೇಶನ, ಬಾಲಚಂದ್ರ ಪ್ರಭು ಸಂಗೀತ, ವಿಜೇತ ಚಂದ್ರ ಸಂಕಲನ ವೆಡ್ಡಿಂಗ್ ಗಿಫ್ಟ್ ಚಿತ್ರಕ್ಕಿದೆ. ಸ್ಯಾಂಡಲ್ ವುಡ್ ಎವರ್ ಗ್ರೀನ್ ನಟಿ ಪ್ರೇಮ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್ ಮಾಡಿರೋದು ಈ ಚಿತ್ರದ ಸ್ಪೆಷಲ್ ಸಂಗತಿಗಳಲ್ಲೊಂದು. ವಿಕ್ರಮ್ ಪ್ರಭು ಫಿಲಂಸ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ. ಇನ್ನು ಛಾಯಾಗ್ರಾಹಕ ಉದಯ್‌ಲೀಲ, ಸಂಕಲನಕಾರ ವಿಜಯ್ ಚಂದ್ರ, ವಿತರಕ ಶ್ರೀಧರ್ ಸುದ್ದಿಗೋಷ್ಠಿಯಲ್ಲಿದ್ದರು.