ದಿನೇಶ್‌ ಬಾಬು ಕಸ್ತೂರಿ ಮಹಲ್‌ ಚಿತ್ರದ ಪ್ರೋಮೋ ಬಿಡುಗಡೆ. ಏ.13ರಂದು ರಾಜ್ಯಾದ್ಯಾಂತ ಸಿನಿಮಾ ತೆರೆಗೆ ಬರುತ್ತಿದೆ. 

ದಿನೇಶ್‌ ಬಾಬು ಅವರು ತಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವುದಕ್ಕೂ ಒಂದು ಪ್ರೋಮೋ ಬಿಡುಗಡೆ ಮಾಡಿದರು. ಅದು ‘ಕಸ್ತೂರಿ ಮಹಲ್‌’. ಶಾನ್ವಿ ಶ್ರೀವಾತ್ಸವ್‌, ರಂಗಾಯಣ ರಘು, ಸ್ಕಂದ ಅಶೋಕ್‌, ವತ್ಸಲಾ ಮೋಹನ್‌, ಶ್ರುತಿ ಪ್ರಕಾಶ್‌, ನೀನಾಸಂ ಅಶ್ವಥ್‌ ಹಾಗೂ ಕಾಶಿಮಾ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಏ.13ರಂದು ರಾಜ್ಯಾದ್ಯಾಂತ ಸಿನಿಮಾ ತೆರೆಗೆ ಬರುತ್ತಿದೆ. ಹಾರರ್‌ ಸಿನಿಮಾ ಹೀಗೂ ಮಾಡಬಹುದೇ, ದೆವ್ವದ ಕತೆಯನ್ನು ತೆರೆ ಮೇಲೆ ಹೀಗೂ ತರಬಹುದು ಎನ್ನುವ ಕುತೂಹಲದಲ್ಲಿ ಮೂಡಿರುವ ಚಿತ್ರ ಇದಾಗಿದೆಯಂತೆ. ಸಿನಿಮಾ ಬಿಡುಗಡೆ ದಿನಾಂಕವನ್ನು ಹೇಳುವ ಪ್ರೋಮೋ ಬಿಡುಗಡೆ ನಂತರ ಚಿತ್ರತಂಡದ ಮಾತು.

ಭಾವನಾತ್ಮಕ ಸಂಬಂಧಗಳ ಮೂಲಕ ದೆವ್ವದ ಕತೆಯನ್ನು ಹೇಳುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ. ಅಂದರೆ ಪ್ಯಾರಾನಾರ್ಮಲ್‌ ಹಾರರ್‌, ಥ್ರಿಲ್ಲರ್‌ ಸಬ್ಜೆಕ್ಟ್ ಇಟ್ಟುಕೊಂಡು ಮಾಡಿರುವ ಚಿತ್ರ ಇದಾಗಿದೆ. ಕಸ್ತೂರಿ ಎಂದರೆ ಸುವಾಸನೆ ಎಂಬ ಅರ್ಥವನ್ನೂ ಸಹ ಕೊಡುತ್ತದೆ. ದಿನೇಶ್‌ ಬಾಬು ಅವರ ನಿರ್ದೇಶನದ 50ನೇ ಚಿತ್ರವಿದು ಎಂಬುದು ಮತ್ತೊಂದು ವಿಶೇಷ. ‘ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದ್ದು, ತುಂಬಾ ಜನಕ್ಕೆ ಇಷ್ಟವಾಗಿದೆ. ಈಗ ಪ್ರೋಮೋ ಬಂದಿದೆ. ಏ.13ರಂದು ಸಿನಿಮಾ ಬರುತ್ತಿದೆ. ಟ್ರೇಲರ್‌ನಷ್ಟೇ ಚಿತ್ರ ಕೂಡ ಇಷ್ಟವಾಗುತ್ತದೆಂಬ ನಂಬಿಕೆ ಇದೆ. ತುಂಬಾ ಕುತೂಹಲಕಾರಿಯಾಗಿರುವ ಕತೆಯನ್ನು ಈ ಚಿತ್ರದಲ್ಲಿ ನೋಡಬಹುದು. ಇಡೀ ಕತೆ ನನ್ನ ಪಾತ್ರದ ಮೂಲಕ ತೆರೆದುಕೊಳ್ಳ’ ಎಂದರು ಶಾನ್ವಿ.

ರಂಗಾಯಣ ರಘು ಮಾತನಾಡಿ ‘ನಿರ್ದೇಶಕರು ಈ ಚಿತ್ರದಲ್ಲಿ ತುಂಬಾ ಬುದ್ದಿವಂತ ದೆವ್ವವನ್ನು ತೋರಿಸಿದ್ದಾರೆ. ದೆವ್ವ ತನ್ನ ಪವರ್‌ ಬಳಸಿಕೊಂಡು ಹೇಗೆ ಕೆಲಸ ಮಾಡಿಸಿಕೊಳ್ಳುತ್ತದೆ ಎಂಬುದು ಈ ಚಿತ್ರದಲ್ಲಿ ನೋಡಬಹುದು. ಒಳ್ಳೆಯ ಕತೆ. ನನ್ನ ಪಾತ್ರ ತುಂಬಾ ವಿಶೇಷವಾಗಿದೆ’ ಎಂದರು. ಕೊಟ್ಟಿಗೆಹಾರ, ಬಾಲೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ರವೀಶ್‌ ಆರ್‌ ಸಿ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ರಮೇಶ್‌ ಕ್ರಷ್ಣ ಅವರ ಸಂಗೀತ, ಪಿಕೆಹೆಚ್‌ ದಾಸ್‌ ಅವರು ಛಾಯಾಗ್ರಾಹಣ ಮಾಡಿದ್ದಾರೆ.

ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ನಟಿ ಶಾನ್ವಿ ಶ್ರೀವಾಸ್ತವಗೆ ಗಾಯ!

ಈ ಹಿಂದೆ ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಅವರು ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದರು. ‘ನಮ್ಮ ಕುಟುಂಬಕ್ಕೆ ದಿನೇಶ್‌ ಬಾಬು ಅವರು ತುಂಬಾ ಆತ್ಮೀಯರು. ಶಿವಣ್ಣ ಅವರಿಗೆ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಹಾಗೂ ನನ್ನ ನಟನೆಯಲ್ಲಿ ‘ಅಭಿ’ ಚಿತ್ರವನ್ನು ನಿರ್ದೇಶನ ಮಾಡಿದವರು. ‘ಕಸ್ತೂರಿ ಮಹಲ್‌’ ಅವರ ನಿರ್ದೇಶನದ 50ನೇ ಸಿನಿಮಾ ಎಂದು ತಿಳಿದು ಖುಷಿ ಆಯ್ತು. ಕನ್ನಡದಲ್ಲಿ ದಿನೇಶ್‌ ಬಾಬು ಅವರು ಉತ್ತಮ ಚಿತ್ರಗಳನ್ನು ನೀಡುತ್ತಿದ್ದಾರೆ. ‘ಕಸ್ತೂರಿ ಮಹಲ್‌’ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಲಿ’ ಎಂದು ಪುನೀತ್‌ ರಾಜ್‌ಕುಮಾರ್‌ ಈ ಹಿಂದೆ ಹೇಳಿದ್ದರು.

ಇನ್ನು ಈ ಚಿತ್ರಕ್ಕೆ ‘ಕಸ್ತೂರಿ ನಿವಾಸ’ ಎನ್ನುವ ಟೈಟಲ್‌ ಇಡಲಾಗಿತ್ತು. ಆದರೆ, ಡಾ ರಾಜ್‌ಕುಮಾರ್‌ ನಟನೆಯ ಕ್ಲಾಸಿಕ್‌ ಸಿನಿಮಾಗಳಲ್ಲಿ ಒಂದಾದ ಚಿತ್ರದ ಹೆಸರನ್ನು ಬಳಸುವುದು ಸರಿಯಲ್ಲ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆದ ಪರಿಣಾಮ ಹೆಸರು ಬದಲಾಗಿದೆ. ಹೊಸ ಟೈಟಲ್‌ ಆಯ್ಕೆ ಮಾಡಿರುವ ವಿಷಯವನ್ನು ಹಿರಿಯ ನಿರ್ದೇಶಕ ಭಗವಾನ್‌ ಅವರಿಗೂ ತಿಳಿಸಿ ಚಿತ್ರ ನಿರ್ಮಾಪಕ ರವೀಶ್‌ ಆರ್‌ಸಿ ಹಾಗೂ ರುಬಿನ್‌ ರಾಜ್‌ ಆಶೀರ್ವಾದ ಪಡೆದಿದ್ದರು. 

YouTube video player