ಹೆಣ್ಣು ಮಕ್ಕಳು ಇಷ್ಟುದಿನ ಲಾಕ್‌ ಡೌನ್‌ ನಲ್ಲೇ ಇದ್ದಾರಲ್ಲ!

ಸಂಸಾರ ಎಂದು ಮನೆಯಲ್ಲಿರುವ ಹೆಣ್ಣು ಮಕ್ಕಳು ದಿನಕ್ಕೆ ಎಷ್ಟುಸಲ ಮನೆಯಿಂದ ಆಚೆ ಹೋಗುತ್ತಾರೆ, ಈ ಲಾಕ್‌ ಡೌನ್‌ ತಮ್ಮನ್ನು ಕಟ್ಟಿಹಾಕಿದೆ ಎಂದುಕೊಳ್ಳುವವರು ತಮಗೆ ಗೊತ್ತಿಲ್ಲದಂತೆ ಮಹಿಳೆಯರನ್ನ ಮನೆಯಲ್ಲೇ ಕಟ್ಟಿಹಾಕಿರುವ ಬಗ್ಗೆ ಎಂದಾದರೂ ಯೋಚಿಸಿದ್ದಾರೆಯೇ? ಖಂಡಿತ ಇಲ್ಲ. ನಾವು ಎಷ್ಟೇ ಮುಂದುವರಿದರೂ ಹೆಣ್ಣು ಮನೆಗೆ ಸೀಮಿತ ಎನ್ನುವ ಯೋಚನೆಯಲ್ಲೇ ಎಂದೋ ಮಹಿಳೆಗೆ ಈ ಸಮಾಜ ಲಾಕ್‌ಡೌನ್‌ ಜೀವನ ಅಭ್ಯಾಸ ಮಾಡಿಸಿಬಿಟ್ಟಿದೆ.

ಹೆಣ್ಣಿನ ಬಹುತೇಕ ಜೀವನ ಮನೆಗೆ ಸೀಮಿತವಾಗಿ ಎಷ್ಟೋ ದಶಕಗಳಾಗಿವೆ. ಉದ್ಯೋಗ ಮಾಡುವ ಮಹಿಳೆ ಕೂಡ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಮೇಲೂ ಆಕೆಯೇ ಸಂಸಾರ ನಿಭಾಯಿಸಬೇಕು. ಸದ್ಯದ ಈ ಲಾಕ್‌ ಡೌನ್‌ ಹಾಗೂ ಹೆಣ್ಣು ಮನೆಗೆ ಸೀಮಿತ ಎನ್ನುವ ಅನಾದಿ ಕಾಲದ ಯೋಚನೆಗೂ ತೀರಾ ಅಂಥಾ ವ್ಯತ್ಯಾಸ ಏನೂ ಇಲ್ಲ. ಪ್ರತಿ ನಿತ್ಯ ಟೈಮ್‌ ಪಾಸ್‌ ಮಾಡೋದು ಹೇಗೆ ಎಂದು ಯೋಚಿಸುವವರಿಗೆ ಈಗಲಾದರೂ ಮನೆಯೇ ಜೀವನ ಎಂದುಕೊಂಡಿರುವ ಅಥವಾ ಹಾಗೆ ಸೀಮಿತಗೊಂಡಿರುವ ಹೆಣ್ಣಿನ ಸಂಕಷ್ಟಗಳು ಅರ್ಥವಾಗಬಹುದೆನೋ.

ಲಾಕ್‌ಡೌನ್: ಬಿಡುವಿನ ಸಮಯದಲ್ಲಿ ಪ್ರಿಯಾಂಕ ಮಕ್ಕಳಿಗೆ ಏನ್ ಹೇಳ್ಕೊಡ್ತಿದ್ದಾರೆ ನೋಡಿ!

ನಮ್ಮ ಕೆಲಸ ನಾವೇ ಮಾಡುತ್ತೇವೆ

ನನಗೆ ಲಾಕ್‌ ಡೌನ್‌ ಜೀವನ ತೀರಾ ಕಷ್ಟಅಥವಾ ಒತ್ತಡ ಅನಿಸುತ್ತಿಲ್ಲ. ಸಿನಿಮಾ ಶೂಟಿಂಗ್‌ ಇಲ್ಲದೆ ಹೋದರೆ ನಾನು ಹೆಚ್ಚಿನ ಸಮಯ ಕಳೆಯುವುದೇ ಮನೆಯಲ್ಲಿ. ಈಗಂತೂ ಹೊರಗೆ ಹೋಗುವ ಯಾವ ಕೆಲಸವೂ ಇಲ್ಲದಿರುವುದರಿಂದ ಮಕ್ಕಳ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ. ಇಬ್ಬರು ಮಕ್ಕಳು, ಅತ್ತೆ- ಮಾವ, ಗಂಡ ಇದಿಷ್ಟುನನ್ನ ಪ್ರಪಂಚ. ಈಗ ಲಾಕ್‌ ಡೌನ್‌, ಈ ಪ್ರಪಂಚವನ್ನು ನನಗೆ ಮತ್ತಷ್ಟುಹತ್ತಿರ ಮಾಡಿದೆ.

ಮನೆಗೆ ಯಾರೂ ಕೆಲಸಗಾರರು ಬರುವಂತಿಲ್ಲ. ಹೀಗಾಗಿ ಎಲ್ಲ ಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತಿದ್ದೇನೆ. ನಾನು ಅಡುಗೆ ಮನೆಯಲ್ಲಿದ್ದರೆ ಮಗಳು ನನ್ನ ಜತೆ ಬಂದು ಅಡುಗೆ ಮಾಡಲು ಸಹಾಯ ಮಾಡುತ್ತಾಳೆ. ಮಗ ಅವರ ಅಪ್ಪನ ಹಾಗೆ ನಾವು ಅಡುಗೆ ಮಾಡುತ್ತಿದ್ದರೆ ಪಾತ್ರೆ ಕ್ಲೀನ್‌ ಮಾಡುತ್ತಾನೆ. ಯಾಕೆಂದರೆ ಉಪೇಂದ್ರ ಅವರು ಅಡುಗೆ ಮಾಡಲು ಹೋಗಲ್ಲ. ಆದರೆ, ನಾನು ಅಡುಗೆ ಕೆಲಸ ಮಾಡುವಾಗ ಅವರು ಸೈಲೆಂಟ್‌ ಆಗಿ ಬಂದು ಪಾತ್ರೆ ತೊಳೆಯುವಂತಹ ಕ್ಲೀನಿಂಗ್‌ ಕೆಲಸಗಳನ್ನು ಮಾಡುತ್ತಾರೆ. ಮನೆ ಕೆಲಸಕ್ಕೇ ಒಂದು ಗಂಟೆ ಬೇಕು.

ಸಂಜೆ ಆಟ, ಸಿನಿಮಾ

ಮನೆ ಕೆಲಸಗಳು ಮುಗಿದ ಕೂಡಲೇ ಮಕ್ಕಳ ಜತೆ ಆಟ ಆಡೋದು. ಸಂಜೆ ಹೊತ್ತು ನಾನು, ಉಪ್ಪಿ, ಮಕ್ಕಳು ಜತೆಯಾಗಿ ಸಿನಿಮಾ ನೋಡುತ್ತೇವೆ. ಲಾಕ್‌ ಡೌನ್‌ ಘೋಷಣೆ ಆದ ಮೇಲೆ ಎರಡು ವಾರ ಉಪೇಂದ್ರ ಅವರು ತೋಟದಲ್ಲಿ ಇದ್ದರು. ಅವರಿಗೆ ಕೃಷಿ ಕೆಲಸಗಳು ಇಷ್ಟ. ಹೀಗಾಗಿ ಈ ಬಿಡುವಿನ ಸಮಯವನ್ನು ಅವರು ಎರಡು ವಾರ ತೋಟದಲ್ಲಿ ಕಳೆದರು.

ಅಮೆರಿಕಾ ಹೋಗಬೇಕಿತ್ತು

ದಿನ ನಿತ್ಯದ ಕೆಲಸಗಳ ಹೊರತಾಗಿ ಕೊಲ್ಕತ್ತಾದಲ್ಲಿರುವ ಅಮ್ಮ, ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ತಂಗಿ ಜತೆ ಪ್ರತಿದಿನ ವಿಡಿಯೋ ಕಾಲ್‌ ಮಾಡಿ ಮಾತನಾಡುತ್ತೇನೆ. ಪ್ರತಿ ವರ್ಷ ಹಾಲಿಡೇ ಬಂದರೆ ಒಂದು ತಿಂಗಳು ನಾನು ಅಮೆರಿಕಾಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಬರುತ್ತಿದ್ದೆ. ಈ ತಿಂಗಳ 13ಕ್ಕೆ ಟಿಕೆಟ್‌ ಕೂಡ ಬುಕ್‌ ಆಗಿತ್ತು. ಆದರೆ, ಕೊರೋನಾದಿಂದ ಈ ಬಾರಿ ಹಾಲಿಡೇ ಮನೆಯಲ್ಲೇ ಕಳೆಯುತ್ತಿದ್ದೇವೆ. ಲಾಕ್‌ಡೌನ್‌ ಅನಿವಾರ್ಯ ಮತ್ತು ಅಗತ್ಯ ಎನ್ನುವುದು ಸತ್ಯ. ಲಾಕ್‌ ಡೌನ್‌ ಬಗ್ಗೆ ನಾವು ಹೇಳಿಕೊಂಡು ಧೈರ್ಯವಾಗಿದ್ದರೂ ಒಂದು ಸಣ್ಣ ಭಯವಂತೂ ಇದ್ದೇ ಇದೆ. ಆ ಭಯದಲ್ಲಿ ಜೀವನ ಮಾಡುವಂತಾಗಿದೆ. ಸಾಧ್ಯವಾದಷ್ಟುಬೇಗ ಈ ಭಯದ ವಾತಾವರಣ ಕೊನೆಯಾಗಲಿ.