ವಿಜಯ್ ರಾಘವೇಂದ್ರ ನಟನೆಯ ‘ಮಾಲ್ಗುಡಿ ಡೇಸ್’ ಚಿತ್ರಕ್ಕೆ ಬಿಡುಗಡೆಯ ಮುಹೂರ್ತ ಪಕ್ಕಾ ಆಗಿದೆ. ಫೆ.7 ರಂದು ತೆರೆಗೆ ಬರುತ್ತಿರುವ ಈ ಚಿತ್ರ, ಚಿನ್ನಾರಿಮುತ್ತನ ವಿಶಿಷ್ಟ ಗೆಟಪ್‌ನಿಂದಲೇ ಗಮನ ಸೆಳೆದಿದೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಯೂಟ್ಯೂಬ್‌ನಲ್ಲಿ ಟೀಸರ್ ನೋಡಿದವರು ಒಳ್ಳೆಯ ಅಭಿಪ್ರಾಯಗಳನ್ನೇ ಹೇಳುತ್ತಿದ್ದಾರೆ.

ಮಾಲ್ಗುಡಿ ಡೇಸ್‌ಗಾಗಿ 8 ಕೆಜಿ ತೂಕ ಇಳಿಸಿದ ಚಿನ್ನಾರಿಮುತ್ತ

ಇನ್ನೂ ‘ಊರೊಂದು ಮರೆತಂತೆ ಹಿಂದೇನೊ ಮರೆತಂತೆ’ ಎನ್ನುವ ಹಾಡು ಬಿಡುಗಡೆಯಾಗಿದ್ದು, ಇದಕ್ಕೂ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಚಿತ್ರವನ್ನು ಫೆ.7 ರಂದು ತೆರೆಗೆ ತರಲು ನಿರ್ದೇಶಕ ಕಿಶೋರ್ ಮೂಡುಬಿದ್ರೆ ನಿರ್ಧರಿಸಿದ್ದಾರೆ.

ನೆನಪು, ಬದುಕಿನ ಹೆಜ್ಜೆ ಗುರುತುಗಳ ಸುತ್ತ ಸಾಗುವ ಕತೆ ಇದಾಗಿದ್ದು, ಇಲ್ಲಿ ವಿಜಯ್ ರಾಘವೇಂದ್ರ 70 ವರ್ಷ ವಯಸ್ಸಿನ ವ್ಯಕ್ತಿಯಾಗಿ ನಟಿಸಿರುವುದು ಚಿತ್ರದ ವಿಶೇಷ. ಕೆ ರತ್ನಾಕರ್ ಕಾಮತ್ ನಿರ್ಮಾಣದ ಈ ಚಿತ್ರದ ಟ್ರೇಲರ್ ಈ ತಿಂಗಳ ಕೊನೆಯಲ್ಲಿ ಬಿಡುಗಡೆ ಆಗುತ್ತಿದೆ. ಇದರ ಬೆನ್ನಲ್ಲೇ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಮಾಡುವ ತಯಾರಿಯೂ ನಡೆಯುತ್ತಿದೆ.