'ಮುಗಿಲು ಪೇಟೆ' ಚಿತ್ರದ 100 ಕಾರ್ಮಿಕರಿಗೆ ಧನ ಸಹಾಯ ಮಾಡಿದ ನಟ ಮನೋರಂಜನ್ ರವಿಚಂದ್ರನ್.

ಕೊರೋನಾ ಎರಡನೇ ಅಲೆಯಿಂದ ಈ ವರ್ಷವೂ ಲಾಕ್‌ಡೌನ್‌ ಮಾಡುವ ಪರಿಸ್ಥಿತಿ ಎದುರಾಗಿತ್ತು. ಕಳೆದ ವರ್ಷದ ಲಾಕ್‌ಡೌನ್‌ನಿಂದಲೇ ಜನರಿನ್ನೂ ಸುಧಾರಿಸಿಕೊಂಡಿಲ್ಲ. ಅಷ್ಟರಲ್ಲಿ ಮತ್ತೊಂದು ಲಾಕ್‌ಡೌನ್‌ ಘೋಷಣೆಯಾಗಿದೆ. ಚಿತ್ರರಂಗದ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರ ಜೀವನ ತತ್ತರಿಸಿದಂತಾಗಿದೆ. ಈ ಸಂದರ್ಭದಲ್ಲಿ ಸ್ಟಾರ್ ನಟ-ನಟಿಯರು ಒಂದಾಗಿ ಜನರ ಸೇವೆಗೆ ಮುಂದಾಗಿದ್ದಾರೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅಭಿನಯದ 'ಮುಗಿಲುಪೇಟೆ' ಸಿನಿಮಾ ಈ ವರ್ಷ ಜುಲೈನಲ್ಲಿ ಬಿಡುಗಡೆ ಆಗಬೇಕಿತ್ತು. ಕೊರೋನಾ ಲಾಕ್‌ಡೌನ್‌ನಿಂದ ಬಿಡುಗಡೆ ಮುಂದೂಡಲಾಗಿದೆ. ಈ ಸಮಯದಲ್ಲಿ ನಟ ಮನೋರಂಜನ್ ತಮ್ಮ ತಂಡದ ಬೆನ್ನೆಲುಬಾಗಿ ನಿಂತಿದ್ದಾರೆ. 

'ಈ ವೈರಸ್ ಕಾರಣ ಅನೇಕ ಕುಟುಂಬಗಳು ನಲುಗಿ ಹೋಗಿವೆ. ಅವುಗಳಲ್ಲಿ ತಾವು ನಟಿಸಿರುವ ಕನ್ನಡ ಸಿನಿಮಾ ಕಲಾವಿದರ ಕುಟುಂಬಗಳೂ ಹೊರತಾಗಿಲ್ಲ. ಮನೆಯಲ್ಲಿದದ್ದರೆ ಸುರಕ್ಷಿತವಾಗಿ ಇರ್ತಿವಿ ಅಂತ ನಾವೆಲ್ಲ ಭಾವಿಸುತ್ತೇವೆ. ಆದರೆ ತಮ್ಮ ಅನೇಕ ಕಲಾವಿದ ಸ್ನೇಹಿತರು ಈ ಕೊರೋನಾ ಸಂದರ್ಭದಲ್ಲಿ ಜೀವನ ನಡೆಸುವುದಕ್ಕೆ ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಈ ಸಮಯದಲ್ಲಿ ತಮ್ಮ ಸ್ನೇಹಿತರ ನೆರವಿಗೆ ನಿಲ್ಲಬೇಕಾಗಿದ್ದು ನನ್ನ ಕರ್ತವ್ಯ. ನನ್ನ ಮುಗಿಲುಪೇಟೆ ಸಿನಿಮಾದಲ್ಲಿ ನಾನು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದೇನೆ. ನನ್ನ ಈ ಒಂದು ಪ್ರೊಜೆಕ್ಟ್‌ನಲ್ಲಿ ನೂರಕ್ಕೂ ಹೆಚ್ಚಿನ ಜನರು ಕೆಲಸ ಮಾಡುತ್ತಿದ್ದಾರೆ. ನನ್ನ ಸಿನಿಮಾಗಾಗಿ ತನುಮನವನ್ನು ಅರ್ಪಿಸಿದ್ದಾರೆ. ಈಗ ಅವರ ಸಂಕಷ್ಟ ಕಾಲದಲ್ಲಿ ಅವರ ಜೊತೆಗೆ ಕಷ್ಟಕ್ಕೆ ಹೆಗಲು ಕೊಡಬೇಕಾಗಿರುವುದು ನನ್ನ ಬವಾಬ್ದಾರಿ. ಹೀಗಾಗಿ ಮುಗಿಲುಪೇಟೆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ 5000 ರೂ. ಹಣವನ್ನು ಅವರವ ಖಾತೆಗೆ ಹಾಕುವ ನಿರ್ಣಯ ಮಾಡಿದ್ದೇನೆ. ನನ್ನವರಿಗಾಗಿ ಈ ಸಂದರ್ಭದಲ್ಲಿ ನನ್ನ ಕೈಲಾದ ಸಹಾಯವನ್ನು ಮಾಡುವ ಕಿರು ಪ್ರಯತ್ನ. ದಯವಿಟ್ಟು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ. ನಿಮ್ಮ ಕೈಲಾದಷ್ಟು ಇತರರಿಗೂ ಸಹಾಯ ಮಾಡಿ,' ಎಂದು ಮನೋರಂಜನ್ ಪತ್ರದಲ್ಲಿ ಬರೆದಿದ್ದಾರೆ.

ಸೂಚನೆ:ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona