ಅಪರೂಪದ ಹೆಮ್ಮೆಯ ಕಲಾವಿದ ದತ್ತಣ್ಣ ಬಾಲಿವುಡ್ ಸಿನಿಮಾದಲ್ಲಿ | ಅಕ್ಷಯ್ ಕುಮಾರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ ದತ್ತಣ್ಣ | ವಿಜ್ಞಾನಿ ಪಾತ್ರದಲ್ಲಿ ದತ್ತಣ್ಣ
ಬೆಂಗಳೂರು (ಮಾ. 13): ಅಪರೂಪದ ಕಲಾವಿದ ದತ್ತಣ್ಣ ಈಗ ಬಾಲಿವುಡ್‌ನ ಬಿಗ್ ಬಜೆಟ್ ಚಿತ್ರದ ಭಾಗವಾಗಿದ್ದಾರೆ. ಅಕ್ಷಯ್ ಕುಮಾರ್, ನಿತ್ಯಾ ಮೆನನ್, ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ- ಹೀಗೆ ದೊಡ್ಡ ತಾರಾಗಣ ಹೊಂದಿರುವ ಮಿಷನ್ ಮಂಗಲ್ ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಆ ಚಿತ್ರದಲ್ಲಿ ದತ್ತಣ್ಣ ಅವರು ಇಸ್ರೋ ವಿಜ್ಞಾನಿ ಪಾತ್ರವನ್ನು ಮಾಡುತ್ತಿದ್ದಾರೆ.
ಖ್ಯಾತ ನಿರ್ದೇಶಕ ಆರ್ ಭಾಲ್ಕಿ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ಸೇರಿ ನಿರ್ಮಿಸುತ್ತಿರುವ ಚಿತ್ರವಿದು. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಈ ವರ್ಷದ ಆಗಸ್ಟ್‌ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮುಂಬೈನಲ್ಲಿ ಬೆಂಗಳೂರು ಇಸ್ರೋದ ಸೆಟ್ ಅನ್ನು ನಿರ್ಮಿಸಿಕೊಂಡು ಚಿತ್ರೀಕರಣ ನಡೆಸಲಾಗಿದೆ. ದತ್ತಣ್ಣ, ಅಕ್ಷಯ್ ಕುಮಾರು ಸೇರಿ ಸುಮಾರು ಎಂಟು ಜನ ವಿಜ್ಞಾನಿಗಳ ಪಾತ್ರ ಮಾಡಿದ್ದಾರೆ. ದತ್ತಣ್ಣ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ. ಸುಮಾರು 17 ದಿನ ಇವರ ಪಾತ್ರದ ಚಿತ್ರೀಕರಣ ನಡೆದಿದೆ. ಇನ್ನೂ ಒಂದು ದಿನದ ಚಿತ್ರೀಕರಣ ಬಾಕಿ ಇದೆ.
‘ಬಾಲಿವುಡ್ ಚಿತ್ರಗಳ ವ್ಯಾಪ್ತಿ ದೊಡ್ಡದು. ಅಲ್ಲಿ ದುಡ್ಡಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬೇಕು ಅಂದ್ರೆ ಬೇಕು. ಬೆಂಗಳೂರಿನ ಇಸ್ರೋ ಮಾದರಿಯ ಸೆಟ್ ಅನ್ನು ಮುಂಬೈಯಲ್ಲೇ ನಿರ್ಮಾಣ ಮಾಡಿದ್ದಾರೆ. ಬಹಳ ಒಳ್ಳೆಯ ಕತೆ ಹೊಂದಿರುವ ಚಿತ್ರ’ ಎನ್ನುತ್ತಾರೆ ದತ್ತಣ್ಣ. ಇಸ್ರೋದ ಮಂಗಳಯಾನ ಪ್ರೊಜೆಕ್ಟ್ ಆಧರಿಸಿರುವ ಚಿತ್ರ ಇದು. ಅಕ್ಷಯ್ ಕುಮಾರ್ ಈ ಚಿತ್ರದ ಕುರಿತು ಬಹಳ ಉತ್ಸುಕತೆ ಹೊಂದಿದ್ದಾರೆ.
ಅಕ್ಷಯ್ ಕುಮಾರ್ ಅವರ ಜೀವನ ಶೈಲಿ ಕುರಿತು ದತ್ತಣ್ಣ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ‘ಅಕ್ಷಯ್ ಕುಮಾರ್ ಭಾರಿ ಶಿಸ್ತಿನ ಮನುಷ್ಯ. ಬೆಳಿಗ್ಗೆ ಏಳು ಗಂಟೆಗೆ ಸೆಟ್‌ನಲ್ಲಿ ಇರುತ್ತಾರೆ. ಯಾವುದೇ ದುರಭ್ಯಾಸಗಳಿಲ್ಲ. ರಾತ್ರಿ ಬೇಗ ಮಲಗುತ್ತಾರೆ. ಬೆಳಿಗ್ಗೆ ಬೇಗ ಏಳುತ್ತಾರೆ. ಸಿನಿಮಾ ಅಂದ್ರೆ ಭಯಂಕರ ಶ್ರದ್ಧೆ’ ಎನ್ನುತ್ತಾರೆ ದತ್ತಣ್ಣ.
