ನಟ ಪ್ರಜ್ವಲ್‌ ದೇವರಾಜ್‌ ನಟನೆಯ, ಜಡೇಶ್‌ ಕುಮಾರ್‌ ಹಂಪಿ ನಿರ್ದೇಶನದ ‘ಜಂಟಲ್‌ಮನ್‌’ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆ. ಆದರೆ, ನಮ್ಮವರು ನಮ್ಮ ಚಿತ್ರಗಳನ್ನೇ ಪ್ರೋತ್ಸಾಹ ಮಾಡುತ್ತಿಲ್ಲ. ಸಂಚಾರಿ ವಿಜಯ್‌ ಅವರು ನಟಿಸಿದ ‘ನಾನು ಅವನಲ್ಲ, ಅವಳು’ ಚಿತ್ರ ನೋಡಿ ವಿಜಯ್‌ ಅವರ ನಟನೆಗೆ ನಾನು ಫಿದಾ ಆದೆ. ನಮ್ಮ ವಿಜಯ್‌ ಅವರು ಯಾವ ನಟನಿಗೂ ಕಮ್ಮಿ ಇಲ್ಲ. ಈ ರೀತಿಯ ಸಿನಿಮಾ ಬೇರೆ ಭಾಷೆಯಲ್ಲಿ ಬಂದಿದ್ದರೆ ಅವರ ಚಿತ್ರ ನೋಡಿ ಚಪ್ಪಾಳೆ ತಟ್ಟಿದುಡ್ಡು ಕೊಟ್ಟು ಕಳುಹಿಸುತ್ತೇವೆ. ಇದು ನಿಜಕ್ಕೂ ಅಸಹ್ಯ. ನಾವು ಕನ್ನಡಿಗರು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ಆದರೆ, ಬೇರೆಯವರ ಚಿತ್ರಗಳನ್ನು ನೋಡಿ ನಮ್ಮವರನ್ನು ಬಿಟ್ಟು ಬಿಡುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.

"

ಸಂಚಾರಿ ವಿಜಯ್‌ ಅವರ ನಟನೆಯ ಬಗ್ಗೆ ಮಾತನಾಡುತ್ತಾ, ಯಾರೋ ಒಬ್ಬ ತಮಿಳು ಕಲಾವಿದ ಇದ್ದಾರೆ. ಅವರ ಹೆಸರನ್ನು ನಾನಿಲ್ಲಿ ಹೇಳಲ್ಲ. ನನಗೆ ಗೊತ್ತಿರುವ ಮಟ್ಟಿಗೆ ನಮ್ಮ ಸಂಚಾರಿ ವಿಜಯ್‌ಗಿಂತ ಆತ ದೊಡ್ಡ ಕಲಾವಿದ ಏನು ಅಲ್ಲ. ಆದರೆ, ಆತನ ಹೆಸರು ಮಾತ್ರ ಇಷ್ಟುಉದ್ದ, ಇಷ್ಟುದಪ್ಪ ಹೇಳುತ್ತಾರೆ. ನಮ್ಮವರನ್ನು ನಾವು ಮೊದಲು ಬೆನ್ನು ತಟ್ಟೋಣ. ಈಗ ಪ್ರಜ್ವಲ್‌ ದೇವರಾಜ್‌ ನಟನೆಯ ‘ಜಂಟಲ್‌ಮನ್‌’ ಚಿತ್ರವನ್ನೇ ತೆಗೆದುಕೊಳ್ಳಿ. ಇಲ್ಲಿ ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌ ಬಗ್ಗೆ ಹೇಳಿದ್ದಾರೆ. ಮಾನವ ಕಳ್ಳಸಾಗಣೆ ಮಾಫಿಯಾ ಬಗ್ಗೆ ಹೇಳಿದ್ದಾರೆ. ಚಿತ್ರದಲ್ಲಿ ಏನೋ ಹೊಸದು ಇದೆ ಅನ್ನೋ ಭಾವನೆಯನ್ನು ಚಿತ್ರದ ಟ್ರೇಲರ್‌, ಟೀಸರ್‌ ಮೂಡಿಸಿದೆ. ಹೀಗೆ ‘ನಾನು ಅವನಲ್ಲ, ಅವಳು’, ‘ಜಂಟಲ್‌ಮನ್‌’ನಂತಹ ಚಿತ್ರಗಳು ಬಂದಾಗ ಸ್ವಲ್ಪ ಅಂಡು ಬಗ್ಗಿಸಿ ನೋಡ್ರಯ್ಯ. ಆಗ ಕನ್ನಡದ ಸಿನಿಮಾಗಳ ಮಹತ್ವ ಗೊತ್ತಾಗುತ್ತದೆ ಎಂದರು.

ಬೇರೆ ಭಾಷೆಯ ನಟರ ಚಿತ್ರಗಳ ಬಗ್ಗೆ ಇಷ್ಟುಉದ್ದ ಬರೆಯುತ್ತೀರಿ. ಅವರ ಕುರಿತು ಸುದ್ದಿ ಪ್ರಸಾರ ಮಾಡುತ್ತೀರಿ. ಆದರೆ, ಅವರ ಒಂದು ಸಂದರ್ಶನ ತೆಗೆದುಕೊಂಡು ಬನ್ನಿ ನೋಡೋಣ ಎಂದು ಪ್ರಶ್ನಿಸಿದ ದರ್ಶನ್‌, ನಮ್ಮವರಿಗೆ ನಾವು ಪ್ರೋತ್ಸಾಹಿಸಿ ಬೆನ್ನು ತಟ್ಟುವವರೆಗೂ ನಾವು ಉದ್ಧಾರ ಆಗಲ್ಲ. ದಯವಿಟ್ಟು ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ಮಾಡಿ ಎಂದು ಮನವಿ ಮಾಡಿಕೊಂಡರು.

ಮಂಡ್ಯ ಹೈದ ಅಭಿಷೇಕ್‌ಗೆ ಸಾಥ್ ಕೊಟ್ಟ ಚಾಲೆಂಜಿಂಗ್ ಸ್ಟಾರ್

ದರ್ಶನ್‌ ಟಾಂಗ್‌ ಕೊಟ್ಟಿದ್ದು ಯಾವ ನಟನಿಗೆ?

ಸಂಚಾರಿ ವಿಜಯ್‌ ಅವರ ಜತೆ ಹೋಲಿಕೆ ಮಾಡಿ ದರ್ಶನ್‌ ಅವರು ಹೆಸರು ಹೇಳದೆ ಟಾಂಗ್‌ ಕೊಟ್ಟಿದ್ದು ಯಾವ ತಮಿಳು ನಟನಿಗೆ ಎಂಬ ವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿವೆ. ಸಂಚಾರಿ ವಿಜಯ್‌ ಮಂಗಳಮುಖಿಯಾಗಿ ಕಾಣಿಸಿಕೊಂಡ ‘ನಾನು ಅವನಲ್ಲ, ಅವಳು’ ಸಿನಿಮಾ ಮೆಚ್ಚಿ ಮಾತನಾಡುತ್ತಾ ಆ ತಮಿಳು ನಟನ ಬಗ್ಗೆ ಹೇಳಿದ್ದರಿಂದ ಅದು ವಿಜಯ್‌ ಸೇತುಪತಿ ಅವರಿಗೇ ದರ್ಶನ್‌ ಟಾಂಗ್‌ ಕೊಟ್ಟಿದ್ದಾರೆಂಬುದು ಸದ್ಯ ಸೋಷಿಯಲ್‌ ಮೀಡಿಯಾಗಳಲ್ಲಿ ನಡೆಯುತ್ತಿರುವ ವಾದ. ಇದಕ್ಕೆ ಪುಷ್ಟಿನೀಡುವಂತೆ, ವಿಜಯ್‌ ಸೇತುಪತಿ ಕೂಡ ‘ಸೂಪರ್‌ ಡಿಲಕ್ಸ್‌’ ಚಿತ್ರದಲ್ಲಿ ಮಂಗಳಮುಖಿ ಪಾತ್ರ ಮಾಡಿದ್ದರು. ಈ ಚಿತ್ರಕ್ಕೆ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೇ ಬಂದು ದೊಡ್ಡ ಹೆಸರು ಮಾಡಿತು. ಈಗ ದರ್ಶನ್‌ ಅವರು ಹೆಸರು ಹೇಳದೆ, ಟಾಂಗ್‌ ಕೊಟ್ಟಿದ್ದು ವಿಜಯ್‌ ಸೇತುಪತಿ ಅವರಿಗೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ.