ನಟರಾಕ್ಷಸ ಡಾಲಿ ಧನಂಜಯ ತಾಯಿಯ ಪ್ರೀತಿಯ ಬಗ್ಗೆ ಬರೆದಿರುವ ಹೃದಯಸ್ಪರ್ಶಿ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಅಮ್ಮನ ಮಮತೆ, ಮಗನ ಮೇಲಿನ ಕಾಳಜಿ ಹಾಗೂ ಭಾವನಾತ್ಮಕ ಸಾಲುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಗ ಎಷ್ಟೇ ದೊಡ್ಡವನಾದರೂ ತಾಯಿಯ ಕಣ್ಣಿಗೆ ಆತ ಯಾವಾಗಲೂ ಪುಟ್ಟ ಮಗುವೇ. ಮಗನ ಸಾಧನೆ, ಸೋಲು, ಸುಖ-ದುಃಖ ಎಲ್ಲದರಲ್ಲೂ ಬೆನ್ನಿಗೆ ನಿಲ್ಲುವ ಅಮ್ಮನ ಪ್ರೀತಿಯನ್ನು ಪದಗಳಲ್ಲಿ ಕಟ್ಟಿಕೊಡುವುದು ಅಷ್ಟು ಸುಲಭವಲ್ಲ. ಆದರೆ ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ ತಮ್ಮದೇ ಶೈಲಿಯ ಬರಹದ ಮೂಲಕ ತಾಯಿಯ ಮಮತೆಯನ್ನು ಸುಂದರವಾಗಿ ತೆರೆದಿಟ್ಟಿದ್ದಾರೆ. ಅವರ ಈ ಭಾವನಾತ್ಮಕ ಪೋಸ್ಟ್ ಇದೀಗ ಅಭಿಮಾನಿಗಳ ಮನಮುಟ್ಟಿದೆ.
ಅಮ್ಮನ ಪ್ರೀತಿಯನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟ ಡಾಲಿ!
ನಟನೆಯ ಜೊತೆಗೆ ಬರವಣಿಗೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಡಾಲಿ ಧನಂಜಯ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಬರಹಗಳ ಮೂಲಕ ಗಮನ ಸೆಳೆಯುತ್ತಾರೆ. ಈ ಬಾರಿ ಅವರು ಹಂಚಿಕೊಂಡಿರುವುದು ತಮ್ಮ ತಾಯಿಯ ನಿಷ್ಕಲ್ಮಶ ಪ್ರೀತಿ ಹಾಗೂ ಮಗನ ಮೇಲಿನ ಕಾಳಜಿಯ ಕುರಿತಾದ ಹೃದಯಸ್ಪರ್ಶಿ ಸಾಲುಗಳು. ತಮ್ಮ ಪೋಸ್ಟ್ನಲ್ಲಿ ತಾಯಿ ಎಂದಿಗೂ ಮಗನ ಕೆಲಸ, ಸಂಪಾದನೆ ಅಥವಾ ಸಾಧನೆಯ ಬಗ್ಗೆ ಪ್ರಶ್ನಿಸದೆ, ಆತ ಚೆನ್ನಾಗಿರಬೇಕು, ಯಾರಿಗೂ ತೊಂದರೆ ಕೊಡಬಾರದು ಎಂಬುದನ್ನೇ ಬಯಸುವ ಜೀವ ಎಂದು ಬಣ್ಣಿಸಿದ್ದಾರೆ.
ಮಗನಿಗೆ ಅಮ್ಮ ನೀಡುವ ಭರವಸೆಯೇ ದೊಡ್ಡ ಶಕ್ತಿ!
'ಏನ್ ಕೆಲಸ ಮಾಡ್ತಿದೀಯ ಮಗ..? ಅಂತಾ ಕೇಳ್ಳಿಲ್ಲ ನನ್ನವ್ವ, ನಿನಗನ್ಸಿದ್ ಏನಾರ ಮಾಡ್ಲ ಮಗ ಯಾರಿಗೂ ತೊಂದರೆ ಕೊಡಬೇಡ ಅಂದ್ಲು' ಎಂಬ ಸಾಲುಗಳ ಮೂಲಕ ತಮ್ಮ ತಾಯಿಯ ಸರಳ ಮನಸ್ಸನ್ನು ತೆರೆದಿಟ್ಟಿದ್ದಾರೆ. ಮಗ ದುಡಿದು ಮನೆಗೆ ಬಂದಾಗ ಅವನ ಆಯಾಸವನ್ನು ಅರ್ಥಮಾಡಿಕೊಂಡು ಪ್ರೀತಿಯಿಂದ ಕೈತುತ್ತು ನೀಡುವ ಅಮ್ಮ, ಮಗ ಸೋತು ಬಂದಾಗ ಜೋಗುಳ ಹಾಡಿ ಧೈರ್ಯ ತುಂಬುವ ಅಮ್ಮನ ಮಮತೆಯನ್ನು ಅತ್ಯಂತ ಭಾವನಾತ್ಮಕವಾಗಿ ವಿವರಿಸಿದ್ದಾರೆ. ಇನ್ನು ಮಗನ ಮದುವೆಯ ಬಗ್ಗೆಯೂ ತಾಯಿ ವ್ಯಕ್ತಪಡಿಸುವ ಆಸೆ ಹಾಗೂ ಮಗನಿಗೆ ಆಸರೆಯಾಗುವ ಕನಸನ್ನು ತಮ್ಮ ಬರಹದಲ್ಲಿ ಹಂಚಿಕೊಂಡಿದ್ದಾರೆ.
ಮತ್ತೊಂದು ಜನ್ಮದಲ್ಲೂ ಮಗಳಾಗಿ ಹುಟ್ಟಿ ನಿನ್ನ ನೋಡಿಕೊಳ್ಳುತ್ತೇನೆ!
ಡಾಲಿ ಅವರ ಪೋಸ್ಟ್ನ ಕೊನೆಯ ಸಾಲುಗಳು ಓದುಗರ ಮನಸ್ಸನ್ನು ಹೆಚ್ಚು ಕಾಡುವಂತಿವೆ. 'ನಿನ್ ಕಳ್ಕಳಕ್ ನನ್ ಕೈಯಲ್ ಆಗಕ್ಕಿಲ್ಲ ನಿನ್ನಂತವಳನ್ನೇ ನಂಗ್ ಕಟ್ತಿಯೇನೆ, ಅವ್ವ?' ಎಂದು ಮಗ ಕೇಳಿದಾಗ, ತಾಯಿ ನೀಡುವ ಉತ್ತರವೇ ಈ ಬರಹದ ಭಾವನಾತ್ಮಕ ಶಿಖರ. 'ಅಂತವಳನ್ನೇ ಕಟ್ತೀನಿ ಜೊತಿಗ್ ನಾನು ಮಗಳಾಗಿ ಹುಟ್ಟಿ ನಿನ್ನ ಹಿಂಗೆ ನೋಡ್ಕಂತೀನಿ' ಎನ್ನುವ ತಾಯಿಯ ಮಾತುಗಳನ್ನು ಹಂಚಿಕೊಂಡಿರುವ ಧನಂಜಯ್, ಅಮ್ಮನ ಪ್ರೀತಿಗೆ ಯಾವುದೇ ಹೋಲಿಕೆಯಿಲ್ಲ ಎಂಬುದನ್ನು ಮನಮುಟ್ಟುವಂತೆ ತಿಳಿಸಿದ್ದಾರೆ. ಈ ಪೋಸ್ಟ್ಗೆ ಅಭಿಮಾನಿಗಳು ಹೃದಯದ ಎಮೋಜಿಗಳ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 'ಸುಂದರ ಸಾಲುಗಳು, ಆಳವಾದ ಅರ್ಥ ಬಹಳ ಇಷ್ಟವಾಯಿತು', 'ತುಂಬಾ ಚೆನ್ನಾಗಿ ಬರೆದಿದ್ದೀರಿ' ಎಂಬಂತಹ ಮೆಚ್ಚುಗೆಯ ಕಾಮೆಂಟ್ಗಳು ಹರಿದುಬರುತ್ತಿವೆ.
ಸಿನಿಮಾ ಬ್ಯುಸಿ ನಡುವೆಯೂ ಕುಟುಂಬಕ್ಕೆ ಸಮಯ ನೀಡುವ ಡಾಲಿ!
ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕುಟುಂಬಕ್ಕೆ ಸಮಯ ನೀಡುವುದರಲ್ಲಿ ಡಾಲಿ ಧನಂಜಯ ಹಿಂದೆ ಬಿದ್ದಿಲ್ಲ. ತಮ್ಮ ವೈಯಕ್ತಿಕ ಜೀವನದ ಸುಂದರ ಕ್ಷಣಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಪತ್ನಿ ಧನ್ಯತಾ ಅವರೊಂದಿಗೆ 2025ರ ಫೆಬ್ರವರಿ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಧನಂಜಯ್, ಇದೇ ವರ್ಷದ ಮೇ ತಿಂಗಳಲ್ಲಿ ತಂದೆಯಾಗಿದ್ದಾರೆ. ತಮ್ಮ ಮುದ್ದಿನ ಮಗನಿಗೆ 'ಎರೆಯ' ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕುಟುಂಬದೊಂದಿಗೆ ಫೋಟೋ ಹಂಚಿಕೊಂಡು 'ಹಬ್ಬ, ಸಂಭ್ರಮ, ಕುಟುಂಬ' ಎಂದು ಬರೆದುಕೊಂಡಿದ್ದರು. ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅವರ ಗುಣ ಅಭಿಮಾನಿಗಳಿಗೂ ಇಷ್ಟವಾಗಿದೆ.
'ಅಣ್ಣ ಫ್ರಂ ಮೆಕ್ಸಿಕೋ' ಚಿತ್ರದ ಪ್ರಚಾರದಲ್ಲಿ ಡಾಲಿ ಬ್ಯುಸಿ!
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಧನಂಜಯ ಸದ್ಯ 'ಅಣ್ಣ ಫ್ರಂ ಮೆಕ್ಸಿಕೋ' ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಶಂಕರ್ ಗುರು ನಿರ್ದೇಶನದ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ, ಉಮಾಶ್ರೀ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಅದರಲ್ಲೂ 'ಮಾಸಿಗೂ ಅಣ್ಣನೇ ನಿಮ್ ಬಾಸಿಗೂ ಅಣ್ಣನೇ' ಹಾಡು ಸದ್ದು ಮಾಡುತ್ತಿದೆ. ಐರಾ ಫಿಲಂಸ್ ಮತ್ತು ರಾಯಲ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಡಿಸೆಂಬರ್ 24ರಂದು ತೆರೆಗೆ ಬರಲು ಸಜ್ಜಾಗಿದೆ. ಸದ್ಯ ತೆರೆಯ ಮೇಲೆ ವಿಭಿನ್ನ ಪಾತ್ರಗಳ ಮೂಲಕ ರಂಜಿಸುವ ಡಾಲಿ ಧನಂಜಯ, ಈ ಬಾರಿ ತಮ್ಮ ಬರಹದ ಮೂಲಕ ಅಮ್ಮನ ಪ್ರೀತಿಯ ಆಳವನ್ನು ಅಭಿಮಾನಿಗಳಿಗೆ ನೆನಪಿಸಿದ್ದಾರೆ. ಅದಕ್ಕೇ ಇರಬೇಕು, ಅವರ ಈ ಪೋಸ್ಟ್ ಸಿನಿಮಾ ಸುದ್ದಿಗಳಿಗಿಂತಲೂ ಭಾವನೆಗಳ ಮೂಲಕ ಹೆಚ್ಚು ಗಮನ ಸೆಳೆಯುತ್ತಿದೆ.














