'ಜವಾಬ್ದಾರಿ ಬಿಟ್ಟು ಬಿಡಿ' ಬುಲೆಟ್ ಕುಟುಂಬಕ್ಕೆ ದರ್ಶನ್ ಅಭಯ
ಸ್ಯಾಂಡಲ್ ವುಡ್ ಹಿರಿಯ ಹಾಸ್ಯನಟ ಬುಲೆಟ್ ಪ್ರಕಾಶ್ ನಿಧನ/ ಬುಲೆಟ್ ಮಗಳ ಮದುವೆ ಜವಾಬ್ದಾರಿ ನನ್ನದು ಎಂದ ದರ್ಶನ್/ 300ಕ್ಕೂ ಅಧಿಕ ಚಿತ್ರದಲ್ಲಿ ಬುಲೆಟ್ ಅಭಿನಯ
'ಈಗ ನನ್ನ ಗೆಳೆಯಾನೊ ಅಲ್ವೋ.. ಆದರೆ ಒಂದು ಕಾಲದ ಗೆಳೆಯ ಯಾರು ಕೊಟ್ರೂ ಬಿಟ್ರೂ ಬುಲೆಟ್ ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ನನ್ನದು' ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತು. ಅಭಯ. ಹಾಸ್ಯನಟ ಬುಲೆಟ್ ಪ್ರಕಾಶ್ ಸಿನಿ ಪಯಣ ನಿಲ್ಲಿಸಿದ್ದಾರೆ. ಹಾಸ್ಯದ ನೆನಪೊಂದನ್ನು ಬಿಟ್ಟು ಅಗಲಿದ್ದಾರೆ.
ಲಿವರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರಿಗೆ 44 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅವಕಾಶಗಳು ಸಿಗದೇ ಬುಲೆಟ್ ಮಾನಸಿಕವಾಗಿ ಜರ್ಜರಿತರಾಗಿದ್ದರು. ಆದರೆ ಈಗ ಚಾಲೆಂಜಿಂಗ್ ಸ್ಟಾರ್ ತಮ್ಮ ಎಂದಿನ ಸಹಕಾರ ಮಾತನ್ನು ಆಡಿದ್ದಾರೆ.
ಹಾಸ್ಯಲೋಕ ಅಗಲಿದ ಪ್ರಕಾಶ, ಅದೊಂದು ಆಸೆ ಹಾಗೆ ಉಳಿದೋಯ್ತು!
ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಹಲವಾರು ಚಿತ್ರಗಳಲ್ಲಿ ಜತೆಯಾಗಿಯೇ ಕಾಣಿಸಿಕೊಂಡವರು. ದರ್ಶನ್ ಸಿನಿಮಾದಲ್ಲಿ ಬುಲೆಟ್ ಗೆ ಒಂಧು ಪಾತ್ರ ಫಿಕ್ಸ್ ಎಂಬ ಮಾತು ಇತ್ತು. ಸುಂಟರಗಾಳಿ ಚಿತ್ರದಲ್ಲಿ ಸಾಧು ಕೋಕಿಲ, ದರ್ಶನ್ ಮತ್ತು ಬುಲೆಟ್ ಕಾಂಬಿನೇಶನ್ ಯಾರು ತಾನೆ ಮರೆಯಲು ಸಾಧ್ಯ.
ಬುಲೆಟ್ ಪ್ರಕಾಶ್ ಪತ್ನಿ ಹಾಗೂ ಒಬ್ಬ ಮಗ ಹಾಗೂ ಮಗಳನ್ನು ಅಗಲಿದ್ದಾರೆ. ಜತೆಗೆ ಕನ್ನಡದ ಅಪಾರ ಸಿನಿ ಅಭಿಮಾನಿಗಳಿಂದಲೂ ದೂರವಾಗಿದ್ದಾರೆ. ದೇಹದ ತೂಕ ಇಳಿಸಿಕೊಳ್ಳಬೇಕೆಂದು ನಾನಾ ರೀತಿಯ ಸಾಹಸ ಮಾಡಿದ್ದ ಬುಲೆಟ್, ಅದಕ್ಕೆ ಚಿಕಿತ್ಸೆಯನ್ನೂ ಪಡೆದಿದ್ದರು. ಆಗಲೇ ಅವರ ಆರೋಗ್ಯ ಹದಗೆಡಲು ಆರಂಭವಾಗಿತ್ತು. ಬುಲೆಟ್ ಅಂತಿಮ ಕಾರ್ಯಗಳ ಬಗ್ಗೆ ಕುಟುಂಬಸ್ಥರು ಏನೂ ಹೇಳಿಲ್ಲ.
ಅಗಲಿದ ಕನ್ನಡದ ಹಾಸ್ಯನಟ ಬುಲೆಟ್ ಪ್ರಕಾಶ
ಬುಲೆಟ್ ಚಲಾಯಿಸುತ್ತಿದ್ದ ಕಾರಣ ಪ್ರಕಾಶ್ ಅವರಿಗೆ ಬುಲೆಟ್ ಎಂಬ ಅನ್ವರ್ಥ ನಾಮ ಸೇರಿಕೊಂಡಿತ್ತು. ರಂಗಭೂಮಿಯಿಂದ ಚಿತ್ರರಂಗ ಪ್ರವೇಶಿಸಿದ ಬುಲೆಟ್, ಸ್ಯಾಂಡಲ್‌ವುಡ್ ಹೆಸರಾಂತ ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್-2ರಲ್ಲಿ 8 ದಿನಗಳ ಕಾಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಂತರ ಬುಲೆಟ್ ಪ್ರಕಾಶ್ ಜಾಂಡೀಸ್‌ನಿಂದ ಬಳಲುತ್ತಿದ್ದರು, ಸರಿಯಾಗಿ ಚಿಕಿತ್ಸೆ ಪಡೆಯದ ಕಾರಣ ಆರೋಗ್ಯದಲ್ಲಿ ಇನ್ನಷ್ಟು ಏರು-ಪೇರು ಕಾಣಿಸಿಕೊಂಡಿತ್ತು. ದಿನೇ ದಿನೇ ಆರೋಗ್ಯ ಸಮಸ್ಯೆಗಳು ಹೆಚ್ಚಾದ ಕಾರಣ ಚಿತ್ರರಂಗದಲ್ಲಿ ನಟಿಸುವ ಅವಕಾಶ ಕಳೆದುಕೊಂಡರು. ಇದರ ಪರಿಣಾಮ ಮಾನಸಿಕವಾಗಿಯೂ ಜರ್ಜರಿತರರಾಗಿದ್ದರು ಎನ್ನಲಾಗಿದೆ.