‘ಮುದ್ದು ಮನಸೇ’, ‘ಪತಿ ಬೇಕು ಡಾಟ್ ಕಾಮ್’, ‘ವಿರಾಟ ಪರ್ವ’ ಮೊದಲಾದ ಚಿತ್ರಗಳ ನಾಯಕ, ಯುವರತ್ನ ಚಿತ್ರದ ವಿಲನ್ ಅರು ಗೌಡ ಇದೀಗ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡುವ ಸರ್ಪ್ರೈಸ್ ವ್ಯಾನ್ ನೀಡಿದ್ದಾರೆ.
ಜೊತೆಗೆ ಅರುಣ್ ಗೌಡ ಫೌಂಡೇಶನ್ ಮೂಲಕ ಆಕ್ಸಿಜನ್ ಸಪ್ಲೈ, ಅವಶ್ಯಕತೆ ಇರುವವರಿಗೆ ಫುಡ್ ಕಿಟ್ ಪೂರೈಸುತ್ತಿದ್ದಾರೆ. ಬಿಬಿಎಂಪಿಯ ಸಹಕಾರದೊಂದಿಗೆ ಈ ಹೆಜ್ಜೆ ಇಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಹಾಯ ಮಾಡಿರೋ ಫೋಟೋ ಪೋಸ್‌ಟ್ ಮಾಡಿದ್ರೆ ಬಹಳ ಮಂದಿ ವಿರೋಧಿಸುತ್ತಾರೆ. ಆದರೆ ಅಂಥವರು ಅಪ್ಪಿತಪ್ಪಿಯೂ ಸಹಾಯ ಮಾಡಲ್ಲ. ಬರೀ ವಿರೋಧಿಸುವುದರಲ್ಲೇ ಕಾಲ ಕಳೆಯುತ್ತಾರೆ.- ಅರುಣ್ ಗೌಡ, ನಟ
ತಮ್ಮ ಈ ಕೆಲಸದ ಬಗ್ಗೆ ಮಾತನಾಡುವ ಅರು ಗೌಡ, ‘ನನಗೆ ಮೊದಲಿಂದಲೇ ಕಷ್ಟದಲ್ಲಿರುವವರಿಗೆ ಕಿಂಚಿತ್ತಾದರೂ ಸಹಾಯ ಮಾಡಬೇಕೆಂಬ ತುಡಿತ ಇತ್ತು. ನಾನು ಎಲ್ಲರಿಗೂ ಹೇಳೋದು, ನಿಮ್ಮ ಸಂಪಾದನೆಯ ಒಂದು ಭಾಗವನ್ನು ಇಂಥಾ ಸಹಾಯಕ್ಕೆ ಮೀಸಲಿಡಿ. ಆಗ ನಿಮ್ಮ ಹಣಕ್ಕೂ ಮೌಲ್ಯ ಬರುತ್ತದೆ. ಹಸಿದ ಹೊಟ್ಟೆಗಳೂ ತಂಪಾದ ಹಾಗಾಗುತ್ತೆ. ನಮ್ಮ ಈ ಕೆಲಸವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್‌ಟ್ ಮಾಡೋದನ್ನ ಕೆಲವರು ವಿರೋಧಿಸುತ್ತಿದ್ದಾರೆ. ಆದರೆ ನನಗಿದು ತಪ್ಪು ಅನಿಸೋದಿಲ್ಲ. ಬದಲಿಗೆ ಇದನ್ನು ನೋಡಿ ಇನ್ನೊಂದಿಷ್ಟು ಜನ ಸಹಾಯಕ್ಕೆ ಮುಂದೆ ಬರಲಿ ಅಂತನಿಸುತ್ತದೆ’ ಅಂತಾರೆ.
ಸಿನಿಮಾದ ಜೊತೆಗೆ ಬ್ಯುಸಿನೆಸ್‌ನಲ್ಲೂ ತೊಡಗಿಸಿಕೊಂಡಿರುವ ಅರು ಗೌಡ ಸದ್ಯಕ್ಕೆ ವಿರಾಟ ಪರ್ವ ಚಿತ್ರದಲ್ಲಿ ನಟಿಸಿದ್ದಾರೆ. ತಮಿಳು ನಟಿ ಅಭಿನಯ ನಾಯಕಿ. ಅನಂತ್ ಶೈನ್ ಚಿತ್ರದ ನಿರ್ದೇಶಕ. ಸುನಿಲ್ ರಾಜ್ ನಿರ್ಮಾಪಕರು.
