ನಟ ಅದಿತ್ಯ ಅವರಿಗೆ ಸಾಕಷ್ಟುಭರವಸೆ ನೀಡಿರುವ ಸಿನಿಮಾ ‘ಮುಂದುವರಿದ ಅಧ್ಯಾಯ’. ಇಲ್ಲಿವರೆಗೂ ಮಾಡಿರುವ ಚಿತ್ರಗಳ ಪೈಕಿ ಈ ಚಿತ್ರವೇ ಒಂದು ವಿಶೇಷ ಎಂಬುದು ಚಿತ್ರತಂಡದ ಮಾತು. ಅಂದಹಾಗೆ ಶೂಟಿಂಗ್‌ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾ ಲಾಕ್‌ಡೌನ್‌ ಮುಕ್ತಾಯವಾದ ಕೂಡಲೇ ಚಿತ್ರಮಂದಿರಗಳಿಗೆ ಬರಲು ತಯಾರಿ ಮಾಡಿಕೊಂಡಿದೆ. ಈ ನಡುವೆ ಚಿತ್ರವನ್ನು ತಂಡದ ಜತೆ ಚಿತ್ರದ ನಾಯಕ ಅದಿತ್ಯ ನೋಡಿದ್ದಾರೆ.

ಅದಿತ್ಯ ಹೇಳುವುದೇನು?

ಲಾಕ್‌ಡೌನ್‌ನಿಂದ ಸಾಕಷ್ಟುಬಿಡುವು ಸಿಕ್ಕಿತು. ಹೀಗಾಗಿ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿದ್ದ ನನ್ನ ಚಿತ್ರವನ್ನು ನೋಡಬೇಕನಿಸಿ ಚಿತ್ರತಂಡದ ಜತೆ ನೋಡಿದೆ. ನನಗೆ ನನ್ನ ಸಿನಿಮಾ ಸಪ್ರೈಸ್‌ ಅನಿಸಿತು. ಇಲ್ಲಿವರೆಗೂ ಮಾಡಿಕೊಂಡು ಬಂದಿರುವ ಚಿತ್ರಗಳದ್ದೇ ಒಂದು ಹಂತವಾದರೆ, ಈ ಚಿತ್ರದ್ದೇ ಮತ್ತೊಂದು ಹಂತ. ರೆಗ್ಯೂಲರ್‌ ಆದಿತ್ಯ ಸಿನಿಮಾ ಅಲ್ಲ ಇದು.

ಕತೆ, ಇಲ್ಲಿನ ಪಾತ್ರಗಳು, ಎಲ್ಲವನ್ನೂ ನಿರ್ದೇಶಕ ಬಾಲು ಚಂದ್ರಶೇಖರ್‌ ನಿಭಾಯಿಸಿರುವ ರೀತಿಗೆ ಖುಷಿ ಆಯ್ತು. ನನಗೆ ಇಷ್ಟವಾಗಿದ್ದು, ಕ್ರೈಮ್‌ ನೆರಳಿನಲ್ಲಿ ಹೇಳುವುದಕ್ಕೆ ಹೊರಟಿರುವ ಕತೆ. ನನ್ನ ಚಿತ್ರಗಳಲ್ಲೂ ಇಂಥದ್ದೊಂದು ಕತೆ ಹೇಳಬಹುದು ಅನ್ನೋದಕ್ಕೆ ‘ಮುಂದುವರೆದ ಅಧ್ಯಾಯ’ವೇ ಸಾಕ್ಷಿ. ತಾಂತ್ರಿಕವಾಗಿಯೂ ಸಿನಿಮಾ ಚೆನ್ನಾಗಿದೆ. ಬಿಡುಗಡೆಗೂ ಮುನ್ನವೇ ನೋಡುವಂತೆ ಕಾತುರ ಹುಟ್ಟಿಸಿದ ಸಿನಿಮಾ ಇದು.

ಐ ಆ್ಯಮ್ Back: ಅದಿತ್ಯ ಅಧ್ಯಾಯ ಮುಂದುವರೆದಿದೆ!

ಇನ್ನೂ ಸೆನ್ಸಾರ್‌ ಆಗಬೇಕಿದೆ ಅಷ್ಟೆ. ಲಾಕ್‌ಡೌನ್‌ಗೂ ಮೊದಲೇ ಸೆನ್ಸಾರ್‌ ಮಂಡಳಿಗೆ ಕಳಿಸಿದ್ದು, ಸೆನ್ಸಾರ್‌ಗೆ ಅನುಮತಿ ಸಿಕ್ಕ ಕೂಡಲೇ ಆದಷ್ಟುಬೇಗ ಸೆನ್ಸಾರ್‌ ಮಾಡಿಕೊಂಡು ಚಿತ್ರಮಂದಿರಗಳಿಗೆ ಬರುತ್ತೇವೆ. ಟೀಸರ್‌ ಹಾಗೂ ಚಿತ್ರದ ಟ್ರೇಲರ್‌ ಯಾವ ರೀತಿಯ ಕುತೂಹಲ ಮೂಡಿಸಿತ್ತೋ ಅದೇ ಕುತೂಹಲದಿಂದ ಇಡೀ ಚಿತ್ರವನ್ನು ನೋಡಬಹುದು ಎಂಬುದು ನಟ ಅದಿತ್ಯ ಅವರ ಮಾತು.

ಕಣಜ ಎಂಟರ್‌ ಪ್ರೈಸಸ್‌ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಆಶಿಕ ಸೋಮಶೇಖರ್‌, ಜೈಜಗದೀಶ್‌, ಮುಖ್ಯಮಂತ್ರಿ ಚಂದ್ರು, ಅಜಯ್  ರಾಜ್‌, ವಿನಯ್,  ಕೃಷ್ಣಸ್ವಾಮಿ, ಸಂದೀಪ್‌ ಕುಮಾರ್‌, ಚಂದನ ಗೌಡ ಮುಂತಾದವರು ನಟಿಸಿದ್ದಾರೆ. ಒಂದು ಯುವ ತಂಡ, ನೈಟ್‌ ಔಟ್‌, ಪಾರ್ಟಿ ಮತ್ತು ಕೊಲೆ. ಇದರ ಹಿಂದಿನ ನೆರಳು ಹೀಗೆ ಹತ್ತಾರು ತಿರುವುಗಳಲ್ಲಿ ಸಾಗುವ ಈ ಚಿತ್ರಕ್ಕೆ ಅನೂಪ್‌ ಸೀಳಿನ್‌ ಹಿನ್ನೆಲೆ ಸಂಗೀತ, ಜಾನಿ ಹಾಗೂ ನಿತಿನ್‌ ಸಂಗೀತವಿದೆ. ದಿಲೀಪ್‌ ಚಕ್ರವರ್ತಿ ಕ್ಯಾಮೆರಾ ಹಿಡಿದ್ದಾರೆ.